How To | ಕೊವಿಡ್-19 ಲಸಿಕೆ ಸ್ವೀಕರಿಸಲು ಹೆಸರು ನೋಂದಣಿ ಹೇಗೆ?
How to Register for Covid-19 Vaccination: ಕೊರೊನಾ ತಡೆ ಲಸಿಕೆ ಪಡೆಯಲು ಕೋವಿಡ್ ಪೋರ್ಟಲ್ ಅಥವಾ ಆ್ಯಪ್ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಹೆಸರು ನೋಂದಣಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ.
ದೇಶಾದ್ಯಂತ ಮತ್ತೊಂದು ಹಂತದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿದೆ. ಆರೋಗ್ಯ ಕಾರ್ಯಕರ್ತರು, ವೈದ್ಯರು, ಫ್ರಂಟ್ಲೈನ್ ವಾರಿಯರ್ಸ್ ನಂತರ ಇದೀಗ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರ ಜೊತೆಗೆ 45 ವರ್ಷ ಮೇಲ್ಪಟ್ಟು ಬೇರೆ ಬೇರೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೂ ಕೊರೊನಾ ಲಸಿಕೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದೇ ಕಾರಣಕ್ಕಾಗಿ ಸಾರ್ವಜನಿಕರಿಗೆ ಹೆಸರು ನೋಂದಾಯಿಸಿಕೊಳ್ಳಲು ಅನುಕೂಲವಾಗುವಂತೆ ಕೊವಿನ್ ತಂತ್ರಾಂಶದಲ್ಲಿದ್ದ ಕೆಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿದೆ. ಆದರೆ, ಕೊವಿನ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು ಹೇಗೆ? ಲಸಿಕೆ ಕೇಂದ್ರ ಆರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಪ್ರಶ್ನೆ ಹಲವರಲ್ಲಿದ್ದು, ಗೊಂದಲ ನಿವಾರಣೆಗೆ ಬೇಕಾದ ಪೂರಕ ಮಾಹಿತಿಗಳನ್ನು ಇಲ್ಲಿ ಒದಗಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಕೊವಿನ್ ತಂತ್ರಾಂಶದ ಮುಖ್ಯಸ್ಥ ಆರ್.ಎಸ್.ಶರ್ಮಾ, ಪೂರೈಕೆ ಅನುಗುಣವಾಗಿ ಜನರನ್ನು ಲಸಿಕೆ ತೆಗೆದುಕೊಳ್ಳಲು ಪ್ರೇರೇಪಿಸುವುದಕ್ಕಿಂತಲೂ ಜನರ ಬೇಡಿಕೆ ಹೆಚ್ಚಾಗಿ ಲಸಿಕೆ ಪೂರೈಸಬೇಕಾದ ಪರಿಸ್ಥಿತಿ ಇರುವುದು ನಮಗೆ ಉತ್ತೇಜನ ನೀಡಿದೆ. ಇದುವರೆಗೆ ಸುಮಾರು 50 ಲಕ್ಷಕ್ಕಿಂತಲೂ ಹೆಚ್ಚು ಜನ ಕೊವಿನ್ ತಂತ್ರಾಂಶದ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ನಡುವೆ ಕೊವಿನ್ನಲ್ಲಿ ಕೆಲ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು, ಜನರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವಲ್ಲಿಯೂ ಸಮಸ್ಯೆ ಆಗುತ್ತಿತ್ತು. ಈಗ ಅವೆಲ್ಲವನ್ನೂ ಸರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕಿನ ವಿರುದ್ಧ ಹೋರಾಟ ಮುಂದುವರಿಸಿರುವ ಭಾರತ ಎರಡನೇ ಹಂತದಲ್ಲಿ ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ಮೇಲ್ಪಟ್ಟ ನಿಗದಿತ ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಲಸಿಕೆ ವಿತರಣೆ ನಡೆಸುತ್ತಿದೆ. ಮಾರ್ಚ್ 1ರಿಂದ ಎರಡನೇ ಹಂತದ ಲಸಿಕೆ ಅಭಿಯಾನ ಮುಂದುವರಿದಿದೆ. ಕೊರೊನಾ ಲಸಿಕೆ ನೀಡುವ ಎರಡನೇ ದಿನದಂದು (ಮಾರ್ಚ್ 2), ನಿನ್ನೆ ರಾಜ್ಯಾದ್ಯಂತ ಒಟ್ಟು 6,313 ಜನರು ಮೊದಲ ಲಸಿಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಪ್ರಸ್ತುತ ಹೆಸರು ನೋಂದಾಯಿಸಿಕೊಳ್ಳುವವರು ಗಮನಿಸಬೇಕಾದ ಅಂಶಗಳು
- ಲಸಿಕೆ ಪಡೆಯಲು ಒಂದು ಮೊಬೈಲ್ ಸಂಖ್ಯೆಯಿಂದ 4 ಜನ ಹೆಸರು ನೋಂದಾಯಿಸಿಕೊಳ್ಳಬಹುದು
- ಕೊವಿನ್ ಪೋರ್ಟಲ್ನಲ್ಲಿ www.cowin.gov.in/home ಹೆಸರು ನೋಂದಾಯಿಸಿಕೊಂಡ ಬಳಿಕವೂ ಕೇಂದ್ರ ಬದಲಾಯಿಸಿಕೊಳ್ಳಲು, ದಿನಾಂಕ ಅದಲು ಬದಲು ಮಾಡಿಕೊಳ್ಳಲು ಅಥವಾ ರದ್ದುಪಡಿಸಲು ಅವಕಾಶವಿದೆ
- ಎರಡನೇ ಬಾರಿಗೆ ಲಸಿಕೆ ತೆಗೆದುಕೊಳ್ಳುವಾಗ ಏನಾದರೂ ಸಮಸ್ಯೆಗಳಿದ್ದರೆ ಆಗಲೂ ಲಸಿಕಾ ಕೇಂದ್ರ ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ
- ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರಿಂದ ದೃಢೀಕರಿಸಿದ ವರದಿ ಪಡೆದು ಕೊವಿನ್ ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವ ಮೂಲಕ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಳ್ಳಬಹುದು
- ನೀವು ಮೊದಲು ಯಾವ ಲಸಿಕೆ ಪಡೆದಿರುತ್ತೀರೋ ಅದೇ ಮಾಹಿತಿಯ ಆಧಾರದ ಮೇಲೆ ಎರಡನೇ ಬಾರಿಗೆ ಲಸಿಕೆ ಪಡೆಯಲು ಯಾವೆಲ್ಲಾ ಕೇಂದ್ರಗಳಲ್ಲಿ ಆ ಲಸಿಕೆ ಲಭ್ಯ ಎನ್ನುವುದನ್ನೂ ಕೊವಿನ್ ತೋರಿಸಲಿದೆ
- ಲಸಿಕೆಗೆ ಸಂಬಂಧಿಸಿದ ಪ್ರತಿ ಮಾಹಿತಿಯನ್ನೂ ಕೊವಿನ್ ಸಂಗ್ರಹಿಸಿಟ್ಟುಕೊಳ್ಳುವುದರಿಂದ ಯಾವುದೇ ಗೊಂದಲಕ್ಕೆ ಆಸ್ಪದವಿರುವುದಿಲ್ಲ
- ಲಸಿಕೆ ಪಡೆದ ನಂತರ ಡಿಜಿಟಲ್ ಸಹಿ ಹೊಂದಿದ ಪತ್ರ ಕೊವಿನ್ ಆ್ಯಪ್ನಲ್ಲಿ ಸಿಗಲಿದೆ ಅವಶ್ಯಕತೆಯಿದ್ದಾಗ ಅದನ್ನು ನೀವು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು
- ನಾಗರಿಕರಿಂದ ಹೆಸರು, ಲಿಂಗ ಮತ್ತು ವಯಸ್ಸಿನ ವಿವರಗಳನ್ನು ಮಾತ್ರ ಸಂಗ್ರಹಿಸುವುದರಿಂದ ಮಾಹಿತಿ ಸೋರಿಕೆಯ ಬಗ್ಗೆ ಚಿಂತಿಸಬೇಕಿಲ್ಲ
ಇದನ್ನೂ ಓದಿ: ಕೊರೊನಾ ಲಸಿಕೆ ಹಾಕಿಸಿಕೊಂಡ 102 ವರ್ಷದ ನಿವೃತ್ತ ಸೇನಾಧಿಕಾರಿ ನೀಡಿದ 2 ಕಾರಣಗಳಿವು