AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾರಕಕ್ಕೇರಿದ ಯಶ್ ತಾಯಿ ಸೈಟ್ ವಿವಾದ: ಕೈಕೈ ಮಿಲಾಯಿಸುವ ಹಂತಕ್ಕೆ, ಏನಿದು ತಗಾದೆ?

ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ದೇವರಾಜ್ ನಡುವೆ ಹಾಸನದ ನಿವೇಶನ ವಿವಾದ ವಿಕೋಪಕ್ಕೆ ತಲುಪಿದೆ. ಕಾಂಪೌಂಡ್ ನಿರ್ಮಾಣ ವಿಚಾರದಲ್ಲಿ ಜಟಾಪಟಿ ನಡೆದು, ಪೊಲೀಸರ ಮಧ್ಯಪ್ರವೇಶದ ನಂತರ ಪ್ರಕರಣ ಮತ್ತೆ ಠಾಣೆ ಮೆಟ್ಟಿಲೇರಿದೆ. ಸದ್ಯ ಇಡೀ ಪ್ರಕರಣ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ತಾರಕಕ್ಕೇರಿದ ಯಶ್ ತಾಯಿ ಸೈಟ್ ವಿವಾದ: ಕೈಕೈ ಮಿಲಾಯಿಸುವ ಹಂತಕ್ಕೆ, ಏನಿದು ತಗಾದೆ?
ಪುಷ್ಪಾ, ದೇವರಾಜ್Image Credit source: tv9 kannada
ಮಂಜುನಾಥ ಕೆಬಿ
| Edited By: |

Updated on:Feb 01, 2026 | 8:10 PM

Share

ಹಾಸನ, ಫೆಬ್ರವರಿ 01: ನಟ ಯಶ್ ತಾಯಿ ಪುಷ್ಪಾ (Pushpa) ಹಾಗೂ ದೇವರಾಜ್ (Devaraj) ಎಂಬುವವರ ನಡುವೆ ನಡೆಯುತ್ತಿರುವ ಸೈಟ್ ಸಂಘರ್ಷ ಇಂದು ವಿಕೋಪಕ್ಕೆ ತಿರುಗಿತ್ತು. ತಮ್ಮ ನಿವೇಶನದಲ್ಲಿ ಹಾಕಿದ್ದ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ಕಾಂಪೌಂಡ್ ಮರು ನಿರ್ಮಾಣ ಮಾಡಲು ಮುಂದಾಗಿದ್ದ ಯಶ್ ತಾಯಿ ಜೊತೆಗೆ ದೇವರಾಜ್ ಜಟಾಪಟಿಗಿಳಿದಿದ್ದು, ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದು, ಸೈಟ್ ಫೈಟ್ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಆರು ವರ್ಷಗಳ ಹಿಂದೆ ನಾನು ಖರೀದಿಸಿದ ಜಾಗ ಎಂದು ಪುಷ್ಪ ಹೇಳುತ್ತಿದ್ದರೆ 1965ರಿಂದ ಸ್ವಾಧೀನದಲ್ಲಿರುವ ಜಾಗ ನಮ್ಮದು ಎನ್ನುತ್ತಿದ್ದಾರೆ ದೇವರಾಜ್. ನಿವೇಶನ ಮಾಲೀಕತ್ವದ ವಿಚಾರ ಮತ್ತೆ ಬೀದಿ ರಂಪಕ್ಕೆ ಕಾರಣವಾಗಿದ್ದು, ಮೂಲ ಮಾಲೀಕರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

ಸೈಟ್​​ ಸಂಘರ್ಷ

ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಹಾಗೂ ನಿವೇಶನದ ಜಿಪಿಎ ಹೋಲ್ಡರ್ ಎಂದು ಹೇಳಿಕೊಂಡಿರುವ ದೇವರಾಜ್ ನಡುವಿನ ಸಂಘರ್ಷ ಇಂದು ಬೇರೆಯದೇ ಹಂತಕ್ಕೆ ಹೋಗಿತ್ತು. ನನ್ನ ಅನುಮತಿ ಇಲ್ಲದೆ ನನಗೆ ನೊಟೀಸ್ ನೀಡದೆ ನಮ್ಮ ನಿವೇಶನದ ಕಾಂಪೌಂಡ್ ಕೆಡವಲಾಗಿದೆ ಎಂದು ಆರೋಪಿಸುತ್ತಿರುವ ಯಶ್ ತಾಯಿ ಪುಷ್ಪಾ, ಇಂದು ಕಾರ್ಮಿಕರ ನೆರವಿನಿಂದ ಮತ್ತೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು.

ಇದನ್ನೂ ಓದಿ: ಭೂ ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ

ಈ ವಿಚಾರ ತಿಳಿದು ಸ್ಥಳಕ್ಕೆ ಓಡೋಡಿ ಬಂದ ದೇವರಾಜ್ ಹಾಗೂ ಅವರ ಕಡೆಯವರು ಕೆಲಸಕ್ಕೆ ಅಡ್ಡಿ ಪಡಿಸಿದರು. ಈ ವೇಳೆ ಅಕ್ಷರಶಃ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಸ್ಪರ ಏಕ ವಚನದಲ್ಲೇ ಪುಷ್ಪಾ ಹಾಗೂ ದೇವರಾಜ್ ನಡುವೆ ಮಾತಿನ ಚಕಮಕಿ ನಡೆಯಿತು. ಸೈಟ್ ಮಾಲಿಕ ನಾನು ಯಾವುದೇ ಕಾರಣಕ್ಕೆ ಕಾಂಪೌಂಡ್ ನಿರ್ಮಾಣ ಮಾಡಕೂಡದು ಎಂದು ದೇವರಾಜ್ ಅಡ್ಡಿ ಪಡಿಸಿದರು. ನನ್ನ ಸೈಟ್​ನಲ್ಲಿ ಕೆಲಸ ಮಾಡುವುದನ್ನು ತಡೆಯುವುದಕ್ಕೆ ನೀನ್ಯಾರು ಎಂದು ತಮ್ಮದೇ ಸ್ಟೈಲ್​​ನಲ್ಲಿ ಅವಾಜ್​​​ ಹಾಕಿದ ಪುಷ್ಪಾ, ಇದು ತಮ್ಮ ಸೈಟ್ ಎಂದು ವಾದಿಸಿದರು. ಆದರೆ ಪರಿಸ್ಥಿತಿ ಕೈ ಮೀರುವ ಮೊದಲೇ ಸ್ಥಳಕ್ಕೆ ಆಗಮಿಸಿದ ಬಡಾವಣೆ ಠಾಣೆ ಪೊಲೀಸರು ಎರಡು ಕಡೆಯವರಿಗೆ ವಾರ್ನ್ ಮಾಡಿ ಠಾಣೆಗೆ ಬರುವಂತೆ ಸೂಚನೆ ಬೆನ್ನಲ್ಲೇ ಇದೀಗ ಪರಿಸ್ಥಿತಿ ತಿಳಿಯಾಗಿದೆ.

ಕಾನೂನು ಬದ್ಧವಾಗಿ ನಾವೇ ಮಾಲೀಕರು: ದೇವರಾಜ್

ಈ ನಿವೇಶನ 1965ರಿಂದ ಕೂಡ ಲಕ್ಷಮ್ಮ ಅವರಿಗೆ ಸೇರಿದ್ದು, ಅವರು ತನಗೆ ಜಿಪಿಎ ಮಾಡಿಕೊಟ್ಟಿದ್ದ ಕಾರಣ ತಾವು ಕೇಸ್ ಹಾಕಿ ಈ ಪ್ರಕರಣದಲ್ಲಿ ಕೇಸ್ ತಮ್ಮಂತೆ ಆಗಿದೆ, ಹಾಗಾಗಿ ಇದು ತಮ್ಮದೇ ನಿವೇಶನ. ಯಶ್ ತಾಯಿ ವಿನಾಕಾರಣ ವಾದ ಮಾಡುತ್ತಿದ್ದಾರೆ ಎಂದು ಕಿಡಿಕಾರಿರುವ ದೇವರಾಜ್, ಯಾವುದೇ ಕಾರಣಕ್ಕೂ ಅಲ್ಲಿ ಮತ್ತೆ ಕಾಂಪೌಂಡ್ ಹಾಕಲು ನಾನು ಬಿಡುವುದಿಲ್ಲ. ನಮ್ಮನ್ನ ರೌಡಿಗಳು ಅಂತಾರೆ, ಅವರೇ ಬೇಕಾಬಿಟ್ಟು ವರ್ತನೆ ಮಾಡ್ತಾರೆ, ಕಾನೂನು ಬದ್ಧವಾಗಿ ನಾವೇ ಮಾಲೀಕರು ಎಂದು ನಾವು ಸಾಬೀತು ಮಾಡಿದ್ದೇವೆ. ಅವರ ಬಳಿ ದಾಖಲೆ ಇದ್ದರೆ ಸಾಬೀತು ಮಾಡಲಿ ಎಂದಿದ್ದಾರೆ.

1965ರಲ್ಲಿ ಲಕ್ಷಮ್ಮ ಅವರು ಕರೀಗೌಡ ಎಂಬುವವರಿಂದ ಖರೀದಿ ಮಾಡಿದ ನಿವೇಶನವನ್ನು 2010ರಲ್ಲಿ ಒಮ್ಮೆ ಅಂಗವಿಕಲ ಸಂಸ್ಥೆಗೆ ದಾನ ಪತ್ರ ಬರೆದುಕೊಟ್ಟು ಅವರು ಬಳಕೆ ಮಾಡಿಕೊಳ್ಳದ ಕಾರಣ 2015ರಲ್ಲಿ ದಾನ ಪತ್ರ ರದ್ದು ಮಾಡಲಾಗಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರು ಜಿಪಿಎ ಮಾಡಿಕೊಟ್ಟಿರುವುದಾಗಿ ದೇವರಾಜ್ ಹೇಳುತ್ತಿದ್ದಾರೆ. ಈ ನಡುವೆ 2020ರ ಜನವರಿ 29ರಂದು ಪುಷ್ಪಾ ಅವರು ವೀಣಾ ಕೋಂ ಗಿರೀಶ್ ಎಂಬುವವರಿಂದ ತಮ್ಮ ಮನೆ ಸಮೀಪದ ಈ ನಿವೇಶನವನ್ನು ಖರೀದಿ ಮಾಡಿ ಆಗಲೇ ಕಾಂಪೌಂಡ್ ನಿರ್ಮಾಣ ಮಾಡಿದ್ದರು. ನಂತರ ಹಾಸನದ 4ನೇ ಜೆಎಂಎಫ್​ಸಿ ಕೋರ್ಟ್​ಗೆ ಕೇಸ್ ದಾಖಲು ಮಾಡಿದ್ದ ದೇವರಾಜ್, ಪುಷ್ಪ ಅವರನ್ನ ಪಾರ್ಟಿ ಮಾಡಿ ಕೇಸ್ ದಾಖಲು ಮಾಡಿದ್ದಾರೆ. ಆದರೆ ಪುಷ್ಪಾ ಅವರು ಕೋರ್ಟ್​ಗೆ ಹಾಜರಾಗಿಲ್ಲ ಎನ್ನುವ ಆಧಾರದ ಮೇಲೆ ಕೋರ್ಟ್​ನಲ್ಲಿ ಏಕಪಕ್ಷೀಯವಾಗಿ ದೇವರಾಜ್​ ಮನವಿ ಮಾಡಿಕೊಂಡಂತೆ ಅವರು ದಾಖಲು ಮಾಡಿದ್ದ ಸ್ವತ್ತು ಅವರ ಮೂಲ ಮಾಲೀಕರಿಗೆ ಸೇರಿದ್ದೆಂದು ತೀರ್ಪುನೀಡಲಾಗಿದೆ.

ದೂರು ದಾಖಲಾದರೂ ಏಕೆ ಬಂಧಿಸಿಲ್ಲ ಎಂದ ಪುಷ್ಪಾ 

ಇಲ್ಲಿ ದೇವರಾಜ್ ಹೇಳುತ್ತಿರುವ ನಿವೇಶನಕ್ಕೂ ತಮ್ಮ ನಿವೇಶನಕ್ಕೂ ಸಂಬಂಧವೇ ಇಲ್ಲ ಎನ್ನುವುದು ಪುಷ್ಪಾ ಅವರ ವಾದ. ಅವರಿಗೆ ಐದು ಗುಂಟೆ ಜಮೀನು ಇರಬಹುದು, ಆದರೆ ನಮ್ಮದು 40X60 ಅಳತೆಯ ನಿವೇಶನ. ಇಲ್ಲಿ ಐದು ಗುಂಟೆ ಜಾಗ ಎಲ್ಲಿದೆ. ಪಕ್ಕದಲ್ಲಿ ಮತ್ತೊಂದು ಸೈಟ್ ಇದೆ. ಇನ್ನೊಂದು ಭಾಗದಲ್ಲಿ ನಮ್ಮ ಮನೆ ಇದೆ. ಇವರ ವಾದವೇ ತಪ್ಪಾಗಿದೆ ಎನ್ನುತ್ತಾರೆ.

ತಮ್ಮ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶ ಮಾಡಿ ಕಾಂಪೌಂಡ್ ಕೆಡವಲಾಗಿದೆ. ಮನೆ ಬಳಿ ಬಂದು ಗಲಾಟೆ ಮಾಡಿದ ಬಗ್ಗೆ ದೂರು ದಾಖಲಾಗಿ ಕೇಸ್ ಆಗಿದೆ, ಆದರೂ ಏಕೆ ಯಾವ ಆರೋಪಿಗಳನ್ನು ಬಂಧಿಸಿಲ್ಲ. ಏಕೆ ಕಾಂಪೌಂಡ್​ ಕೆಡವಿದ ಜೆಸಿಬಿ ವಶಕ್ಕೆ ಪಡೆದಿಲ್ಲ ಎಂದು ಇಂದು ಕೂಡ ಪೊಲೀಸರನ್ನ ಪ್ರಶ್ನೆ ಮಾಡುತ್ತಿದ್ದಾರೆ. ಪುಷ್ಪಾ ಅವರು ಪೊಲೀಸರು ಠಾಣೆಗೆ ಕರೆದಿದ್ದರಿಂದ ಮಧ್ಯಾಹ್ನ 1-30ಕ್ಕೆ ಠಾಣೆಗೆ ದಾಖಲೆಗಳ ಸಮೇಪ ಬಂದು ಸುಮಾರು ಮೂರು ಗಂಟೆ ಕಾದು ಕುಳಿತಿದ್ದರೂ ಎದುರುದಾರರು ಹಾಜರಾಗಿಲ್ಲ. ಕ್ರಯ ಪತ್ರ, ಇ-ಸ್ವತ್ತು, ನಗರಸಭೆಯ ಖಾತೆ ಪತ್ರ, ಕಂದಾಯ ರಶೀದಿಗಳ ಜೊತೆಗೆ ಠಾಣೆಗೆ ಹಾಜರಾಗಿರುವ ಪುಷ್ಪಾ ಅವರು ತಮ್ಮ ಹಕ್ಕು ಸಾಬೀತು ಮಾಡಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ಹೆಚ್ಚಿತು ಯಶ್ ತಾಯಿ ನಿವೇಶನ ವ್ಯಾಜ್ಯ ಪ್ರಕರಣ; ಪುಷ್ಪಾ-ದೇವರಾಜ್ ಮಧ್ಯೆ ವಾಗ್ವಾದ

ಒಟ್ಟಿನಲ್ಲಿ ಇರುವ ಒಂದೇ ನಿವೇಶನಕ್ಕೆ ಇಬ್ಬಿಬ್ಬರು ತಾವು ಮಾಲೀಕರು ಎಂದು ಹಕ್ಕು ಪ್ರತಿಪಾದನೆಗೆ ಮುಂದಾಗಿರುವುದು ಪೊಲೀಸರಿಗೂ ಪ್ರಕರಣ ಕಗ್ಗಂಟಾಗಿದೆ. ಸೈಟ್ ಇವರದ್ದಾದರೆ ನಾವು ಖರೀದಿ ಮಾಡಿ ಆರು ವರ್ಷ ಆಗಿದೆ. ಆಗ ಎಲ್ಲಿಗೆ ಹೋಗಿದ್ದರು ಎನ್ನುವುದು ಪುಷ್ಪಾ ಅವರ ವಾದವಾದರೆ, ನಮ್ಮ ಸೈಟ್ ಅತಿಕ್ರಮಣ ಮಾಡಲಾಗಿದೆ ಹಾಗಾಗಿಯೇ ನಾವು ಕೋರ್ಟ್ ಮೂಲಕ ವಾಪಸ್ ಪಡೆದುಕೊಂಡಿದ್ದೇವೆ ಎನ್ನೋದು ದೇವರಾಜ್ ವಾದ. ನಾನಾ- ನೀನಾ ಎನ್ನುವ ಈ ಮಾಲೀಕತ್ವ ಜಟಾಪಟಿ ಇದೀಗ ಮತ್ತೆ ಠಾಣೆ ಮೆಟ್ಟಿಲೇರಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:00 pm, Sun, 1 February 26