
ಹಾವೇರಿ, ಮೇ 26: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಸಿಕೊಂಡು ವಂಚಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವಂಚಿಸುವ ಸೈಬರ್ ಖದೀಮರು (Cyber criminals) ದೊಡ್ಡ ದೊಡ್ಡ ಅಧಿಕಾರಿಗಳ ಹೆಸರು ಇಲ್ಲಾ, ರಾಜಕಾರಣಿಗಳ ಹೆಸರಿನಲ್ಲಿ ಜನ ಸಾಮಾನ್ಯರನ್ನು ವಂಚಿಸುತ್ತಿದ್ದಾರೆ. ಇದೀಗ ಇಂತಹದೊಂದು ಘಟನೆ ನಡೆದಿದೆ. ಇಲ್ಲಿ ಸೈಬರ್ ಖದೀಮರು ವಂಚನೆಗೆ ಬಳಸಿಕೊಂಡ ಹೆಸರು ಕೇಳಿದರೆ ನಿಜಕ್ಕೂ ನೀವು ದಂಗಾಗುತ್ತೀರಿ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೆಸರಿನಲ್ಲಿ ಸೈಬರ್ ಖದೀಮರು ಕೋಟ್ಯಂತರ ರೂ ಪೀಕಿದ್ದಾರೆ. ರಾಜ್ಯದಲ್ಲಿ ನೂರಾರು ಜನರು ವಂಚನೆಗೊಳಗಾಗಿದ್ದಾರೆ.
ಸೈಬರ್ ಖದೀಮರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನಲ್ಲಿ ಮೊಬೈಲ್ ಆ್ಯಪ್ ಸೃಷ್ಟಿಸಿ ವಂಚನೆಗಿಳಿದಿದ್ದಾರೆ. ವ್ಯಾಪಾರಸ್ಥರು, ವಕೀಲರು, ವಿದ್ಯಾರ್ಥಿಗಳು ಮತ್ತು ಸರ್ಕಾರಿ ನೌಕರರು ಸೇರಿದಂತೆ ಹಲವರಿಗೆ ಸೈಬರ್ ವಂಚಕರಿಂದ ಟೋಪಿ ಹಾಕಲಾಗಿದೆ.
ಇದನ್ನೂ ಓದಿ: ಯಾದಗಿರಿ: ನಿವೃತ್ತ ಮಹಿಳಾ ಅಧಿಕಾರಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ 10 ಲಕ್ಷ ರೂ. ದೋಚಿದ ಸೈಬರ್ ವಂಚಕರು
ಹಾವೇರಿ ಜಿಲ್ಲೆಯಲ್ಲಿಯೇ 15ಕ್ಕೂ ಅಧಿಕ ಜನರು ವಂಚನೆ ಒಳಗಾಗಿದ್ದು, ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ, ಹುಬ್ಬಳ್ಳಿ ಧಾರವಾಡ ಮತ್ತು ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಂಚನೆ ಮಾಡಲಾಗಿದೆ.
ಟ್ರಂಪ್ ಆ್ಯಪ್ ಕುರಿತು ಸೈಬರ್ ಕಳ್ಳರು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಹರಿಬಿಟ್ಟಿದ್ದಾರೆ. ಈ ಜಾಹೀರಾತಿನಲ್ಲಿ ನೀಡಿದ ನಂಬರ್ಗಳಿಗೆ ನೂರಾರು ಜನರು ಕರೆ ಮಾಡಿದ್ದಾರೆ. ಕರೆ ಮಾಡಿದ ಜನರಿಗೆ ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಕೆ ಆಮಿಷ ತೋರಿಸಿ ವಂಚನೆ ಮಾಡಲಾಗಿದೆ.
ಇದನ್ನೂ ಓದಿ: ಅಬ್ಬಬ್ಬಾ ಸೈಬರ್ ವಂಚಕನನ್ನೇ ಯಾಮಾರಿಸಿಯೇ ಬಿಟ್ಲು ಈ ಯುವತಿ, ವಿಡಿಯೋ ವೈರಲ್
ಮೊದಲು ಟ್ರಂಪ್ ಆ್ಯಪ್ಗೆ ಹಣ ಹಾಕಿದವರಿಗೆ ದುಪ್ಪಟ್ಟು ಹಣ ನೀಡಲಾಗಿದೆ. ಬಡ್ಡಿ ಹಣ ನೀಡಿ ನಂಬಿಕೆ ಗಳಿಸಿಕೊಂಡಿದ್ದ ಸೈಬರ್ ವಂಚಕರು, ಬಳಿಕ ಜನ ಹೆಚ್ಚಿನ ಲಾಭಾಂಶದ ಆಸೆಗೆ ಬಿದ್ದು ಕೋಟ್ಯಂತರ ರೂ. ಹಣ ಹಾಕಿದ್ದಾರೆ. ಅತ್ತ ಜನರು ಹಣ ಹಾಕುತ್ತಿದ್ದಂತೆ ಸೈಬರ್ ಕಳ್ಳರು ನಾಪತ್ತೆ ಆಗಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸ್ ದೂರು ದಾಖಲಾಗಿರುವ ಮಾಹಿತಿ ಇಲ್ಲ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:45 am, Mon, 26 May 25