ಹಾವೇರಿ: 900 ಎಕರೆಯ ಐತಿಹಾಸಿಕ ಕೆರೆ ಒತ್ತುವರಿ: ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 02, 2023 | 3:02 PM

ಅದೊಂದು ಸುಮಾರು 900 ಏಕರೆಯ ದೊಡ್ಡ ಕೆರೆ ಎಂದು ಪ್ರಸಿದ್ಧಿ ಪಡೆದಿದೆ. ಆದ್ರೆ, ಕಳೆದ ಕೆಲವು ವರ್ಷಗಳಿಂದ ಒತ್ತುವರಿ ಮಾಡಿದ ಪರಿಣಾಮ ದೊಡ್ಡ ಕೆರೆ ಚಿಕ್ಕ ಕೆರೆಗಳ ರೀತಿ ಆಗಿದೆ. ಹುಳು ಎತ್ತಲು ಸಂಬಂಧ ಪಟ್ಟ ಅಧಿಕಾರಿಗಳ ಕ್ಯಾರೆ ಎನ್ನದ ಹಿನ್ನೆಲೆ, ಮಳೆ ಬಂದಾಗ ತುಂಬವ ನೀರು ಹರಿದು ಹೊಗುತ್ತಿದೆ. ಕೆರೆ ನಂಬಿದ್ದ ಗ್ರಾಮಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಉದ್ಭವಿಸಿದೆ.

ಹಾವೇರಿ: 900 ಎಕರೆಯ ಐತಿಹಾಸಿಕ ಕೆರೆ ಒತ್ತುವರಿ: ಕುಡಿಯುವ ನೀರಿಗಾಗಿ ಗ್ರಾಮಸ್ಥರ ಪರದಾಟ
ಯು ಬಿ ಬಣಕರ್​
Follow us on

ಹಾವೇರಿ, ಸೆ.02: ಜಿಲ್ಲೆಯ ರಟ್ಟೀಹಳ್ಳಿ (Rattihalli) ತಾಲೂಕಿನ ಮದಗಮಾಸೂರು ಕೆರೆಗೆ ತನ್ನದೆ ಆದ ಇತಿಹಾಸವಿದೆ. ಈ ಕೆರೆಯ ಮೇಲೆ ಜಾನಪದ‌ ಹಾಡು ಕೂಡ ಇದೆ. ಆದ್ರೆ, ಈ ಐತಿಹಾಸಿಕ ಕೆರೆ ಇದೀಗ ಮಾಯವಾಗುವ ಭೀತಿ ಕಾಡುತ್ತಿದೆ. ಹೌದು, 900 ನೂರಕ್ಕೂ ಅಧಿಕ ಎಕರೆ ವಿಶಾಲವಾಗಿದ್ದ ಕೆರೆಯನ್ನು ಒತ್ತುವರಿ ಮಾಡಿಕೊಂಡು ಮೆಕ್ಕೆಜೋಳ, ಅಡಿಕೆ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದುಕೊಂಡು ಹಲವರು ಕೃಷಿ ಮಾಡುತ್ತಿದ್ದಾರೆ. ವಿಶಾಲವಾದ ಈ ಕೆರೆಯಲ್ಲಿ ನೀರು ತುಂಬದಂಥಾ ಪರಿಸ್ಥಿತಿ ಇದ್ದು, ಕೆರೆಯಲ್ಲಿ ಸಾಕಷ್ಟು ಪ್ರಮಾಣದ ಹೂಳು ತುಂಬಿಕೊಂಡಿದೆ. ಇದು ಒಂದೆಡೆಯಾದ್ರೆ, ಕೆರೆ ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿಯಾಗಿದೆ.

ಕೆರೆಯ ಸುತ್ತ ಗುಡ್ಡ, ಬೆಟ್ಟ ಸೇರಿದಂತೆ ನಿಸರ್ಗ ನಿರ್ಮಿತವಾದ ಸುಂದರ ಪರಿಸರವಿದೆ. ಪ್ರವಾಸಿ ತಾಣದಂತಿರುವ ಕೆರೆಯನ್ನು ನೋಡಲು ಜನರು ಆಗಮಿಸುತ್ತಾರೆ. ಆದ್ರೆ, ಕೆರೆ ಬಹುತೇಕ ಒತ್ತುವರಿಯಾಗಿದ್ದು, ಒತ್ತುವರಿ ತೆರವು ಮಾಡಿ ಕೆರೆಯನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮದಗಮಾಸೂರು ಕೆರೆ ತುಂಬಿದರೆ, ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ ರೈತರ ಸಾವಿರಾರು ಎಕರೆ ಜಮೀನಿಗೆ ನೀರು ಒದಗಿಸುತ್ತಿತ್ತು. ಆದ್ರೆ, ಕೆರೆ ಒತ್ತುವರಿ ಆಗಿರುವ ಹಿನ್ನಲೆ ಕೆರೆಯಲ್ಲಿ ನೀರು‌‌ ನಿಲ್ಲದಂಥಾ ಪರಿಸ್ಥಿತಿ‌ ನಿರ್ಮಾಣ ಆಗಿದೆ.

ಇದನ್ನೂ ಓದಿ:ಕೊಪ್ಪಳ: ಹೈಕೋರ್ಟ್​ ಆದೇಶ ಉಲ್ಲಂಘಿಸಿ ಕೆರೆ ಒತ್ತುವರಿ ಮಾಡಿದ ಖಾಸಗಿ ಕಂಪನಿ; ಆಕ್ರೋಶ ವ್ಯಕ್ತಪಡಿಸಿದ ರೈತರು

ಕೆರೆಯ ಬಳಿ ಚೆಕ್ ಡ್ಯಾಂ ನಿರ್ಮಿಸಿ ಕೆರೆಯಲ್ಲಿ ನೀರು ನಿಲ್ಲಿಸಬೇಕು. ಕೆರೆಯಲ್ಲಿನ ಹೂಳು ತೆಗೆಸಿ ಕೆರೆಯನ್ನು ಅಭಿವೃದ್ಧಿಪಡಿಸಬೇಕು. ಆದ್ರೆ, ಕೆರೆಯ ಅಭಿವೃದ್ಧಿ ಕೆಲಸ ಮಾತ್ರ ಯಾರಿಂದಲೂ ಆಗುತ್ತಿಲ್ಲ. 900 ಕ್ಕೂ ಅಧಿಕ ಎಕರೆಯಷ್ಟು ದೊಡ್ಡದಾದ ಕೆರೆ ಇದೀಗ ಅಂದಾಜು 400ಎಕರೆಯಷ್ಟು ಮಾತ್ರ ಕಾಣುತ್ತಿದೆ. ಉಳಿದೆಲ್ಲವೂ ಒತ್ತುವರಿ ಆಗಿದ್ದು, ಕೆರೆಯ ಕಾಗದಲ್ಲಿ ಜಮೀನುಗಳು ನಿರ್ಮಾಣ ಆಗಿವೆ. ಪರಿಸ್ಥಿತಿ ಹೀಗೆ ಮುಂದುವರೆದ್ರೆ ಐತಿಹಾಸಿಕ ಮದಗದ ಕೆರೆ ಇತಿಹಾಸದ ಪುಟಗಳನ್ನು ಸೇರುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಕೆರೆಯನ್ನು ಉಳಿಸೋದರ ಜೊತೆಗೆ ಕೆರೆಯ ಅಭಿವೃದ್ಧಿ ಆಗಬೇಕು. ಕೆರೆಯ ಅಭಿವೃದ್ಧಿಯಾದ್ರೆ ರಟ್ಟೀಹಳ್ಳಿ ಮತ್ತು ಹಿರೇಕೆರೂರು ತಾಲೂಕಿನ ರೈತರ ಜಮೀನುಗಳಿಗೆ ನೀರು ಸಿಗಲಿದ್ದು, ಎರಡೂ ತಾಲೂಕುಗಳ ಹಲವು ಗ್ರಾಮಗಳಿಗೆ ಕುಡಿಯುವುದಕ್ಕೆ ನೀರಿನ ಸೌಲಭ್ಯ ಸಿಗುತ್ತದೆ.

ಇನ್ನು ಈ ಕುರಿತು ಶಾಸಕ ಯು.ಬಿ. ಬಣಕಾರ ಮಾತನಾಡಿ ‘ಒತ್ತುವರಿ ತೆರವುಗೊಳಿಸುವುದಕ್ಕೆ ಹಿಂದೆಟು ಹಾಕಿದ್ದಾರೆ. ಕೆರೆಯಲ್ಲಿ ಹೆಚ್ಚು ನೀರು ನಿಲ್ಲುವ ವ್ಯವಸ್ಥೆ ಮಾಡಬೇಕಿದೆ. ಕೆರೆಯಲ್ಲಿ ನೀರು ನಿಂತರೆ ಒತ್ತುವರಿ ಮಾಡಿದ ಜಮೀನು ಎಲ್ಲ ಮುಳುಗಡೆ ಆಗುತ್ತದೆ ಎಂದು ಹೇಳುತ್ತಾರೆ. ಮದಗಮಾಸೂರಿನ ಕೆಂಚಮ್ಮನ ಕೆರೆ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ. ಕೆರೆ ಉಳಿದರೆ ರೈತರ ಜಮೀನಿಗೆ ನೀರಾವರಿ ಒದಗಿಸೋದರ ಜೊತೆಗೆ ಹಲವು ಗ್ರಾಮಗಳಿಗೆ ಕುಡಿಯೋ ನೀರು ಒದಗಿಸಲಿದೆ. ಇದೆಲ್ಲದರ ಜೊತೆಗೆ ಕೆರೆಯ ಸುತ್ತಮುತ್ತಲಿನ ಸುಂದರ ಪರಿಸರದಿಂದ ಕೆರೆಯ ಪ್ರದೇಶ ಒಂದು ಸುಂದರ ಪ್ರವಾಸಿ ತಾಣವಾಗಲಿದೆ.

ಇದನ್ನೂ ಓದಿ:ಹಳಿಯಾಳ: ಊರ ಕೆರೆಯನ್ನು ನುಂಗಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಸಾಕ್ಷಿ, ದುರಂತವೆಂದ್ರೆ ಅಧಿಕಾರಿಗಳೂ ಕ್ರಮೇಣ ಒತ್ತುವರಿ ಮಾಡ್ತಿದಾರೆ!

ಆದರೆ, ಕೆರೆಯ ಅಭಿವೃದ್ಧಿ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಏನೇ ಆಗಲಿ ಕೆರೆ ಒತ್ತುವರಿ ತೆರವುಗೊಳಿಸಿ, ಕೆರೆ ಉಳಿಸೋದರ ಜೊತೆಗೆ ಕೆರೆ ಅಭಿವೃದ್ಧಿಗೆ ಮುಂದಾಗದಿದ್ರೆ ಮುಂದಿನ ದಿನಗಳಲ್ಲಿ ಈ ಭಾಗದ ರೈತರ ಜಮೀನಿಗೆ ನೀರು ಸಿಗುವುದಿರಲಿ. ಜನರು ಕುಡಿಯೋ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗುವುದರಲ್ಲಿ ಎರಡು ಮಾತಿಲ್ಲ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ