ಸಿಎಂ, ಡಿಸಿಎಂ ಸಿದ್ಧಪಡಿಸಿದ ನಿಗಮ ಮಂಡಳಿ ಪಟ್ಟಿ ಟಿವಿ9ಗೆ ಲಭ್ಯ: ಯಾರಿಗೆಲ್ಲಾ ನಿಗಮ ಮಂಡಳಿ ಪಟ್ಟ?
ಲೋಕಸಭಾ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಸಿಎಂ, ಡಿಸಿಎಂ ನಿಗಮ ಮಂಡಳಿ ನೇಮಕಕ್ಕೆ ಮುಂದಾಗಿದ್ದಾರೆ. ನಿಗಮ ಮಂಡಳಿ ಸ್ಥಾನಮಾನಗಳನ್ನು ನೀಡುವ ಮೂಲಕ ಶಾಸಕರನ್ನು ಸಮಾಧಾನ ಪಡಿಸುವ ತಂತ್ರ ಹೆಣೆಯಲಾಗಿದೆ. ಹಾಗಾದ್ರೆ ಯಾರಿಗೆಲ್ಲ ನಿಗಮ ಮಂಡಳಿ ಲಕ್ ಖುಲಾಯಿಸಲಿದೆ. ಈ ಕೆಳಗಿನಂತಿದೆ ನೋಡಿ ಸಂಭವನೀಯ ಪಟ್ಟಿ.,
ಬೆಂಗಳೂರು (ಅಕ್ಟೋಬರ್ 29): ಕಾಂಗ್ರೆಸ್ ಮನೆಯಲ್ಲಿ ಸಚಿವ ಸ್ಥಾನ ಸಿಗದ ಕೋಪ ಇನ್ನೂ ಆರಿಲ್ಲ. ಹಿರಿತನಕ್ಕೆ ಬೆಲೆ ಕೊಡದಿರುವುದಕ್ಕೆ ಭುಗಿಲೆದ್ದ ಅಸಮಾಧಾನ ಶಮನವಾಗಿಲ್ಲ.. ಇದೆಲ್ಲಕ್ಕೂ ಬ್ರೇಕ್ ಹಾಕಲೆಂದೇ ಕೈ ನಾಯಕರು ಕೊನೆಗೂ ನಿಗಮ ಮಂಡಳಿ ನೇಮಕಾತಿಗೆ ಮುಂದಾಗಿದ್ದಾರೆ. ಸಮಸ್ಯೆಗಳ ಸರಮಾಲೆಯೇ ಇದೆ. ಅನುದಾನ ಸಿಗುತ್ತಿಲ್ಲ. ಸಚಿವರು ಸ್ಪಂದಿಸುತ್ತಿಲ್ಲ ಎಂದು ಶಾಸಕರು ಸಿಡಿದೆದ್ದಿದ್ರು. ಹೀಗಾಗಿ ಶಾಸಕರ ಕೋಪಕ್ಕೆ ಮದ್ದರೆಯಲು ನಿನ್ನೆ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಸುದೀರ್ಘ ಸಭೆ ನಡೆಸಿದ್ದ. ಮೊದಲ ಹಂತದಲ್ಲಿ 25 ನಿಗಮ ಮಂಡಳಿ(boards and corporations) ಭರ್ತಿಗೆ ನಿರ್ಧಾರ ಮಾಡಲಾಗಿದೆ. 3ಕ್ಕಿಂತ ಹೆಚ್ಚು ಬಾರಿ ಗೆದ್ದ ಶಾಸಕರಿಗೆ ಮಣೆ ಹಾಕಲು ತೀರ್ಮಾನ ಮಾಡಲಾಗಿದೆ. ಇದಕ್ಕೆ ಹೈಕಮಾಂಡ್‌ನಿಂದ್ಲೂ ವಾರಂತ್ಯದೊಳಗೆ ಮುದ್ರೆ ಒತ್ತಿಸಲು ಪ್ಲ್ಯಾನ್ ಮಾಡಿದ್ದಾರೆ. ಹಾಗಾದ್ರೆ ಯಾರ್ಯಾರಿಗೆ ನಿಗಮ ಮಂಡಳಿ ಲಕ್ ಖುಲಾಯಿಸಿದೆ ಎನ್ನುವ ಪಟ್ಟಿ ಈ ಕೆಳಗಿನಂತಿ ನೋಡಿ.
ಯಾರಿಗೆಲ್ಲಾ ನಿಗಮ ಮಂಡಳಿ ಪಟ್ಟ?
Tv9ಗೆ ಸಿಎಂ, ಡಿಸಿಎಂ ಸಿದ್ಧಪಡಿಸಿದ ನಿಗಮ ಮಂಡಳಿ ಪಟ್ಟಿ ಲಭ್ಯವಾಗಿದ್ದು, ಬಸವರಾಜ ರಾಯರೆಡ್ಡಿ, ನರೇಂದ್ರಸ್ವಾಮಿ, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್, ಬಂಗಾರಪೇಟೆ ನಾರಾಯಣಸ್ವಾಮಿ, ಗಣೇಶ್ ಹುಕ್ಕೇರಿ, ಕೋಲಾರ ನಂಜೇಗೌಡ, ಬಿ.ಕೆ.ಸಂಗಮೇಶ್, B.R.ಪಾಟೀಲ್, ಎಂ.ವೈ.ಪಾಟೀಲ್, ಬಿ.ಜಿ.ಗೋವಿಂದಪ್ಪ. ರಾಘವೇಂದ್ರ ಹಿಟ್ನಾಳ್, ಪ್ರಸಾದ್ ಅಬ್ಬಯ್ಯ, ಎ.ಆರ್.ಕೃಷ್ಣಮೂರ್ತಿ, ಶಿವಲಿಂಗೇಗೌಡ, ರೂಪ ಶಶಿಧರ್, ರಾಜೇಗೌಡ, ರಘುಮೂರ್ತಿ, ಅನಿಲ್ ಚಿಕ್ಕಮಾದು ಹೆಸರುಗಳನ್ನು ಈಗಾಗಲೇ ಫೈನಲ್ ಮಾಡಲಾಗಿದೆ. ಹೈಕಮಾಂಡ್ ಸೂಚಿಸಿದ್ರೆ ಪಟ್ಟಿಯಲ್ಲಿ ಕೆಲ ಬದಲಾವಣೆ ಸಾಧ್ಯತೆಯಾಗುವ ಸಾಧ್ಯತೆಯಿದೆ.
ಷರತ್ತು ಹಾಕಿದ ಹೈಕಮಾಂಡ್
ನಿಗಮ ಮಂಡಳಿ ನೇಮಕಕ್ಕೆ ಹೈಕಮಾಂಡ್ ಕೂಡ ಗ್ರೀನ್ ಸಿಗ್ನಲ್ ನೀಡಿದೆ. ಆದ್ರೆ, ಕಂಡಿಷನ್ಸ್ ಅಪ್ಲೈ ಎಂದಿದೆ. ಈಗ ನಿಗಮ ಮಂಡಳಿಗೆ ನೇಮಕ ಆಗುವ ಶಾಸಕರು ಮುಂದೆ ಸಚಿವ ಸ್ಥಾನ ಕೇಳುವಂತಿಲ್ಲ. ಅಂತವರನ್ನ ಮುಂದೆ ಸಚಿವ ಸಂಪುಟ ಪುನಾರಚನೆ ಆದಾಗ ಪರಿಗಣಿಸುವಿದಿಲ್ಲ.ಈಗ ನಿಗಮ ಮಂಡಳಿಗೆ ಆಯ್ಕೆ ಆಗುವ ಕಾರ್ಯಕರ್ತರನ್ನ ಎಂಎಲ್‌ಸಿ ಆಯ್ಕೆ ವೇಳೆ ಪರಿಗಣಿಸುವುದಿಲ್ಲ ಎಂದು ಷರತ್ತು ಹಾಕಿದ್ದು, ಈ ಬಗ್ಗೆ ಹೈಕಮಾಂಡ್.ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ಗೆ ಖಡಕ್ ಆಗಿ ತಿಳಿಸಿದೆ. ಹೈಕಮಾಂಡ್ನ ಈ ಷರತ್ತುಗಳನ್ನು ನಿಗಮ ಮಂಡಳಿ ಆಕಾಂಕ್ಷಿಗಳಿಗೂ ಸಹ ಸಿಎಂ, ಡಿಸಿಎಂ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ನಿಗಮ ಮಂಡಳು ಆಕಾಂಕ್ಷಿಗಳು ಗೊಂದಲಕ್ಕೀಡಾಗಿದ್ದಾರೆ.
ನಿಗಮ ಮಂಡಳಿ ನೇಮಕಾತಿ ಕಾರಣ ಏನು?
ಇನ್ನು ಇಷ್ಟು ದಿನ ಸುಮ್ಮನಿದ್ದ ಕೈ ನಾಯಕರು ಈಗ ದಿಢೀರ್ ಸ್ಥಾನಮಾನ ನೀಡೋದಕ್ಕೆ ಮುಂದಾಗಿರೋದಕ್ಕೆ ಕಾರಣವಿದೆ. ಅದೇನು ಎನ್ನುವುದನ್ನು ನೋಡುವುದಾದರೆ, ನಿಗಮ ಮಂಡಳಿ ಸ್ಥಾನಮಾನಗಳನ್ನು ನೀಡುವ ಮೂಲಕ ಶಾಸಕರನ್ನು ಸಮಾಧಾನ ಪಡಿಸುವ ತಂತ್ರ ಹೆಣೆಯಲಾಗಿದೆ. ಈ ಮೂಲಕ ಹಿರಿಯ ಶಾಸಕರನ್ನು ಸಮಾಧಾನ ಪಡಿಸಿದ್ರೆ ಕಿರಿಯ ಶಾಸಕರು ಹೆಚ್ಚಿನ ಟೆನ್ಷನ್ ಕೊಡಲ್ಲ. ಅನುದಾನ ವರ್ಗಾವಣೆ ಬೇಸರಕ್ಕೂ ತಾತ್ಕಾಲಿಕ ಮದ್ದರೆದಂತಾಗುತ್ತದೆ. ನಿಗಮ ಮಂಡಳಿ ನೀಡುವ ಮೂಲಕ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವ ತಂತ್ರವನ್ನೂ ರೂಪಿಸಲಾಗಿದೆ. ಇದ್ರಿಂದ ಇನ್ನಿತರ ಕಾರ್ಯಕರ್ತರಿಗೂ ಮುಂದಿನ ದಿನಗಳ ಭರವಸೆ ಸಿಗಲಿದೆ. ಲೋಕಸಭೆ ಚುನಾವಣೆಗೂ ಮುನ್ನ ಸಹಾಯವಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.)
ಈ ಎಲ್ಲಾ ಪ್ಲ್ಯಾನ್ಗಳನ್ನ ಮಾಡಿ ಸಿಎಂ, ಡಿಸಿಎಂ ನಿಗಮ ಮಂಡಳಿ ನೇಮಕಕ್ಕೆ ಮುಂದಾಗಿದ್ದಾರೆ. ಆದ್ರೆ ಇಲ್ಲಿಗೆ ಎಲ್ಲವೂ ಬಗೆಹರಿದಂತಾಗುತ್ತೆ ಅನ್ನುವಂತಿಲ್ಲ. ನಿಗಮ ಮಂಡಳಿ ನೇಮಕದ ಬಳಿಕ ಮತ್ತಷ್ಟು ಬೇರೆ ರೀತಿಯ ಸಮಸ್ಯೆಗಳು ಹುಟ್ಟುಕೊಳ್ಳಬಹುದು. ನಿಗಮ ಮಂಡಳಿ ಹಂಚಿಕೆ ಬೆನ್ನಲ್ಲೇ ಹಿರಿಯರು ಸಚಿವ ಸ್ಥಾನದ ಬೇಡಿಕೆ ಇಡಬಹುದು. ಬಿ.ಆರ್.ಪಾಟೀಲ್ರಂತಹ ಹಿರಿಯರು ಈಗಾಗಲೇ ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಬಸವರಾಜ ರಾಯರೆಡ್ಡಿ ಮತ್ತು ಈ ಹಿಂದೆ ಸಚಿವರಾಗಿದ್ದವರು ಡಿಮೋಷನ್ ಅಂತಾ ಭಾವಿಸಬಹುದು. ಒಂದೇ ನಿಗಮ ಮಂಡಳಿಗೆ ಅನೇಕರು ಬೇಡಿಕೆ ಇಡಬಹುದು. ಹಿರಿಯರ ಒತ್ತಡ ಸಿಎಂ-ಡಿಸಿಎಂಗೆ ಸವಾಲಾಗಿ ಪರಿಣಮಿಸಬಹುದು.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಸಿಎಂ, ಡಿಸಿಎಂ ನಿಗಮ ಮಂಡಳಿ ನೇಮಕಕ್ಕೆ ಮುಂದಾಗಿದ್ದಾರೆ. ಆದ್ರೆ ಈ ತಂತ್ರಗಾರಿಕೆ ಎಷ್ಟರಮಟ್ಟಿಗೆ ಉಪಯೋಗವಾಗುತ್ತೆ ಎನ್ನುವುದನ್ನ ಕಾದುನೋಡಬೇಕಾಗಿದೆ.
ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ