ಹಾವೇರಿ : ತಂದೆ- ತಾಯಿ ಪ್ರತಿಯೊಬ್ಬರ ಬಾಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ ಆಧುನಿಕ ಯುಗದಲ್ಲಿ ತಂದೆ-ತಾಯಿ ಮತ್ತು ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಅಲ್ಲದೆ ಸಂಬಂಧಗಳ ಬೆಲೆ ಅರಿಯದೇ ಪೋಷಕರನ್ನು ವೃದ್ಧಾಶ್ರಮದಲ್ಲಿ ಬಿಡುತ್ತಿದ್ದಾರೆ. ಆದರೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಈ ಮಾತುಗಳಿಗೆ ವಿರುದ್ಧವಾದ ಸನ್ನಿವೇಶವೊಂದು ಸೃಷ್ಟಿಯಾಗಿದೆ. ಜಿಲ್ಲೆಯ ಮೂರು ಮಕ್ಕಳು ತಮ್ಮ ತಂದೆ ಸಾವಿಗೀಡಾದ ಮೇಲೆ ಅವರ ನೆನೆಪಿಗಾಗಿ ದೇವಾಲಯ ಕಟ್ಟಿಸಿದ್ದು, ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ತಿಳವಳ್ಳಿ ಗ್ರಾಮದ ವಿಷ್ಣಪ್ಪ ರಾಯ್ಕರ ಎಂಬುವವರಿಗೆ ಮೂರು ಗಂಡು ಮಕ್ಕಳು. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಿಷ್ಣಪ್ಪ, ಕಷ್ಟಪಟ್ಟು ಜೀವನ ನಡೆಸಿದ್ದರು. ಮೂವರು ಮಕ್ಕಳಿಗೆ ಬಡತನದಲ್ಲೇ ಉತ್ತಮ ಶಿಕ್ಷಣ ಕೊಡಿಸಿದ್ದರು. ಹಿರಿಯ ಪುತ್ರ ಸಂಜೀವ ಎಂಬಿಎ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಎರಡನೆ ಮಗ ರಾಜೀವ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾನೆ. ಮೂರನೆ ಮಗ ರಾಘವೇಂದ್ರ ವೈದ್ಯನಾಗಿ ಸೇವೆ ಮಾಡುತ್ತಿದ್ದಾನೆ. ವಿಷ್ಣಪ್ಪ, ಕಳೆದ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಏನೇ ಮಾಡಿದರೂ ತಂದೆಯ ಋಣ ತೀರಿಸುವುದಕ್ಕೆ ಸಾಧ್ಯವಿಲ್ಲ ಎಂದು ಅರಿತ ವಿಷ್ಣಪ್ಪನ ಮಕ್ಕಳು ತಂದೆಯ ನೆನಪು ಅಚ್ಚಳಿಯದಂತೆ ಹಾಗೆ ಇರಲು ಗ್ರಾಮದ ಹೊರವಲಯದಲ್ಲಿರುವ ತಮ್ಮ ತೋಟದಲ್ಲಿ ತಂದೆಗೊಂದು ದೇವಾಲಯ ನಿರ್ಮಿಸಿದ್ದಾರೆ.
ತಂದೆ ನಮ್ಮನ್ನು ಕಷ್ಟಪಟ್ಟು ಓದಿಸಿ ಉತ್ತಮ ಭವಿಷ್ಯ ರೂಪಿಸಿಕೊಟ್ಟಿದ್ದಾರೆ. ತಂದೆಯನ್ನು ನೆನಯಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕಷ್ಟಪಟ್ಟು ನಮ್ಮನ್ನು ಬೆಳೆಸಿದ ತಂದೆ ಯಾವಾಗಲೂ ನಮ್ಮ ನೆನಪಿನಲ್ಲೇ ಇರಲಿ ಎನ್ನುವ ಕಾರಣಕ್ಕೆ ಎಲ್ಲರೂ ಸೇರಿ ನಮ್ಮ ತೋಟದಲ್ಲಿ ತಂದೆಗೊಂದು ದೇವಾಲಯ ನಿರ್ಮಿಸಿದ್ದೇವೆ. ತಂದೆಯರ ಹುಟ್ಟಿದ ದಿನ , ತೀರಿಕೊಂಡ ದಿನ ಮನೆಯವರೆಲ್ಲರೂ ಸೇರಿಕೊಂಡು ತಂದೆಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ಉಳಿದ ದಿನಗಳಲ್ಲೂ ತೋಟಕ್ಕೆ ಬಂದಾಗೊಮ್ಮೆ ದೇವಸ್ಥಾನದಲ್ಲಿ ತಂದೆಗೆ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತೇವೆ ಎಂದು ವಿಷ್ಣಪ್ಪರ ಪುತ್ರ ರಾಜೀವ ತಿಳಿಸಿದ್ದಾರೆ.
ಗ್ರಾಮದ ಹೊರವಲಯದ ತೋಟದಲ್ಲಿ ತಂದೆ ವಿಷ್ಣಪ್ಪನ ಹೆಸರಿನಲ್ಲಿ ದೇವಾಲಯ ನಿರ್ಮಿಸಿದ್ದಾರೆ. 40000ರೂಪಾಯಿ ಖರ್ಚು ಮಾಡಿ ಕಾರ್ಗಲ್ಲಿನಿಂದ ತಂದೆಯ ಮೂರ್ತಿ ತಯಾರಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ. ತಂದೆಯನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ತಂದೆ ತೀರಿಹೋದ ಕೆಲವೇ ತಿಂಗಳುಗಳಲ್ಲಿ ತಂದೆಗೊಂದು ದೇವಾಲಯ ನಿರ್ಮಾಣ ಮಾಡಿದ್ದು, ನಿತ್ಯವೂ ತೋಟದಲ್ಲಿ ವಿಷ್ಣಪ್ಪನವರ ಮೂರ್ತಿಗೆ ಪೂಜೆ ಮಾಡಲಾಗುತ್ತದೆ.
ತಂದೆ ಮತ್ತು ತಾಯಿ ಪ್ರತಿಯೊಬ್ಬ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯಾರ ಋಣವನ್ನು ತೀರಿಸಿದರೂ ತಂದೆ ಮತ್ತು ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಅದೆಷ್ಟೋ ಮಕ್ಕಳು ತಂದೆ ಬದುಕಿದ್ದಾಗಲೆ ತಂದೆಯನ್ನು ದೂರ ಮಾಡಿರುತ್ತಾರೆ. ಇನ್ನು ಕೆಲವರು ತಂದೆ ಸತ್ತ ಮೇಲೆ ಅವರನ್ನು ನೆನಪು ಮಾಡುವುದೆ ಇಲ್ಲ. ಅಂತಹದರಲ್ಲಿ ತಂದೆ ಸತ್ತ ನಂತರ ತಂದೆಯ ನೆನಪಿನಲ್ಲಿ ದೇವಾಲಯ ನಿರ್ಮಿಸಿ, ತಂದೆ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುತ್ತಿರುವ ರಾಯ್ಕರ ಸಹೋದರರ ಪಿತೃ ಪ್ರೇಮ ಇತರರಿಗೆ ಮಾದರಿ ಆಗಿದೆ.
ಇದನ್ನೂ ಓದಿ:
ವಿಜಯಪುರ ಜಿಲ್ಲೆಯಲ್ಲೊಂದು ವಿಶೇಷ ಕಾರ್ಯ; ತಂದೆ-ತಾಯಿಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಿರುವ ಪುತ್ರರು
ಕಡು ಬಡತನ.. ತಮ್ಮ, ತಂದೆಯ ಅಕಾಲಿಕ ಮರಣ; ಟೆಂಪೋ ಡ್ರೈವರ್ ಮಗ ಟೀಂ ಇಂಡಿಯಾದ ಕದ ತಟ್ಟಿದ ಕತೆಯಿದು