ಹಾಸನಾಂಬೆ ದರ್ಶನೋತ್ಸವ ಯಾವಾಗಿನಿಂದ?: ವಿವಿಐಪಿ, ಸಾಮಾನ್ಯ ಜನರ ದರ್ಶನಕ್ಕೆ ಸಮಯ ನಿಗದಿ, ಇಲ್ಲಿದೆ ಡಿಟೇಲ್ಸ್
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಭಕ್ತರಿಗೆ ಸುಗಮ ದರ್ಶನ ಕಲ್ಪಿಸಲು ಪೊಲೀಸ್ ಮತ್ತು ಕಂದಾಯ ಇಲಾಖೆಗಳು ವಿಶೇಷ ಕ್ರಮ ಕೈಗೊಂಡಿವೆ. ಇನ್ನು ವಿವಿಐಪಿ ದರ್ಶನ ಹಾಗೂ ಸಾಮಾನ್ಯ ಜನರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ಈ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.

ಬೆಂಗಳೂರು/ಹಾಸನ, (ಅಕ್ಟೋಬರ್ 23): ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನೋತ್ಸವ ಅಕ್ಟೋಬರ್ 29 ರಿಂದ ನವೆಂಬರ್ 11 ರವರೆಗೆ ಅವಕಾಶವಿದ್ದು, ಹಾಸನಾಂಬೆ ದೇವಿ ದರ್ಶನೋತ್ಸವಕ್ಕೆ ಜಿಲ್ಲಾಡಳಿತ ಸಿದ್ಧತೆಗಳನ್ನು ಚುರುಕುಗೊಳಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಲಕ್ಷಾಂತರ ಭಕ್ತರಿಗೆ ಸುಗಮ ಮತ್ತು ಸುರಕ್ಷಿತ ದರ್ಶನ ಕಲ್ಪಿಸುವುದರ ಜತೆಗೆ, ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯುವ ಸಮಯವನ್ನು ಕಡಿಮೆ ಮಾಡಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿವಿಐಪಿ ಹಾಗೂ ಸಾಮಾನ್ಯ ಜನರ ದರ್ಶನಕ್ಕೆ ಸಮಯ ನಿಗದಿಪಡಿಸಲಾಗಿದೆ. ಬೆಳಗ್ಗೆ 10:30ರಿಂದ 12:30ರ ವರೆಗೆ ಮಾತ್ರ ವಿವಿಐಪಿ ದರ್ಶನ, ಇನ್ನುಳಿದ ಬಾಕಿ ಸಮಯದಲ್ಲಿ ಜನರಿಗೆ ಇಡೀ ದಿನ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ಗೆ ಆಹ್ವಾನ
ಅ.29ರಿಂದ ನವೆಂಬರ್ 11ರವರೆಗೆ ನಡೆಯಲಿರುವ ಹಾಸನಾಂಬೆ ದರ್ಶನೋತ್ಸವಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜಿಲ್ಲಾಡಳಿತ ಆಹ್ವಾನ ನೀಡಿದೆ. ಇಂದು (ಅಕ್ಟೋಬರ್ 23) ಬೆಂಗಳೂರಿನಲ್ಲಿ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಹಾಸನ ಡಿಸಿ ಲತಾಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಅವರು ಡಿಕೆ ಶಿವಕುಮಾರ್ ಗೆ ಆಹ್ವಾನ ನೀಡಿದರು.
ಇದನ್ನೂ ಓದಿ: Hasanamba Temple: ಹಾಸನಾಂಬೆ ದೇವಾಲಯದ ಇತಿಹಾಸ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ
ವಿವಿಐಪಿ, ಸಾಮಾನ್ಯ ಜನರ ದರ್ಶನಕ್ಕೆ ಸಮಯ ನಿಗದಿ
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವಲಿಂಗೇಗೌಡ, ಅಕ್ಟೋಬರ್ 29ರಿಂದ ಹಾಸನಾಂಬೆ ಜಾತ್ರೆ ನಡೆಯುತ್ತಿದ್ದು, ಕಳೆದ ವರ್ಷ 25 ಲಕ್ಷ ಜನ ಹಾಸನಾಂಬೆ ದರ್ಶನ ಪಡೆದಿದ್ದರು. ಈಗಲೂ ವಿಜೃಂಭಣೆಯಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ದಸರಾದಂತೆ ಹಾಸನಾಂಬೆ ಜಾತ್ರೆ ಕಾರ್ಯಕ್ರಮ ನಡೆಯುತ್ತದೆ. ಈ ಬಾರಿಯೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ. ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆ. ಬೆಳಗ್ಗೆ 10:30ರಿಂದ 12:30ರ ವರೆಗೆ ಮಾತ್ರ ವಿವಿಐಪಿ ದರ್ಶನಕ್ಕೆ ಅವಕಶಶ, ಇನ್ನುಳಿದ ಬಾಕಿ ಸಮಯದಲ್ಲಿ ಜನರಿಗೆ ಇಡೀ ದಿನ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.
ನಿಗದಿತ ಸಮಯಕ್ಕೆ ದರ್ಶನಕ್ಕೆ ಬರಬೇಕು
ಬಾಕಿ ಸಮಯದಲ್ಲಿ ನಿಗದಿತ ಸಮಯದಲ್ಲಿ ಬರಲಿಲ್ಲ ಅಂದ್ರೆ ಮತ್ತೆ ಮುಂದಿನ ದಿನ ಬರಬೇಕು. ಒಟ್ಟು 3500 ವಿವಿಐಪಿ ಜನರಿಗೆ ಹಾಸನಾಂಬೆ ದರ್ಶನ ಕ್ಕೆ ವ್ಯವಸ್ಥೆ ಮಾಡಿದ್ದೇವೆ. ಪಬ್ಲಿಕ್ 1000 ರೂಪಾಯಿ ಪಾಸ್ ಮಾಡಿದ್ದೇವೆ. ಪವಿತ್ರ ಹಾಸನಾಂಬೆ ಮಾಡಬೇಕು ಅಂತ ಇದ್ದೇವೆ. ಅದಕ್ಕಾಗಿ ಉಸ್ತುವಾರಿ ಸಚಿವ ಸ್ಥಾನದ ಅವಕಾಶ ಯಶಸ್ವಿ ಮಾಡಬೇಕು. ಹೀಗಾಗಿ ಹಗಲು ರಾತ್ರಿ 15 ದಿನದಿಂದ ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಮೈಸೂರಿನಂತೆ ಹಾಸನದಲ್ಲಿ ಆಗಲು ಬಿಡಲ್ಲ
ಇನ್ನು ಮೈಸೂರು ದಸಾರದಲ್ಲಿ ನಂದಿ ಧ್ವಜ ಪೂಜೆ ವೇಳೆ ಮೂವರು ಸಚಿವರನ್ನು ಎಸ್ಪಿ ತಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಶಿವಲಿಂಗೇಗೌಡ, ನಮಗೆ ಅದು ಏನು ನಡೀತು ಅಂತ ಮಾಹಿತಿ ಇಲ್ಲ.ಸಚಿವರನ್ನ ಬಿಡದಿರುವುದು ತಪ್ಪು. ಯಾಕೆ ಹೀಗೆ ಮಾಡಿದರು ಅನ್ನೋ ಮಾಹಿತಿ ಇಲ್ಲ. ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹೀಗೆ ಆಗಲು ಬಿಡಲ್ಲ. ಈ ಸಲ ವಿವಿಐಪಿ ಹಾಗೂ ಜನರ ದರ್ಶನಕ್ಕೆ ವಿಶೇಷ ಸಿಸ್ಟಮ್ ಮಾಡಿದ್ದೇವೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Fri, 23 October 26




