ಡಿಎಂಕೆ ಜತೆ ಅಸಾದುದ್ದೀನ್​ ಓವೈಸಿ ಮೈತ್ರಿ ಮಾತುಕತೆ; AIMIM ಸೇರ್ಪಡೆಯಾದರೆ ಹಿಂದು ವಿರೋಧಿ ಹಣೆಪಟ್ಟಿ ಬರಬಹುದು ಎಂದು ಎಚ್ಚರಿಸಿದ ಉಳಿದ ಮುಸ್ಲಿಂ ಪಕ್ಷಗಳು

Tamil Nadu Assembly Election 2021 : ಡಿಎಂಕೆ ಮೈತ್ರಿ ಪಕ್ಷವಾದ ಮಣಿಥನೇಯ ಮಕ್ಕಳ್​ ಕಚ್ಚಿ ಅಧ್ಯಕ್ಷ ಎಂ. ಎಚ್. ಜವಾಹಿರುಲ್ಲಾ ಕೂಡ ಓವೈಸಿ ಪಕ್ಷ ಸೇರ್ಪಡೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಹೊರಗಿನ ಯಾವುದೇ ಪಕ್ಷ ಇಲ್ಲಿ ಬಂದು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಡಿಎಂಕೆ ಜತೆ ಅಸಾದುದ್ದೀನ್​ ಓವೈಸಿ ಮೈತ್ರಿ ಮಾತುಕತೆ; AIMIM ಸೇರ್ಪಡೆಯಾದರೆ ಹಿಂದು ವಿರೋಧಿ ಹಣೆಪಟ್ಟಿ ಬರಬಹುದು ಎಂದು ಎಚ್ಚರಿಸಿದ ಉಳಿದ ಮುಸ್ಲಿಂ ಪಕ್ಷಗಳು
ಅಸಾದುದ್ದೀನ್​ ಓವೈಸಿ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 03, 2021 | 2:47 PM

ಅಸಾದುದ್ದೀನ್​ ಓವೈಸಿಯ ಅಖಿಲ ಭಾರತ ಮಜ್ಲಿಸ್ ಎ ಇಟ್ಟೇಹದುಲ್ ಮುಸ್ಲೀಮೀನ್ (AIMIM) ಪಕ್ಷ ತಮಿಳುನಾಡು ಚುನಾವಣೆಯಲ್ಲೂ ಕಣಕ್ಕೆ ಇಳಿಯಲಿದ್ದು, ದ್ರಾವಿಡ್ ಮುನ್ನೇತ್ರ ಕಳಗಂ (DMK) ಅಥವಾ ಟಿಟಿವಿ ದಿನಕರನ್​ ಅವರ ಅಮ್ಮ ಮಕ್ಕಳ್​ ಮುನ್ನೇತ್ರ ಕಳಗಂ (AMMK) ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಇವೆರಡೂ ಪಕ್ಷಗಳಲ್ಲಿ ಯಾವ ಪಕ್ಷವನ್ನು ಓವೈಸಿ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದಿನ್ನೂ ಖಚಿತವಾಗಿಲ್ಲ..ಮಾತುಕತೆ ನಡೆಯುತ್ತಿದೆ. ಡಿಎಂಕೆಯ ಪ್ರಮುಖ ಮುಖಂಡರೊಬ್ಬರು AIMIM ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ತಮಿಳುನಾಡಿನಲ್ಲಿ ಇವೆರಡರಲ್ಲಿ ಯಾವುದೇ ಪಕ್ಷದ ಜತೆ ಮೈತ್ರಿ ಸಾಧ್ಯವಾಗದೆ ಇದ್ದರೂ, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಓವೈಸಿ ಸ್ಪಷ್ಟಪಡಿಸಿದ್ದಾರೆ.

ತಮಿಳುನಾಡಿನಲ್ಲಿ ಒಟ್ಟು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಂಐಎಂಐಎಂ ಮುಂದಾಗಿದ್ದು, ಪುದುಚೇರಿಯಲ್ಲಿ 2 ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಿದೆ. ಇನ್ನು ತಮಿಳುನಾಡಿನಲ್ಲಿ ಸ್ಪರ್ಧೆಗೆ ಇಳಿಯಲಿರುವ ಕ್ಷೇತ್ರಗಳ ಪಟ್ಟಿಯನ್ನು AIMIM ರಾಜ್ಯ ಘಟಕದ ನಾಯಕರು ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಸಲ್ಲಿಸಿದ್ದಾರೆ. ಒಟ್ಟು 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎಐಎಂಐಎಂ ರಾಜ್ಯ ಘಟಕ ಉತ್ಸಾಹದಲ್ಲಿದ್ದರೂ, ಇದರಲ್ಲಿ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅಸಾದುದ್ದೀನ್ ಓವೈಸಿ ಒಪ್ಪುವ ಸಾಧ್ಯತೆ ಕಡಿಮೆ ಇದು ಎಂದೂ ಪಕ್ಷದ ಮೂಲಗಳು ತಿಳಿಸಿವೆ. 2016ರ ಚುನಾವಣೆಯಲ್ಲಿ ವಾಣಿಯಂಬಾಡಿ ಕ್ಷೇತ್ರದಿಂದ ಪಕ್ಷದ ರಾಜ್ಯಾಧ್ಯಕ್ಷ ವಕೀಲ್​ ಅಹ್ಮದ್​ ಸ್ಪರ್ಧಿಸಿದ್ದರು. ಆದರೆ ಕೇವಲ 10,117 ಮತಗಳನ್ನು ಮಾತ್ರ ಗಳಿಸಲು ಸಾಧ್ಯವಾಗಿತ್ತು. ಇವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ AIADMK ಅಭ್ಯರ್ಥಿ 69,588 ಮತಗಳನ್ನು ಪಡೆದಿದ್ದರು. ಈ ಬಾರಿ ವಾಣಿಯಂಬಾಡಿ ಕ್ಷೇತ್ರದಲ್ಲಿ ಅಸಾದುದ್ದೀನ್ ಓವೈಸಿ ಪಕ್ಷ ಸ್ಪರ್ಧಿಸುವುದು ಖಚಿತವಾಗಿದ್ದು, ಇದೂ ಸೇರಿ ಪಕ್ಷ ಎಲ್ಲೆಲ್ಲಿ ಸ್ಪರ್ಧೆಗೆ ಇಳಿಯುತ್ತದೆಯೋ ಅಲ್ಲೆಲ್ಲ ಸ್ವತಃ ಓವೈಸಿಯವರೇ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಇನ್ನೊಂದು ಮಹತ್ವದ ವಿಷಯವೆಂದರೆ 2016ರಲ್ಲಿ AIMIM ಕೇವಲ 2 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸಿತ್ತು. ಈ ಬಾರಿ ಹೇಗಾದರೂ ಸರಿ ಮುನ್ನೆಲೆಗೆ ಬರಬೇಕು ಎಂದು ಹೋರಾಡುತ್ತಿದೆ.

ಇತರ ಮುಸ್ಲಿಂ ಪಕ್ಷಗಳಲ್ಲಿ ಕಳವಳ ಅಸಾದುದ್ದೀನ್ ಓವೈಸಿ ತಮಿಳುನಾಡಿನಲ್ಲಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದು ಡಿಎಂಕೆ ಮೈತ್ರಿಕೂಟದಲ್ಲಿ ಈಗಾಗಲೇ ಇರುವ ಇತರ ಮುಸ್ಲಿಂ ಪಕ್ಷಗಳಲ್ಲಿ ಕಳವಳ ಉಂಟುಮಾಡಿದೆ. ಅದನ್ನು ಮೈತ್ರಿ ಪಕ್ಷಗಳು ಬಹಿರಂಗವಾಗಿಯೇ ಹೊರಹಾಕಿದ್ದಾರೆ. ಎಐಎಂಐಎಂ ಜತೆ ಈ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮೊದಲು ಡಿಎಂಕೆ ಉತ್ಸಾಹದಲ್ಲಿತ್ತು. ಆದರೆ ಯಾವಾಗ, ಉಳಿದ ಮುಸ್ಲಿಂ ಪಾರ್ಟಿಗಳು ಅಷ್ಟೊಂದು ಆಸಕ್ತಿ ತೋರಿಸಲಿಲ್ಲವೋ ಸಹಜವಾಗಿಯೇ ಹಿಂದೆಸರಿದಿದೆ. ಆದರೆ ಯಾಕೆ ಇತರ ಮುಸ್ಲಿಂ ಪಕ್ಷಗಳು ಈ ನಿರ್ಧಾರಕ್ಕೆ ಒಪ್ಪುತ್ತಿಲ್ಲ ಎಂದು ಗೊತ್ತಾಗುತ್ತಿಲ್ಲವೆಂದು ಡಿಎಂಕೆ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.

ಇನ್ನು ಡಿಎಂಕೆ ಮೈತ್ರಿ ಪಕ್ಷವಾದ ಮಣಿಥನೇಯ ಮಕ್ಕಳ್​ ಕಚ್ಚಿ ಅಧ್ಯಕ್ಷ ಎಂ. ಎಚ್. ಜವಾಹಿರುಲ್ಲಾ ಕೂಡ ಓವೈಸಿ ಪಕ್ಷ ಸೇರ್ಪಡೆಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದಾರೆ. ಹೊರಗಿನ ಯಾವುದೇ ಪಕ್ಷ ಇಲ್ಲಿ ಬಂದು ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ದೇಶದ ಉಳಿದ ಭಾಗಗಳಿಗಿಂತ ಭಿನ್ನವಾಗಿ, ಹೆಚ್ಚಾಗಿ ತಮಿಳುನಾಡಿನ ಮುಸ್ಲಿಮರು ಇಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ್ಯ ಪಡೆದಿದ್ದಾರೆ. ವಿಧಾನಸಭೆ, ಸಂಪುಟ, ಸಂಸತ್ತಿನ್ನು ಉತ್ತಮವಾಗಿ ಪ್ರತಿನಿಧಿಸುತ್ತಿದ್ದಾರೆ. ಇದರಿಂದ ಅಭಿವೃದ್ಧಿಗೂ ಚೆನ್ನಾಗಿ ಆಗುತ್ತಿದೆ. ಅದಕ್ಕೂ ಮಿಗಿಲಾಗಿ ತಮಿಳುನಾಡಿನಲ್ಲಿ ಕೋಮು ಸೌಹಾರ್ದತೆ ಬಲವಾಗಿದೆ. ಇನ್ನು AIMIM ಆಗಮನದಿಂದ ಡಿಎಂಕೆ ಹಿಂದು ವಿರೋಧಿ ಪಕ್ಷ ಎಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾಗಬಹುದು ಎಂದು ನೇರವಾಗಿಯೇ ಹೇಳಿದ್ದಾರೆ. ಅಷ್ಟೇ ಅಲ್ಲ, AIMIM ಸ್ವತಂತ್ರವಾಗಿ ಸ್ಪರ್ಧಿಸಿದರೆ ಶೇ.10ರಷ್ಟೂ ಮತ ಆ ಪಕ್ಷಕ್ಕೆ ಹೋಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಾತಿಯಾಧಾರಿತ ಮತಬೇಟೆಗೆ ಬಿಜೆಪಿಯಿಂದ ಹೊಸ ತಂತ್ರ; ತಮಿಳುನಾಡು ತಿರುಪತ್ತೂರಿನಲ್ಲಿ ಕುರುಬ ಸಮಾವೇಶ

ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​

Published On - 12:22 pm, Wed, 3 March 21