West Bengal Election 2021: ಮತ್ತೆ ಟಿಎಂಸಿಗೆ ರಾಜೀನಾಮೆ ನೀಡಿ ಕೇಸರಿ ಪಡೆ ಸೇರಿದ ಜಿತೇಂದ್ರ ತಿವಾರಿ; ಅಂದು ಬಾಗಿಲು ತೆರೆಯದ ಬಿಜೆಪಿ ಈಗ ಒಪ್ಪಿಕೊಂಡಿದ್ದೇಕೆ?
ಜಿತೇಂದ್ರ ತಿವಾರಿ ಇದೀಗ ಬಿಜೆಪಿ ಸೇರಿದ ಬೆನ್ನಲ್ಲೇ ಎರಡು ಪ್ರಶ್ನೆಗಳು ಉದ್ಭವವಾಗುತ್ತವೆ. ಮೊದಲನೇದಾಗಿ ಅಂದು ತಿವಾರಿಯವರನ್ನು ಒಪ್ಪಿಕೊಳ್ಳದ ಬಿಜೆಪಿ ಈಗೇಕೆ ಒಪ್ಪಿಕೊಂಡಿತು? ಮತ್ತೊಂದು, ಮಮತಾ ಬ್ಯಾನರ್ಜಿಯವರ ಬಳಿ ಕ್ಷಮೆ ಕೇಳಿ ವಾಪಸ್ ಬಂದಿದ್ದ ತಿವಾರಿ ಮತ್ಯಾಕೆ ಅದೇ ಪಕ್ಷವನ್ನು ದೂಷಿಸಿ ಬಿಜೆಪಿಗೆ ಹೋದರು ಎಂಬುದು.
ರಾಜಕೀಯದಲ್ಲಿ ಏನೆಲ್ಲ ವಿಚಿತ್ರಗಳು ನಡೆಯುತ್ತವೆ ನೋಡಿ.. ನಿಮಗೆ ಜಿತೇಂದ್ರ ತಿವಾರಿ ನೆನಪಿರಬಹುದು. ಕಳೆದ ಡಿಸೆಂಬರ್ನಲ್ಲಿ ಟಿಎಂಸಿ ಸುವೇಂದು ಅಧಿಕಾರಿ ಪಕ್ಷ ತೊರೆದು ಬಿಜೆಪಿ ಸೇರಿದ ಬೆನ್ನಲೇ ಈ ಜಿತೇಂದ್ರ ತಿವಾರಿ ಸಹ ತಮ್ಮ ಶಾಸಕ ಮತ್ತು ಅಸಾನ್ಸೋಲ್ ಮಹಾನಗರ ಪಾಲಿಕೆ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿ, ಟಿಎಂಸಿಯನ್ನೇ ತೊರೆದು ಬಿಜೆಪಿ ಸೇರಲು ಮುಂದಾಗಿದ್ದರು. ಆದರೆ ಆಗ ಅವರಿಗೆ ಬಿಜೆಪಿ ಬಾಗಿಲು ತೆರೆದಿರಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ತಿವಾರಿಯಿಂದ ತುಂಬ ತೊಂದರೆಗೆ ಒಳಗಾಗಿದ್ದಾರೆ. ಅಂಥ ವ್ಯಕ್ತಿ ನಮ್ಮ ಪಕ್ಷಕ್ಕೆ ಬೇಡ ಎಂದು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಹೇಳಿದ್ದರು. ಹೈಕಮಾಂಡ್ ಕೂಡ ಇದೇ ತೀರ್ಮಾನ ಮಾಡಿದಂತಿತ್ತು. ಒಟ್ಟಿನಲ್ಲಿ ಬಿಜೆಪಿ ಸೇರಲಾಗದ ಜಿತೇಂದ್ರ ತಿವಾರಿ, ಹಳೇ ಪಕ್ಷವೇ ಗತಿ ಎಂದು ಟಿಎಂಸಿಗೆ ವಾಪಸ್ ಆಗಿದ್ದರು. ಮಮತಾ ಬ್ಯಾನರ್ಜಿಯವರ ಬಳಿ ಕ್ಷಮೆ ಕೇಳಿದ್ದರು.
ಆದರೆ ಈಗ ಜಿತೇಂದ್ರ ತಿವಾರಿ ಮತ್ತೆ ಟಿಎಂಸಿ ತೊರೆದಿದ್ದಾರೆ.. ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರು ಪಶ್ಚಿಮ ಬರ್ಧಮಾನ್ ಜಿಲ್ಲೆಯ ಪಾಂಡಬೇಶ್ವರ ಕ್ಷೇತ್ರದಿಂದ ಎರಡು ಬಾರಿ ಗೆದ್ದವರು. ಇಂದು ಪಶ್ಚಿಮಬಂಗಾಳ ರಾಜ್ಯಾಧ್ಯಕ್ಷ ದಿಲೀಪ್ ಘೋಶ್ ನೇತೃತ್ವದಲ್ಲಿ ಹೂಗ್ಲಿ ಜಿಲ್ಲೆಯ ಶ್ರೀರಾಮಪುರದಲ್ಲಿ ನಡೆದ ಕಾರ್ಯದಲ್ಲಿ ಕೇಸರಿ ಪಡೆಗೆ ಸೇರಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ರಾಜ್ಯದ ಅಭಿವೃದ್ಧಿ ಕೆಲಸ ಮಾಡಲು ಬಯಸುತ್ತೇನೆ. ಹಾಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಟಿಎಂಸಿಯಲ್ಲಿದ್ದರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲೂ ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಮತ್ತೆ ಹೇಗೆ ಬಿಜೆಪಿಗೆ ಹೋದರು? ಜಿತೇಂದ್ರ ತಿವಾರಿ ಇದೀಗ ಬಿಜೆಪಿ ಸೇರಿದ ಬೆನ್ನಲ್ಲೇ ಎರಡು ಪ್ರಶ್ನೆಗಳು ಉದ್ಭವವಾಗುತ್ತವೆ. ಮೊದಲನೇದಾಗಿ ಅಂದು ತಿವಾರಿಯವರನ್ನು ಒಪ್ಪಿಕೊಳ್ಳದ ಬಿಜೆಪಿ ಈಗೇಕೆ ಒಪ್ಪಿಕೊಂಡಿತು? ಮತ್ತೊಂದು, ಮಮತಾ ಬ್ಯಾನರ್ಜಿಯವರ ಬಳಿ ಕ್ಷಮೆ ಕೇಳಿ ವಾಪಸ್ ಬಂದಿದ್ದ ತಿವಾರಿ ಮತ್ಯಾಕೆ ಅದೇ ಪಕ್ಷವನ್ನು ದೂಷಿಸಿ ಬಿಜೆಪಿಗೆ ಹೋದರು ಎಂಬುದು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಭ್ಯರ್ಥಿಗಳ ಪಟ್ಟಿ ಇಂದು-ನಾಳೆಯಷ್ಟರಲ್ಲಿ ಬಿಡುಗಡೆಯಾಗಲಿದೆ. ಈ ಬಾರಿ ಪಕ್ಷ ಹಾಲಿ ಶಾಸಕರನ್ನು ಕೈಬಿಡಲಿದೆ. ಶೇ.30ರಷ್ಟು ಹೊಸಮುಖಗಳಿಗೆ ಮಣೆಹಾಕಲಿದೆ. ಅದರಲ್ಲೂ ಮಹಿಳೆಯರಿಗೂ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ ಎಂದು ಸ್ಪಷ್ಟವಾಗಿದೆ. ಬಹುಶಃ ಇದೇ ಕಾರಣಕ್ಕೆ ಜಿತೇಂದ್ರ ತಿವಾರಿ ಬಿಜೆಪಿಗೆ ಹೋಗಿರಬಹುದು. ಒಮ್ಮೆ ಪಕ್ಷ ತೊರೆದಿದ್ದರಿಂದ ತಮಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನವೇ ಎಂದು ಭಾವಿಸಿ ತಿವಾರಿ ಬಿಜೆಪಿ ದಾರಿ ಹಿಡಿದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಡಿಸೆಂಬರ್ನಲ್ಲಿ ಜಿತೇಂದ್ರ ತಿವಾರಿಯನ್ನು ಸೇರಿಸಿಕೊಳ್ಳದ ಬಿಜೆಪಿ ಈಗ ಹೇಗೆ ಸೇರಿಸಿಕೊಂಡಿತು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ.
2016ರಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ಕೇವಲ 3 ಕ್ಷೇತ್ರಗಳನ್ನು ಗೆದ್ದಿತ್ತು. ಅಲ್ಲಿ ಬಿಜೆಪಿ ಶಾಸಕರು, ಮುಖಂಡರು ಅಷ್ಟು ಪ್ರಭಾವಿಗಳು ಯಾರೂ ಇಲ್ಲ. ಹೋದರೆ ಟಿಎಂಸಿಯಿಂದ ಬಿಜೆಪಿ ಸೇರ್ಪಡೆಯಾದವರೇ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ. ಈಗಾಗಲೇ ಟಿಎಂಸಿಯಿಂದ ಹಲವು ಪ್ರಮುಖರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದೀಗ ಆ ಸಾಲಿಗೆ ಜಿತೇಂದ್ರ ತಿವಾರಿಯೂ ಸೇರಿದ್ದಾರೆ.