ಹಾವೇರಿ: ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ ಬಾಲಕ ಸಾವು

|

Updated on: Oct 17, 2024 | 1:59 PM

ಹಾವೇರಿ ಜಿಲ್ಲೆಯ ಎಸ್​ಪಿ ಕಚೇರಿ ಬಳಿಯ ರಸ್ತೆ ಮಳೆ ನೀರು ನಿಂತಿದೆ. ಜೊತೆಗೆ ಕಚೇರಿ ಬಳಿಯ ಚರಂಡಿ ತುಂಬಿ ಹರಿಯುತ್ತಿತ್ತು. ಕಚೇರಿ ಬಳಿ ನಿಂತ ನೀರು ನೋಡಲು ಬಂದ ಬಾಲಕ ಚರಂಡಿಯಲ್ಲಿ ಬಿದ್ದು, ಕೊಚ್ಚಿಕೊಂಡು ಹೋಗಿದ್ದಾನೆ. ಮುಂದೇನಾಯ್ತು ಈ ಸ್ಟೋರಿ ಓದಿ.

ಹಾವೇರಿ: ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ ಬಾಲಕ ಸಾವು
ಬಾಲಕ ನಿವೇದನ್​​, ರಸ್ತೆ ಮೇಲೆ ಹರಿಯುತ್ತಿರುವ ಮಳೆ ನೀರು
Follow us on

ಹಾವೇರಿ, ಅಕ್ಟೋಬರ್​​ 17: ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ನಿವೇದನ್​ ಗುಡಗೇರಿ (12) ಮೃತ ದುರ್ದೈವಿ. ಬಾಲಕ ನಿವೇದನ್​ ಬೆಳಗ್ಗೆ 8.15ರ ಸುಮಾರಿಗೆ ಹಾವೇರಿ (Haveri) ಜಿಲ್ಲೆಯ ಎಸ್​ಪಿ ಕಚೇರಿ ಬಳಿಯ ರಸ್ತೆಯಲ್ಲಿ ನಿಂತ ನೀರು ನೋಡಿಕೊಂಡು ಹೋಗೋಣ ಅಂತ ಬಂದಿದ್ದಾನೆ. ಮಳೆಯ ಅಬ್ಬರಕ್ಕೆ ರಸ್ತೆ ನದಿಯಂತಾಗಿತ್ತು. ಚರಂಡಿ ನೀರಿನಿಂದ ತುಂಬಿತ್ತು. ಇದನ್ನು ತಿಳಿಯದ ಬಾಲಕ ನಿವೇದನ್​​ ರಸ್ತೆ ಎಂದು ತಿಳಿದು ಕಾಲಿಟ್ಟಾಗ ಚರಂಡಿಯೊಳಗೆ ಬಿದ್ದಿದ್ದಾನೆ.

ಈ ವಿಚಾರ ತಿಳಿಯುತ್ತಿದ್ದಂತೆ ನಿವೇದನ್​ ತಾಯಿ ಮೂರ್ಚೆ ಹೋಗಿದ್ದಾರೆ. ವಿಷಯ ತಿಳಿದು ಬಾಲಕ ನಿವೇದನ್​ ಬಿದ್ದ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಕಾರ್ಯಾಚರಣೆ ಆರಂಭಿಸಿದರು. ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ 11:15ಕ್ಕೆ ಬಾಲಕ ನಿವೇದನ್​ ಪತ್ತೆಯಾಗಿದ್ದಾನೆ.

ಬಳಿಕ, ಬಾಲಕ ನಿವೇದನ್​ನನ್ನು ಹಾವೇರಿ ಜಿಲ್ಲಾಸ್ಪತ್ರೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ನಿವೇದನ್​ ಮೃತಪಟ್ಟನು.

ಇದನ್ನೂ ಓದಿ: ಅವೈಜ್ಞಾನಿಕ ಕಾಮಗಾರಿಗೆ ತುಂಗಾ ಮೇಲ್ದಂಡೆ ಕಾಲುವೆ ಒಡೆದು ರೈತರ ಜಮೀನಿಗೆ ನುಗ್ಗಿದ ನೀರು

ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾತನಾಡಿ, ಬಾಲಕ ತಲೆ ಕೆಳಗಾಗಿ ಚರಂಡಿಗೆ ಬಿದ್ದನು. ಕಾಪಾಡಬೇಕು ಅಂದುಕೊಳ್ಳುವಷ್ಟರಲ್ಲಿ ಕೊಚ್ಚಿಕೊಂಡು ಹೋದ ಎಂದು ಹೇಳಿದರು. ಚರಂಡಿ ಸಮಸ್ಯೆ ಈಗಿನದ್ದಲ್ಲ. ಪ್ರತಿ ಬಾರಿಯೂ ಮಳೆ ಬಂದಾಗ ಎಸ್​ಪಿ ಕಚೇರಿ ಬಳಿಯ ರಸ್ತೆ ನದಿಯಂತೆ ಮಾರ್ಪಡುತ್ತೆ. ಈ ಬಗ್ಗೆ ಎಷ್ಟೇ ದೂರು ಕೊಟ್ಟರು ಜಿಲ್ಲಾಡಳಿತ ಮತ್ತು ನಗರಸಭೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದರು.

ಘಟನೆ ಸಂಬಂಧ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಮಾತನಾಡಿ, ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳುತ್ತೇವೆ. ಜೊತೆಗೆ ಮೃತ ನಿವೇದನ್ ಮನೆಗೆ ಸೂಕ್ತ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

ವರದಿ: ಅಣ್ಣಪ್ಪ ಬಾರ್ಕಿ ಟಿವಿ 9 ಹಾವೇರಿ

Published On - 1:53 pm, Thu, 17 October 24