ಹಳಿಯಾಳ: ಊರ ಕೆರೆಯನ್ನು ನುಂಗಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಸಾಕ್ಷಿ, ದುರಂತವೆಂದ್ರೆ ಅಧಿಕಾರಿಗಳೂ ಕ್ರಮೇಣ ಒತ್ತುವರಿ ಮಾಡ್ತಿದಾರೆ!

Haliyala Town Municipal Council: ಕೆರೆ ಒತ್ತುವರಿಯಿಂದಾಗಿ ಇದೀಗ ಹಳಿಯಾಳ ಟೌನ್​​​ನಲ್ಲಿರುವ ಆನೆಗುಂದಿ ಬಡಾವಣೆಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀರಾ ಕಡಿಮೆಯಾಗಿದೆ. ಹೀಗಾಗಿ ಕೆರೆ ಒತ್ತುವರಿ ತೆರವುಗೊಳಿಸಿ ಇದಕ್ಕೆ ಬೇಲಿ ಹಾಕಬೇಕು ಎಂದು ಜನ್ರು ಒತ್ತಾಯ ಮಾಡುತ್ತಿದ್ದಾರೆ.

ಹಳಿಯಾಳ: ಊರ ಕೆರೆಯನ್ನು ನುಂಗಿದರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ತಾಜಾ ಸಾಕ್ಷಿ, ದುರಂತವೆಂದ್ರೆ ಅಧಿಕಾರಿಗಳೂ ಕ್ರಮೇಣ ಒತ್ತುವರಿ ಮಾಡ್ತಿದಾರೆ!
ಹಳಿಯಾಳ ಊರ ಕೆರೆಯ ಒತ್ತುವರಿ ಕತೆಯಿದು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 14, 2023 | 2:05 PM

ಆ ನಗರಕ್ಕೆ ಅದು ಪ್ರಮುಖ ಕೆರೆಯಾಗಿತ್ತು. ಆ ಕೆರೆಯಿಂದಲೇ ಸುತ್ತಲಿನ ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಲಿ ಎಂಬ ಉದಾತ್ತಭಾವದಿಂದ ನಿರ್ಮಿಸಿದ ಕೆರೆಯದು. ನಿತ್ಯ ಆ ಕೆರೆಯ ನೀರನ್ನ ಅಲ್ಲಿಯ ಜನ ಬಳಸುತ್ತಿದ್ದರು. ಆದರೆ ಆ ಕೆರೆ ಈಗ ಕೆಲ ಜನರ ದುರಾಸೆಯಿಂದ ಮತ್ತು ಅಧಿಕಾರಿಗಳ (Haliyala Town Municipal Council) ನಿರ್ಲಕ್ಷ್ಯದಿಂದ ಕ್ರಮೇಣ ಮಾಯವಾಗುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೌಳಿ (ಸರ್ಕಾರಿ) ಕೆರೆ ಒತ್ತುವರಿ ಆರೋಪ ಕೇಳಿಬಂದಿದೆ. 2 ಎಕರೆ 12 ಗುಂಟೆ ವಿಸ್ತೀರ್ಣವಿದ್ದ ಕೆರೆ ಈಗ 1 ಎಕರೆ ವಿಸ್ತೀರ್ಣಕ್ಕೆ ಸೀಮಿತವಾಗಿದೆ! ಪಾಚಿ ಬೆಳೆದು ನಿಂತಿರುವ ವಿಶಾಲ ಕೆರೆ ಅದು. ಆ ಕೆರೆ ತುಂಬ ಕಟ್ಟಡ ಸಾಮಗ್ರಿಗಳನ್ನ ಹಾಕಿ ಮುಚ್ಚಿದ್ದಾರೆ ಜನ್ರು, ಮತ್ತೊಂದು ಕಡೆ ನಗರದ ಪ್ರಮುಖ ಕೆರೆ ಒತ್ತುವರಿಯಾಗಿದೆ (lake encroachment) – ತೆರವುಗೊಳಿಸಿ ಎಂದು ಉಳಿದ ಜನ್ರು ಮನವಿ ಮಾಡುತ್ತಿದ್ದಾರೆ. ಈ ಸನ್ನಿವೇಶಗಳೆಲ್ಲ ಕಂಡು ಬರುವುದು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (Haliyal) ನಗರದಲ್ಲಿ.

ಹೌದು ಐತಿಹಾಸಿಕ ಹಿನ್ನೆಲೆಯುಳ್ಳ ಹಳಿಯಾಳ ಟೌನ್ ಬಸ್‌ ಸ್ಟಾಂಡ್ ರೋಡ್ ಹತ್ತಿರದ ಆನೆಗುಂದಿ ಬಡಾವಣೆಯ ಸುಮಾರು 2 ಎಕರೆ 12 ಗುಂಟೆ ಗೌಳಿ (ಸರ್ಕಾರಿ) ಕೆರೆಯು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತು ಕೆಲ ಜನರ ದುರಾಸೆಯಿಂದ ಕ್ರಮೇಣವಾಗಿ ಒತ್ತುವರಿ ಯಾಗಿ ಈಗ ಕೇವಲ 1 ಎಕರೆ ವಿಸ್ತೀರ್ಣ ಮಾತ್ರ ಉಳಿದಿದೆ ಎಂಬ ಮಾತು ಕೇಳಿಬಂದಿದೆ.

ಇನ್ನು ಈ ಕೆರೆ ಜಾಗೆಯಲ್ಲಿ ಆಶ್ರಯ ಯೋಜನೆ ಅಡಿ ಏಳು ಜನರಿಗೆ ಮನೆ ಕಟ್ಟಿಕೊಳ್ಳಲು ಪಟ್ಟಾ ನೀಡಲಾಗಿದೆ ಎಂಬ ಆರೋಪವೂ ಇದೆ! ಜೊತೆಗೆ ಈ ಕೆರೆಗೆ ನಗರದ ಒಳಚರಂಡಿ ವ್ಯವಸ್ಥೆಯ ಪೈಪ್ ಲೈನ್ ಹಾಕಿ ಹಾಳು ಮಾಡಲಾಗಿದೆ. ಈ ಕೆರೆಯನ್ನ ಹಂತಹಂತವಾಗಿ ಸಂಪೂರ್ಣ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಕೆರೆ ಒತ್ತುವರಿ ತೆರವುಗೊಳಿಸಿ ಇದಕ್ಕೆ ಬೇಲಿ ಹಾಕಬೇಕು ಎಂದು ಜನ್ರು ಒತ್ತಾಯ ಮಾಡುತ್ತಿದ್ದಾರೆ.

Haliyal lake encroachment by localites and municipal officials

ಕಳೆದ 10 ವರ್ಷಗಳಿಂದ ಗೌಳಿ ಕೆರೆಯು ಕ್ರಮೇಣವಾಗಿ ಒತ್ತುವರಿಯಾಗುತ್ತಿದೆ. ಒಂದು ಕಡೆ ಜನ್ರು ತಮ್ಮ ವಸತಿ ಸ್ಥಾನಕ್ಕಾಗಿ ಒತ್ತುವರಿ ಮಾಡಿದ್ದರೆ, ಮತ್ತೊಂದು ಕಡೆ ಪುರಸಭೆಯು ಕಟ್ಟಡ ಕಾಮಗಾರಿಗಳ ಸಾಮಗ್ರಿಗಳನ್ನ ಹಾಕಿ ಒತ್ತುವರಿ ಮಾಡುತ್ತಿದೆ. ಇದರಿಂದ ಜನರಿಗೆ ಉಪಯುಕ್ತವಾಗಿದ್ದ ಕೆರೆ ಒತ್ತುವರಿಯಾಗಿದೆ. ಮತ್ತೊಂದು ರೀತಿಯಲ್ಲಿ ಈ ಕೆರೆಯಿಂದ ಹಳಿಯಾಳ ನಗರದಲ್ಲಿ ಅಂತರ್ಜಲಮಟ್ಟ ಹೆಚ್ಚಾಗಿ ಬೋರವೆಲ್ ಗಳಲ್ಲಿ ನೀರು ಬರಲು ಸಾಧ್ಯವಾಗುತ್ತಿತ್ತು.

ಆದರೆ ಇದಕ್ಕೆ ವಿರುದ್ಧವಾಗಿ, ಕೆರೆ ಒತ್ತುವರಿಯಿಂದಾಗಿ ಇದೀಗ ಆನೆಗುಂದಿ ಬಡಾವಣೆಯ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ತೀರಾ ಕಡಿಮೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ಈ ರೀತಿ ಕೆರೆಗಳು ನಿರಂತರವಾಗಿ ಮಾಯವಾಗುತ್ತಿರುವುದು ಎನ್ನುತ್ತಾರೆ ಜನ್ರು. ಇನ್ನು ಕೆರೆ ಒತ್ತುವರಿಯನ್ನ ತೆರವುಗೊಳಿಸಿ ಎಂದು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಪ್ರಯೋಜನವಾಗುತ್ತಿಲ್ಲ. ಜೊತೆಗೆ ಈ ಕೆರೆಯಲ್ಲಿ ಯುಜಿಡಿ ಕಾಮಗಾರಿಯನ್ನ ತಂದು ಹಾಕಲಾಗಿದೆ. ಕ್ರಮೇಣವಾಗಿ ಕೆರೆಯನ್ನ ನುಂಗಲು ಅಧಿಕಾರಿ ವರ್ಗ ಮುಂದಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Haliyal lake encroachment by localites and municipal officials

ಒಟ್ಟಿನಲ್ಲಿ ಹಳಿಯಾಳ ನಗರದ ಹೃದಯ ಭಾಗದಲ್ಲಿರುವ ಗೌಳಿ ಕೆರೆಯು ಅಧಿಕಾರಿಗಳ ನಿರ್ಲಕ್ಷ್ಯ ದಿಂದ, ಕೆಲವೇ ಜನರ ದುರಾಸೆಯಿಂದ ಕ್ರಮೇಣ ಮಾಯವಾಗುತ್ತಿದೆ. ಸಂಬಂಧ ಪಟ್ಟವರು ಇತ್ತ ಕಡೆ ಗಮನ ಹರಿಸಿ, ಕೆರೆ ಒತ್ತುವರಿ ತೆರವುಗೊಳಿಸಿ ಸುತ್ತಲು ಬೇಲಿ ಹಾಕುವ ಕೆಲಸ ಮಾಡಬೇಕಿದೆ. ಅದು ಬಿಟ್ಟು ಕೆರೆ ನುಂಗಣ್ಣಗಳೇ ವಿಜೃಂಭಿಸಿಬಿಟ್ಟರೆ ಪುರ ಅಭಿವೃದ್ಧಿಯ ಮಾತು ಎಲ್ಲಿಂದ ಬರಬೇಕು!? ಕೊನೆಯ ಮಾತು – ರಾಜ್ಯದಲ್ಲಿ ಕೆರೆ ನುಂಗಣ್ಣಗಳ ಹೊಟ್ಟೆಬಾಕತನದಿಂದಾಗಿ ಸಾವಿರಾರು ಕೆರೆಗಳು ಮಂಗಮಾಯವಾಗಿವೆ!

ವರದಿ: ವಿನಾಯಕ ಬಡಿಗೇರ ಟಿವಿ 9 ಕಾರವಾರ