ಮನೆಯ ಯಜಮಾನನ ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರು; ನೇತ್ರದಾನದ ಮೂಲಕ ಅಂದರ ಬದುಕಿಗೆ ಬೆಳಕು

| Updated By: ganapathi bhat

Updated on: Mar 28, 2021 | 10:21 PM

ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ನಗರದ ವೈದ್ಯ ಡಾ.ಚಂದ್ರಶೇಖರ ಕೇಲಗಾರ ನೇತೃತ್ವದಲ್ಲಿ ಮೃತ ಶಿವಾನಂದರ ಎರಡು ಕಣ್ಣುಗಳನ್ನು ಸಂಗ್ರಹಿಸಲಾಯಿತು. ನಂತರ ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ಮೃತ ಶಿವಾನಂದ ಅವರ ಕಣ್ಣುಗಳನ್ನು ದಾನ ಮಾಡಲಾಯಿತು.

ಮನೆಯ ಯಜಮಾನನ ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬಸ್ಥರು; ನೇತ್ರದಾನದ ಮೂಲಕ ಅಂದರ ಬದುಕಿಗೆ ಬೆಳಕು
ಮೃತ ವ್ಯಕ್ತಿಯ ಕಣ್ಣನ್ನು ಅಂದರಿಗೆ ದಾನ ಮಾಡಿದ ಕುಟುಂಬಸ್ಥರು
Follow us on

ಹಾವೇರಿ : ಸಾಮಾನ್ಯವಾಗಿ ಮನೆಯಲ್ಲಿ ಯಾರಾದರೂ ಮೃತಪಟ್ಟಿದ್ದಾರೆ ಎಂದರೆ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ದುಃಖದಲ್ಲಿರುತ್ತಾರೆ. ಆದರೆ ಇಲ್ಲೊಂದು ಕುಟುಂಬದ ಸದಸ್ಯರು ಮನೆಯ ಯಜಮಾನನ ಸಾವಿನಲ್ಲೂ ಸಾರ್ಥಕತೆ ಮೆರೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಮನೆಯ ಯಜಮಾನ ಮೃತಪಟ್ಟಿದ್ದರೂ ಅವರು ಮತ್ತೊಬ್ಬರಿಗೆ ಬೆಳಕಾಗು ಕೆಲಸ ಮಾಡಿದ್ದು, ಅಂದರ ಬಾಳಿಗೆ ಒಳಿತಾಗುವ ಕಾರ್ಯ ಮಾಡಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಶಬರಿ ಕಾಲೋನಿಯ ನಿವಾಸಿ ಶಿವಾನಂದ ಯಮ್ಮಿ ವಯೋಸಹಜ ಕಾಯಿಲೆಯಿಂದ‌ ಮೃತಪಟ್ಟಿದ್ದಾರೆ. ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಚಾಲಕನಾಗಿ ಸಾರ್ಥಕ ಸೇವೆ ಸಲ್ಲಿಸಿದ ಶಿವಾನಂದ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅರವತ್ತೆರಡು ವರ್ಷದ ಶಿವಾನಂದ ಸದ್ಯ ಮೃತಪಟ್ಟಿದ್ದಾರೆ.

ತಮ್ಮ ತಂದೆ ಬದುಕಿನುದ್ದಕ್ಕೂ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಅನೇಕ ಜನರಿಗೆ ಬೇಕಾಗಿದ್ದವರು. ಹೀಗಾಗಿ ಅವರ ಸಾವಿನಲ್ಲೂ ನಾವು ಸಾರ್ಥಕ ಸೇವೆ ಮಾಡಬೇಕು ಎಂದು ನಿರ್ಧರಿಸಿ, ಕುಟುಂಬಸ್ಥರೆಲ್ಲ ಚರ್ಚಿಸಿ ನೇತ್ರದಾನ ಮಾಡುವ ನಿರ್ಧಾರಕ್ಕೆ ಬಂದೆವು ಎಂದು ಶಿವಾನಂದ ಅವರ ಮಗಳು ಸೌಮ್ಯ ಹೇಳಿದ್ದಾರೆ .

ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಕಾರದೊಂದಿಗೆ ನಗರದ ವೈದ್ಯ ಡಾ.ಚಂದ್ರಶೇಖರ ಕೇಲಗಾರ ನೇತೃತ್ವದಲ್ಲಿ ಮೃತ ಶಿವಾನಂದರ ಎರಡು ಕಣ್ಣುಗಳನ್ನು ಸಂಗ್ರಹಿಸಲಾಯಿತು. ನಂತರ ಹುಬ್ಬಳ್ಳಿಯ ಎಂ.ಎಂ.ಜೋಶಿ ಕಣ್ಣಿನ ಆಸ್ಪತ್ರೆಗೆ ಮೃತ ಶಿವಾನಂದ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ಮೃತರ ಕುಟುಂಬದವರು ಹಾಗೂ ಸಂಬಂಧಿಕರು ಮೃತರ ಸಾವಿನ ದುಃಖ‌ ಮರೆತು ಕಣ್ಣಿಲ್ಲದವರಿಗೆ ಕಣ್ಣಾಗುವ ಕೆಲಸ ಮಾಡಿದರು. ಇನ್ನು ಕುಟುಂಬದ ಈ ಕಾರ್ಯಕ್ಕೆ ಮೃತರ ದರ್ಶನಕ್ಕೆ ಬಂದಿದ್ದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾವಿನ ನಂತರ ನೇತ್ರದಾನ ಮಾಡಲು ಬದುಕಿದ್ದಾಗಲೆ ಪತಿ ಇಚ್ಛೆ ವ್ಯಕ್ತಪಡಿಸಿದ್ದರು. ಇದರಿಂದ ಅಂದರಿಗೆ ದೃಷ್ಟಿ ಬರಲಿ. ಕತ್ತಲಲ್ಲಿ ಇರುವ ಅಂದರಿಗೆ ಒಳ್ಳೆಯದಾಗಲಿ ಎಂದು ಪತಿಯ ಇಚ್ಛೆಯಂತೆ ಈ ಕಾರ್ಯ ಮಾಡಿದ್ದೇವೆ ಎಂದು ಮೃತ ಶಿವಾನಂದ ಅವರ ಪತ್ನಿ ಪುಷ್ಪಾವತಿ ಹೇಳಿದ್ದಾರೆ.

ಸಾವಿನ ನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ಮೂಡನಂಬಿಕೆಗಳಿಂದಾಗಿ ಅಥವಾ ಇನ್ನೀತರ ಕಾರಣಗಳಿಂದಾಗಿ ದಾನ ಮಾಡಲು ಹಿಂಜರಿಯುವ ಈ ಕಾಲದಲ್ಲಿ ನೇತ್ರದಾನದಿಂದ ಇಬ್ಬರು ಅಂದರಿಗೆ ದೃಷ್ಟಿ ನೀಡಬಹುದು. ಈ ನಿಟ್ಟಿನಲ್ಲಿ ಶಿವಾನಂದ ಯಮ್ಮಿಯವರ ಕುಟುಂಬದವರು ಮಾಡಿರುವುದು ನಿಜಕ್ಕೂ ಮಾದರಿಯ ಕೆಲಸ.

ಇದನ್ನೂ ಓದಿ:

National Film Awards 2019: ‘ಅಕ್ಷಿ’ ಸಿನಿಮಾದಲ್ಲಿ ಎಸ್​ಪಿಬಿ ಹಾಡಿದ ಕೊನೇ ಹಾಡು; ಇದು ಅಂತಿಂಥ ಸಾಂಗ್​ ಅಲ್ಲವೇ ಅಲ್ಲ!

ಡಿಎಂಕೆ ಜತೆ ಅಸಾದುದ್ದೀನ್​ ಓವೈಸಿ ಮೈತ್ರಿ ಮಾತುಕತೆ; AIMIM ಸೇರ್ಪಡೆಯಾದರೆ ಹಿಂದು ವಿರೋಧಿ ಹಣೆಪಟ್ಟಿ ಬರಬಹುದು ಎಂದು ಎಚ್ಚರಿಸಿದ ಉಳಿದ ಮುಸ್ಲಿಂ ಪಕ್ಷಗಳು