ಮತ್ತೆ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2023 | 6:56 PM

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ನನ್ನ ಬಗ್ಗೆ ಏನೇನೋ ಮಾತಾಡಿ ಅಪಪ್ರಚಾರ ನಡೆಸಿದರು. ಅವರಿಗೆ ಜನ ತಕ್ಕ ಉತ್ತರ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಪರೋಕ್ಷವಾಗಿ ಶಾಸಕ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.​  

ಮತ್ತೆ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಗುಡುಗಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​
Follow us on

ಹಾವೇರಿ, ಅಕ್ಟೋಬರ್​​ 29: ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ನನ್ನ ಬಗ್ಗೆ ಏನೇನೋ ಮಾತಾಡಿ ಅಪಪ್ರಚಾರ ನಡೆಸಿದರು. ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಚುನಾವಣೆ ಎದುರಿಸಿದೆ. ಅವರಿಗೆ ಜನ ತಕ್ಕ ಉತ್ತರ ನೀಡಿ ನನ್ನನ್ನು ಗೆಲ್ಲಿಸಿದರು ಎಂದು ಶಾಸಕ ರಮೇಶ್ ಜಾರಕಿಹೊಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.​ ಜಿಲ್ಲೆಯ ಹಾನಗಲ್ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದವರು.

ಪ್ರತಿಯೊಬ್ಬರಿಗೂ 5,000 ಹಣ ನೀಡಿ ಮತ ಪಡೆಯುವೆ ಅಂದಿದ್ದರು. ಇಂದು ರಾಜ್ಯದಲ್ಲಿ ನಮ್ಮ ಸರ್ಕಾರ ಇದೆ, ನಾನು ಮಂತ್ರಿ ಆಗಿರುವೆ. ಜನತೆ ನಮ್ಮ ಜೊತೆ ಇರುವವರೆಗೂ ಏನೂ ಮಾಡಲು ಆಗುವುದಿಲ್ಲ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರೇ ಸಾಕ್ಷಿಯಾಗಿದ್ದಾರೆ ಎಂದರು.

ಇದನ್ನೂ ಓದಿ: ಸಿಎಂ, ಡಿಸಿಎಂ ಸಿದ್ಧಪಡಿಸಿದ ನಿಗಮ ಮಂಡಳಿ ಪಟ್ಟಿ ಟಿವಿ9ಗೆ ಲಭ್ಯ: ಯಾರಿಗೆಲ್ಲಾ ನಿಗಮ ಮಂಡಳಿ ಪಟ್ಟ?

2ಎ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಮೀಸಲಾತಿ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುತ್ತೇವೆ. ಪಂಚಮಸಾಲಿ ಸಮುದಾಯಕ್ಕೆ ಸೂಕ್ತ ಮೀಸಲಾತಿ ಸಿಗಬೇಕು. ಸರ್ಕಾರದ ಒಳಗೂ, ಹೊರಗೂ ನಾನು ಹೋರಾಟ ಮಾಡುತ್ತೇನೆ. ಮೀಸಲಾತಿ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಯಾರೇ ಸಿಎಂ ಆಗಲಿ ನಮಗೆ ಅಭ್ಯಂತರ ಇಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಕಾಂಗ್ರೆಸ್ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರವಾಗಿ ಮಾತನಾಡಿ, ನಾನು ಆ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಅಧ್ಯಕ್ಷರ ಅಪ್ಪಣೆಯನ್ನು ನಾವು ಚಾಚೂತಪ್ಪದೆ ನಿರ್ವಹಿಸಬೇಕು. ಯಾರೇ ಮುಖ್ಯಮಂತ್ರಿಯಾದರು ಕೂಡ ನಾವು ಕೆಲಸ ಮಾಡುತ್ತೇವೆ. ಯಾರೇ ಸಿಎಂ ಆಗಲಿ ನಮಗೆ ಅಭ್ಯಂತರ ಇಲ್ಲ. ಸಿಎಂ ಸಿದ್ದರಾಮಯ್ಯ ಒಳ್ಳೆಯ ಕೆಲಸ‌ ಮಾಡಿಕೊಂಡು ಹೋಗುತ್ತಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು 136 ಶಾಸಕರು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿ ಅನಾವರಣ ಮಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಜಿಲ್ಲೆಯ ಹಾನಗಲ್ ತಾಲೂಕಿನ ಸಂವಸಗಿ ಗ್ರಾಮದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ವಿಶೇಷವಾದ ಫೈಬರ್​ನಿಂದ ಮಾಡಿರುವ 11 ಅಡಿ ಎತ್ತರದ ಚನ್ನಮ್ಮ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗಿದೆ. ಈ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ನೋಡಲು ಬೇರೆ ಬೇರೆ ಗ್ರಾಮಗಳಿಂದ ನೂರಾರು ಮಹಿಳಾ ಮಣಿಗಳು ಆಗಮಿಸಿದ್ದರು. ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕರಾದ ಅರುಣುಕುಮಾರ ಪೂಜಾರ, ಶಿವರಾಜ್ ಸಜ್ಜನರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮುಖಂಡರಾದ ರಾಜಶೇಖರ ಕಟ್ಟೆಗೌಡರ ಪ್ರಮುಖರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.