ಹಾವೇರಿ, ಸೆ.26: ಚಿನ್ನ (Gold)ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ ಅಂದರೆ, ಕೊಂಡುಕೊಳ್ಳುವುದು ಬಿಡುವುದಿಲ್ಲ. ಹಾಗೇನಾದರೂ ಇದ್ದರೆ, ಹುಷಾರ್ ಆಗಿರುವುದು ಒಳ್ಳೆಯದು. ಹೌದು, ಕಡಿಮೆ ಬೆಲೆಗೆ ಚಿನ್ನ ಕೊಡುವುದಾಗಿ ನಂಬಿಸಿ ಬೆಂಗಳೂರು ಮೂಲದ ಲಕ್ಷ್ಮಣ ಚೆನ್ನಬಸ್ಸಯ್ಯ ಎಂಬ ವ್ಯಕ್ತಿಗೆ 25 ಲಕ್ಷ ರೂಪಾಯಿ ವಂಚಿಸಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ. ಕರಣ್, ಪ್ರವೀಣ್ ಬಂಧಿತ ಆರೋಪಿಗಳು. ಇವರಿಂದ 12 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದ್ದು, ಮತ್ತಿಬ್ಬರು ಆರೋಪಿಗಳಾದ ಸಂತೋಷ್, ಪ್ರಕಾಶ್‌ಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಸಿದ್ದಾರೆ.
ಬೆಂಗಳೂರು ಮೂಲದ ಲಕ್ಷ್ಮಣ ಚೆನ್ನಬಸ್ಸಯ್ಯ ಎಂಬ ವ್ಯಕ್ತಿಗೆ ಹರಪ್ಪಣಹಳ್ಳಿ ತಾಲೂಕಿನ ಹೊಳಲು ಗ್ರಾಮದ ಬಳಿ ಎರಡು ನಾಣ್ಯ ಕೊಟ್ಟು ನಂಬಿಸಿದ್ದಾರೆ. ಮೊದಲು ಅಸಲಿ ಚಿನ್ನವನ್ನು ಕಡಿಮೆ ಬೆಲೆಗೆ ಕೊಟ್ಟು ನಂಬಿಸಿದ ಇವರು, ಎರಡು ಕೆ.ಜಿ ಚಿನ್ನ ಕೊಡ್ತೆವಿ ಎಂದು ಬೆಂಗಳೂರಿನಿಂದ ಶಿಗ್ಗಾಂವಿಗೆ ಕರೆಸಿದ್ದಾರೆ. ಶಿಗ್ಗಾಂವಿ ಹೊರವಲಯದ ಸರ್ವಿಸ್ ರಸ್ತೆ ಬಳಿ 25 ಲಕ್ಷ ರೂಪಾಯಿ ಪಡೆದು, ನಕಲಿ 2 ಕೆಜಿ ಚಿನ್ನದ ನಾಣ್ಯ ನೀಡಿದ್ದರಂತೆ. ಇನ್ನು ಈ ಕುರಿತು ಶಿಗ್ಗಾಂವಿ ಪೊಲಿಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲು ಮಾಡಿದ್ದರು.
ಇದನ್ನೂ ಓದಿ:ಚೈತ್ರಾ ಕುಂದಾಪುರ ವಂಚನೆ ಪ್ರಕರಣ; ಆರೋಪಿಗಳಿಂದ ಶೇ 80ರಷ್ಟು ಹಣ ವಶಪಡಿಸಿಕೊಂಡ ಸಿಸಿಬಿ ಪೊಲೀಸರು
ಇನ್ನು ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಹಾವೇರಿ ಪೊಲೀಸರು, ಕೂಡಲೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದೀಗ ಆರೋಪಿತರಾದ ಕರಣ್ ಮತ್ತು ಪ್ರವೀಣ್ ಇಬ್ಬರನ್ನು ಬಂಧಿಸಿರುವ ಪೊಲೀಸರು, ಇಬ್ಬರ ಕಡೆಯಿಂದ 12 ಲಕ್ಷ ರೂಪಾಯಿ ವಶಪಡಿಕೊಂಡಿದ್ದಾರೆ. ಇನ್ನು ಇಬ್ಬರು ಆರೋಪಿಗಳಾದ ಸಂತೋಷ ಮತ್ತು ಪ್ರಕಾಶ್ ತಲೆಮರೆಸಿಕೊಂಡಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ