ಶಿಗ್ಗಾಂವಿ ಉಪಚುನಾವಣೆ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಫೈಟ್: ಜಾರಕಿಹೊಳಿ ಫುಲ್ ಕ್ಲಾಸ್

|

Updated on: Jul 03, 2024 | 7:38 PM

ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್​​ನಲ್ಲಿ ಟಿಕೆಟ್ ಫೈಟ್ ಶುರುವಾಗಿದೆ. ಟಿಕೆಟ್ ಆಕಾಂಕ್ಷಿಗಳಾದ ಯಾಸೀರ್ ಖಾನ್ ಪಠಾಣ್, ಅಜ್ಜಂಪೀರ್‌ ಖಾದ್ರಿ ಮಧ್ಯೆ ಟಿಕೆಟ್ ಫೈಟ್ ಜೋರಾಗಿದೆ. ಇಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಐಬಿ ಮುಂದು ಬೆಂಬಲಿಗರಿಂದ ಹೈಡ್ರಾಮಾವೇ ನಡೆದಿದೆ. ಹೀಗಾಗಿ ಎಲ್ಲಾ ಟಿಕೆಟ್ ಆಕಾಂಕ್ಷಿಗಳಿಗೆ ಸಚಿವ ಸತೀಶ್​ ಜಾರಕಿಹೊಳಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಶಿಗ್ಗಾಂವಿ ಉಪಚುನಾವಣೆ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಫೈಟ್: ಜಾರಕಿಹೊಳಿ ಫುಲ್ ಕ್ಲಾಸ್
ಶಿಗ್ಗಾಂವಿ ಉಪಚುನಾವಣೆ ಟಿಕೆಟ್​ಗಾಗಿ ಕಾಂಗ್ರೆಸ್​ನಲ್ಲಿ ಫೈಟ್, ಜಾರಿಹೊಳಿ ಫುಲ್ ಕ್ಲಾಸ್
Follow us on

ಹಾವೇರಿ, ಜುಲೈ 03: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹಾವೇರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಶಿಗ್ಗಾಂವ (Shiggaon) ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಈ ಮಧ್ಯೆ ಕಾಂಗ್ರೆಸ್​ ಟಿಕೆಟ್ ಫೈಟ್​ ಶುರುವಾಗಿದೆ. ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಮತ್ತು ಯಾಸೀರ್ ಖಾನ್ ಪಠಾಣ್ ನಡುವೆ ಟಿಕೆಟ್​ಗಾಗಿ ಫೈಟ್​ ನಡೆದಿದೆ. ಇಬ್ಬರು ಬೆಂಬಲಿಗರಿಂದ ಶಿಗ್ಗಾಂವಿ ಐಬಿ ಮುಂದೆ ಹೈಡ್ರಾಮಾವೇ ನಡೆದಿದೆ. ಟಿಕೆಟ್ ಆಕಾಂಕ್ಷಿಗಳ ಜೊತೆ ಸಚಿವ ಸತೀಶ್​ ಜಾರಕಿಹೊಳಿ ಜಿಲ್ಲೆಯ ಶಿಗ್ಗಾಂವಿ ‌ಪ್ರವಾಸಿ ಮಂದಿರದಲ್ಲಿ ಪ್ರತ್ಯೇಕ ಚರ್ಚೆ ಮಾಡಿ, ಇಬ್ಬರಿಗೂ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಆಕಾಂಕ್ಷಿಗಳಿಗೆ ಸಚಿವ ಸತೀಶ್​ ಜಾರಕಿಹೊಳೆ ಖಡಕ್ ವಾರ್ನಿಂಗ್

ಟಿಕೆಟ್ ಆಕಾಂಕ್ಷಿಗಳಾದ ಯಾಸೀರ್ ಖಾನ್ ಪಠಾಣ್, ಅಜ್ಜಂಪೀರ್‌ ಖಾದ್ರಿ ಹಾಗೂ ಸೋಮಣ್ಣ ಬೇವಿನಮರದ, ಆರ್.ಶಂಕರ್, ರಾಜು ಕುನ್ನೂರ್ ಜೊತೆಗೆ ಮಾತುಕತೆ ಮಾಡಿದ ಸತೀಶ್​ ಜಾರಕಿಹೊಳಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ನಾವು ಶಿಗ್ಗಾಂವಿ ಉಪಚುನಾವಣೆಯನ್ನ ಗೆಲ್ಲಬೇಕಾಗಿದೆ. ಹೀಗೆ ಕಚ್ಚಾಡಿಕೊಂಡು ಹೋದರೆ ಬಹಳ‌ ಕಷ್ಟ ಆಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಯಾರಿಗೇ ಟಿಕೆಟ್ ಕೊಟ್ರೂ ಶಿಗ್ಗಾಂವಿ ಕ್ಷೇತ್ರ ನನ್ನ ಕೈಬಿಟ್ಟು ಹೋಗಲ್ಲ: ಬೊಮ್ಮಾಯಿ ಅಚ್ಚರಿ ಹೇಳಿಕೆ

ಇಡೀ ಸರ್ಕಾರವೇ ನಿಂತು ಉಪಚುನಾವಣೆ ನಡೆಸಲಿದೆ. ಇನ್ನೂ ಬೈಎಲೆಕ್ಷನ್ ದಿನಾಂಕವೇ ಘೋಷಣೆಯಾಗಿಲ್ಲ. ಈಗಲೇ ನೀವು ಹೀಗೆ ಮಾಡಿದರೆ ಹೇಗೆ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ಇಂದಿನ ಬೆಳವಣಿಗೆ ನನಗೆ ಬೇಸರ ತರಿಸಿದೆ. ಇಂತಹ ಬೆಳವಣಿಗೆಗಳಿಂದಲೇ ಇಲ್ಲಿ ಸೋಲುತ್ತಿದ್ದೇವೆ. ಅಶಿಸ್ತು ನಡೆಯಲ್ಲ. ಎಲ್ಲರೂ ಒಂದುಗೂಡಿ ಚುನಾವಣೆ ಎದುರಿಸಬೇಕು ಎಂದು ಹೇಳಿದ್ದಾರೆ.

ಯಾಸೀರ್ ಖಾನ್ ಪಠಾಣ್ ಬೆಂಬಲಿಗರಿಂದ ಖಾದರಿಗೆ ಬಿಜೆಪಿ ಏಜೆಂಟರ್ ಎಂದು ಘೋಷಣೆ ಕೂಗಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಖಾದ್ರಿ ಬಿಜೆಪಿ ಏಜೆಂಟ್​ರಂತೆ ಕೆಲಸ ಮಾಡಿದ್ದಾರೆ ಎನ್ನುವ ಆರೋಪವಿದೆ.

ಇದನ್ನೂ ಓದಿ: ಹಾವೇರಿ: ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನ, ನಾನು ಗ್ಯಾರಂಟಿ ಕೊಡ್ತೇನೆ-ಬಸವರಾಜ್​ ಬೊಮ್ಮಾಯಿ

ಅಜ್ಜಂಪೀರ್‌ ಖಾದ್ರಿರಿಗೆ ಟಿಕೆಟ್ ನೀಡಬಾರದು, ಬದಲಾಗಿ ಯಾಸೀರ್ ಖಾನ್ ಪಠಾಣ್​ಗೆ ಟಿಕೇಟ್ ನೀಡುವಂತೆ ಒತ್ತಾಯಿಸಿದ್ದಾರೆ. ಇತ್ತ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಖಾದ್ರಿಗೆ ನೀಡುವಂತೆ ಘೋಷಣೆ ಹಾಕಲಾಗಿದ್ದು, ಐಬಿಯಲ್ಲಿ ಕಾರ್ಯಕರ್ತರ ಅಭಿಪ್ರಾಯವನ್ನು ಸತೀಶ್ ಜಾರಕಿಹೊಳಿ ಆಲಿಸಿದ್ದಾರೆ.

ಡಿಸಿಎಂ ಹುದ್ದೆ ವಿಚಾರವಾಗಿ ಮಾತನಾಡಿದ ಅವರು, ಡಿಸಿಎಂ, ಸಿಎಂ ಏನೂ ಪ್ರಶ್ನೆ ಇಲ್ಲ, ನಮ್ಮ ಅಜೆಂಡಾದಲ್ಲಿ ಈಗ ಅದು ಇಲ್ಲ. ಉಪ ಚುನಾವಣೆ ಗೆಲ್ಲುವುದೇ ನಮ್ಮ ಗುರಿ. ನನ್ನ ಮೇಲೆ ಪಕ್ಷ ಇದೆ, ಬೇಕು ಬೇಡ ಅಂತಾ ಪಕ್ಷ ನಿರ್ಧಾರ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.