Hasanamba Temple: ಹಾಸನಾಂಬೆ ದೇವಾಲಯದ ಇತಿಹಾಸ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ
ಹಾಸನಾಂಬೆ ದೇಗುಲದ ವಾರ್ಷಿಕ ದರ್ಶನ ಆರಂಭವಾಗಿದೆ. ಅಕ್ಟೋಬರ್ 9 ರಿಂದ 23 ರವರೆಗೆ ತೆರೆದಿರುವ ಈ ದೇವಾಲಯವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ದೇವಿಯ ಇತಿಹಾಸ, ಮಹತ್ವ ಹಾಗೂ ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಿಂದಿನ ಕಾರಣಗಳನ್ನು ಡಾ. ಬಸವರಾಜ್ ಗುರೂಜಿಯವರು ವಿವರಿಸಿದ್ದಾರೆ. ವರ್ಷವಿಡೀ ದೀಪ ಆರದೆ ಉರಿಯುವುದು, ನೈವೇದ್ಯ ಕೆಡದಿರುವುದು ಇಲ್ಲಿನ ವಿಶೇಷ. ಶಕ್ತಿ ಸ್ವರೂಪಿಣಿ ಹಾಸನಾಂಬೆ ದೇವಿಯು ಭಕ್ತರ ಕಷ್ಟಗಳನ್ನು ನಿವಾರಿಸುತ್ತಾಳೆ ಎಂಬ ನಂಬಿಕೆಯಿದೆ. ಮನೆಗಳಲ್ಲಿಯೂ ದೇವಿಯನ್ನು ಆವಾಹಿಸಿ ಹರಕೆಗಳನ್ನು ಸಲ್ಲಿಸಬಹುದು.

ವರ್ಷಕ್ಕೊಮ್ಮೆ ಭಕ್ತರಿಗಾಗಿ ತೆರೆಯಲ್ಪಡುವ ಹಾಸನಾಂಬೆ ದೇಗುಲದ ಬಾಗಿಲು ನಿನ್ನೆ ಅಂದರೆ ಅಕ್ಟೋಬರ್ 9ರಂದು ತೆರೆದಿದೆ. ಇನ್ನು 23 ರವರೆಗೆ ಭಕ್ತರು ದೇವಿಯ ದರ್ಶನ ಪಡೆಯಬಹುದು.ಈ 14 ದಿನಗಳ ಕಾಲ ಭಕ್ತರಿಗೆ ದರ್ಶನದ ಭಾಗ್ಯ ಲಭಿಸುತ್ತದೆ. ಈ ದೇವಿಯ ಮಹತ್ವ, ಇತಿಹಾಸ ಮತ್ತು ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಿಂದಿನ ಕಾರಣಗಳೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಿಳಿಸಿರುವ ಮಾಹಿತಿ ಇಲ್ಲಿದೆ.
ಹಾಸನಾಂಬೆ ಎಂಬ ಹೆಸರು ಹೇಗೆ ಬಂತು?
ಹಾಸನಾಂಬೆ ಎಂಬ ಹೆಸರು ನಗುಮುಖದ ಅಂಬಾ ಅಂದರೆ ನಗುಮುಖದ ತಾಯಿ ಎಂಬುದರಿಂದ ಬಂದಿದೆ. ಹಾಸನ ನಗರಕ್ಕೆ ಈ ಹೆಸರಿನಿಂದಲೇ “ಹಾಸನ” ಎಂದು ಬಂದಿದೆ ಎಂಬ ಇತಿಹಾಸವಿದೆ. ಇದು ಹಾಸನ ನಗರದ ಅಧಿದೇವತೆ ಎಂದು ಪ್ರಖ್ಯಾತವಾಗಿದೆ. ಈ ದೇವಾಲಯದ ಅತ್ಯಂತ ವಿಶಿಷ್ಟ ನಂಬಿಕೆಯೆಂದರೆ, ದೇಗುಲದ ಬಾಗಿಲು ಮುಚ್ಚಿದಾಗ ಹಚ್ಚಿದ ದೀಪವು ಮುಂದಿನ ವರ್ಷ ದೇಗುಲ ತೆರೆಯುವವರೆಗೂ ಆರದೆ ಉರಿಯುತ್ತದೆ. ಅಲ್ಲದೆ, ನೈವೇದ್ಯ ಕೆಡುವುದಿಲ್ಲ ಮತ್ತು ಅರ್ಪಿಸಿದ ಹೂಗಳು ಬಾಡುವುದಿಲ್ಲ ಎಂಬ ಪ್ರತೀತಿ ಈಗಲೂ ಇದೆ.
ಹಾಸನಾಂಬೆ ದೇವಾಲಯದ ಇತಿಹಾಸ:
ಈ ದೇವಾಲಯವನ್ನು 12ನೇ ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಸಪ್ತಮಾತೃಕೆಯರಲ್ಲಿ ಮೂವರು ತಾಯಂದಿರು ನೆಲೆಸಿದ್ದಾರೆ ಎಂಬ ನಂಬಿಕೆ ಇದೆ. ಸಪ್ತಮಾತೃಕೆಯರಾದ ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ಅವರು ಭೂಮಿಗೆ ಬಂದಾಗ ಹಾಸನದ ಸೌಂದರ್ಯಕ್ಕೆ ಮಾರುಹೋಗಿ ಇಲ್ಲೇ ನೆಲೆಸಲು ನಿರ್ಧರಿಸಿದರಂತೆ. ಅವರಲ್ಲಿ ಮಹೇಶ್ವರಿ, ಕೌಮಾರಿ, ವೈಷ್ಣವಿ ಹಾಸನದಲ್ಲಿ ನೆಲೆಸಿದ್ದಾರೆ. ಬ್ರಾಹ್ಮೀ ಮತ್ತು ಇಂದ್ರಾಣಿ ಕೆಂಚಮ್ಮನ ಹೊಸಕೋಟೆಯಲ್ಲಿ, ವಾರಾಹಿ ಮತ್ತು ಚಾಮುಂಡಿ ದೇವಿ ಒಂದು ಬಾವಿಯಲ್ಲಿ ನೆಲೆಸಿದ್ದಾರೆ. ಹಾಸನಾಂಬೆ ಶಕ್ತಿ ಸ್ವರೂಪಿಣಿ ದೇವಿಯಾಗಿದ್ದು, ಸ್ತ್ರೀ ಶಕ್ತಿಯ ಸಂಕೇತವಾಗಿದ್ದಾಳೆ.
ವಿಡಿಯೋ ಇಲ್ಲಿದೆ ನೋಡಿ:
ಇದನ್ನೂ ಓದಿ: ತುಳಸಿ ಮಾಲೆ ಧರಿಸುವ ಮುನ್ನ ಈ ವಿಷ್ಯ ತಿಳಿದಿರಲಿ, ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ
ದೇಶದ ವಿವಿಧ ಭಾಗಗಳಿಂದ ಭಕ್ತರ ಆಗಮನ:
ವರ್ಷದಲ್ಲಿ ಒಂದೇ ಬಾರಿ ತೆರೆಯುವುದರಿಂದ ಈ ಪರ್ವಕಾಲದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಹರಕೆಗಳನ್ನು ಹೊತ್ತುಕೊಳ್ಳಲು ಮತ್ತು ತೀರಿಸಿಕೊಳ್ಳಲು ಇದು ಸುಸಮಯವಾಗಿದೆ. ಈ 14 ದಿನಗಳ ಕಾಲ ಭಕ್ತರು ಮನೆಯಲ್ಲೂ ದೇವಿಯನ್ನು ಸ್ಮರಿಸಬಹುದು. ಮನೆಯಲ್ಲಿ ಒಂದು ಅಕ್ಕಿಯ ಮೇಲೆ ತಾಮ್ರ, ಹಿತ್ತಾಳೆ ಅಥವಾ ಬೆಳ್ಳಿಯ ದೀಪವನ್ನು ಪೂರ್ವಾಭಿಮುಖವಾಗಿ ಇಟ್ಟು, ಅದಕ್ಕೆ ಒಂದು ಚಿಟಿಕೆ ಕುಂಕುಮ ಹಾಕಿ, ಆ ತಾಯಿಯನ್ನು ಆವಾಹನೆ ಮಾಡಿ ಪ್ರಾರ್ಥಿಸಿದರೆ, ಸಂಕಲ್ಪಗಳು ಈಡೇರಿ ಬಹಳಷ್ಟು ಶುಭವಾಗುತ್ತದೆ ಎಂಬ ನಂಬಿಕೆ ಇದೆ.
ಸಮಸ್ಯೆಯಿಂದ ಮುಕ್ತಿ ಪಡೆಯಲು ದೇವಿಯ ಮೊರೆ:
ವಿವಾಹಕ್ಕೆ ಸಮಸ್ಯೆ ಇರುವವರು, ಅನಾರೋಗ್ಯ ಪೀಡಿತರು, ಕಷ್ಟಗಳಿಂದ ಬಳಲುತ್ತಿರುವವರು, ಮೋಸ ಹೋಗಿರುವವರು ಸೇರಿದಂತೆ ಹಲವರು ಹಾಸನಾಂಬೆ ತಾಯಿಯ ಕೃಪೆಗೆ ಪಾತ್ರರಾಗಲು ಪ್ರಾರ್ಥಿಸುತ್ತಾರೆ. ಬಲಿಪಾಡ್ಯಮಿಯ ನಂತರ ಅಂದರೆ ಅಕ್ಟೋಬರ್ 23 ರಂದು ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 am, Fri, 10 October 25




