Emergency: ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಣಯ, ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ: ರಾಹುಲ್​ ಗಾಂಧಿ

Rahul Gandhi: 1975ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಆ ಸಂದರ್ಭದಲ್ಲಿ ಏನಾಗಿತ್ತೋ ಅದು ತಪ್ಪು. ಆದರೆ, ಅಂದಿನ ಸ್ಥಿತಿ ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ ಭಿನ್ನವಾಗಿತ್ತು.

  • TV9 Web Team
  • Published On - 11:32 AM, 3 Mar 2021
Emergency: ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಣಯ, ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ: ರಾಹುಲ್​ ಗಾಂಧಿ
ಇಂದಿರಾ ಗಾಂಧಿ - ರಾಹುಲ್​ ಗಾಂಧಿ

ದೆಹಲಿ: ಇಂದಿರಾ ಗಾಂಧಿ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಒಂದು ತಪ್ಪು ನಿರ್ಣಯ ಎಂದು ಇಂದಿರಾ ಗಾಂಧಿ ಮೊಮ್ಮಗ ಹಾಗೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮತ್ತು ಭಾರತದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರ ಜೊತೆಗಿನ ಸಂವಾದದಲ್ಲಿ ತುರ್ತು ಪರಿಸ್ಥಿತಿ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಹುಲ್​ ಗಾಂಧಿ, ನಿಸ್ಸಂದೇಹವಾಗಿ ಅದೊಂದು ತಪ್ಪು ನಿರ್ಧಾರವಾಗಿತ್ತು. ನನ್ನ ಅಜ್ಜಿ (ಇಂದಿರಾ ಗಾಂಧಿ) ಸಹ ಇದನ್ನೇ ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ.

1975ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ. ಆ ಸಂದರ್ಭದಲ್ಲಿ ಏನಾಗಿತ್ತೋ ಅದು ತಪ್ಪು. ಆದರೆ, ಅಂದಿನ ಸ್ಥಿತಿ ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ ಭಿನ್ನವಾಗಿತ್ತು. ಮೇಲಾಗಿ ಕಾಂಗ್ರೆಸ್ ಯಾವುದೇ ಹಂತದಲ್ಲಿ ದೇಶದ ಸಾಂವಿಧಾನಿಕ ಚೌಕಟ್ಟನ್ನು ವಶಪಡಿಸಲು ಪ್ರಯತ್ನಿಸಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತೆಯೇ, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಂವಿಧಾನವನ್ನು ನೀಡಿದ, ಸಮಾನತೆಗಾಗಿ ನಿಂತ ಕಾಂಗ್ರೆಸ್‌ನ ಆಂತರಿಕ ಪ್ರಜಾಪ್ರಭುತ್ವವನ್ನು ಯಾವಾಗಲೂ ಬೆಂಬಲಿಸುವುದಾಗಿ ಹೇಳಿರುವ ರಾಹುಲ್​ ಗಾಂಧಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಟೀಕಿಸಿದ್ದಾರೆ.

ಆರ್‌ಎಸ್‌ಎಸ್‌ ಕುರಿತಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ದೇಶದ ಸಾಂವಿಧಾನಿಕ ವ್ಯವಸ್ಥೆಗೆ ತನ್ನ ಜನರನ್ನು ತುಂಬುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಲದೇ ನಾವು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದರೂ ಸಾಂವಿಧಾನಿಕ ಚೌಕಟ್ಟಿನಲ್ಲಿ ಆರ್‌ಎಸ್‌ಎಸ್ ಜನರಿಂದ ಮುಕ್ತಿ ಪಡೆಯುವುದು ಅಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ. ತುರ್ತು ಪರಿಸ್ಥಿತಿ ನಂತರ ಅದರ ಲಾಭವನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ತೆಗೆದುಕೊಂಡಿದೆ. ಆದರೂ, ಇಂದಿಗೂ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಬೇರೆ ಬೇರೆ ರೀತಿಯಲ್ಲಿ ಟೀಕಿಸುವುದನ್ನು ಬಿಟ್ಟಿಲ್ಲ ಎಂದು ಹೇಳಿದ್ದಾರೆ.

ರಾಹುಲ್​ ಗಾಂಧಿ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಸೃಷ್ಟಿಮಾಡಿದ್ದು ಚರ್ಚೆಗೆ ಕಾರಣವಾಗಿದೆ. ತುರ್ತು ಪರಿಸ್ಥಿತಿ ನಿರ್ಣಯ ಸರಿ ಇಲ್ಲ ಎಂದು ಹೇಳಿರುವುದು ಅನೇಕರಿಗೆ ಅಚ್ಚರಿ ಮೂಡಿಸಿದೆ. 1975ರಿಂದ 1977ರ ತನಕ 21 ತಿಂಗಳು ಅಂದಿನ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಿದ್ದರು ಎಂಬ ಆರೋಪವನ್ನು ಕಾಂಗ್ರೆಸ್ಸೇತರ ಪಕ್ಷಗಳು ಇಂದಿಗೂ ಮಾಡುತ್ತಿವೆ. ಇಂತಹ ಸನ್ನಿವೇಶದಲ್ಲಿ ರಾಹುಲ್​ ಗಾಂಧಿಯ ಈ ಹೇಳಿಕೆಗೆ ಪ್ರತಿಪಕ್ಷಗಳು ಹೇಗೆ ಉತ್ತರಿಸಲಿವೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:
ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಪರಿಗಣಿಸಿ -ಸುಪ್ರೀಂ ಮೊರೆಹೋದ 94 ವರ್ಷದ ವೃದ್ಧೆ

ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್​​-ಅಪ್ಸ್​ ತೆಗೆದ ರಾಹುಲ್​ ಗಾಂಧಿ: ವಿಡಿಯೋ ವೈರಲ್​