85 ಬಾವಲಿಗಳ ಮಾರಣ ಹೋಮ; ಐವರು ಆರೋಪಿಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ
ಐವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹಾವೇರಿ : ಸಾಮಾನ್ಯವಾಗಿ ಬಾವಲಿಗಳು ಯಾರ ಕೈಗೂ ಸಿಗದಂತೆ ನದಿ ಪಾತ್ರದ ಗಿಡಗಳಲ್ಲಿ ವಾಸವಾಗಿರುತ್ತವೆ. ಹಗಲು ಹೊತ್ತಿನಲ್ಲಿ ಈ ಪ್ರಾಣಿಗಳಿಗೆ ಕಣ್ಣು ಕಾಣಿಸುವುದಿಲ್ಲ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಮಾತ್ರ ಬಾವಲಿಗಳು ಆಹಾರ ಅರಸಿಕೊಂಡು ಅತ್ತಿತ್ತ ಓಡಾಡುತ್ತವೆ. ಹಗಲು ಯಾವುದೋ ಒಂದು ಮರದಲ್ಲಿ ವಾಸವಾಗಿರುತ್ತವೆ. ಮರಗಳ ತುದಿಗಳಲ್ಲಿ ರೆಕ್ಕೆ ಅಗಲಿಸಿಕೊಂಡು ಬಾವಲಿಗಳು ಜೋತು ಬಿದ್ದಿರುತ್ತವೆ. ಸಮೀಪದಿಂದ ಇವುಗಳನ್ನು ನೋಡಿದರೆ ಭಯ ಹುಟ್ಟಿಸುವಂತೆ ಕಾಣಿಸುತ್ತವೆ. ಆದರೆ ಇಲ್ಲೊಂದಿಷ್ಟು ದುಷ್ಕರ್ಮಿಗಳು ಸಸ್ತನಿಗಳಾದ ಬಾವಲಿಗಳನ್ನೂ ಮರಕ್ಕೆ ಬಲೆ ಹಾಕಿ ಬೇಟೆ ಆಡಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಇರುವ ಕುಮದ್ವತಿ ನದಿ ಪಾತ್ರದ ಮರಗಳಲ್ಲಿ ಸುಮಾರು ದಿನಗಳಿಂದ ನೂರಾರು ಸಂಖ್ಯೆಯ ಬಾವಲಿಗಳು ವಾಸವಾಗಿದ್ದವು. ಐದು ಜನರ ತಂಡ ಯಾರಿಗೂ ಸಂಶಯ ಬಾರದಂತೆ ಓಡಾಡಿಕೊಂಡು ಬಾವಲಿಗಳನ್ನು ಹಿಡಿಯಲು ಸಂಚು ಹೂಡಿದ್ದಾರೆ. ಅದರಂತೆ ಮರಗಳಿಗೆ ಬಲೆ ಹಾಕಿ 85 ಬಾವಲಿಗಳನ್ನು ಹಿಡಿದು ಹತ್ಯೆ ಮಾಡಿದ್ದರು. ಹತ್ಯೆ ಮಾಡಿದ್ದ ಬಾವಲಿಗಳನ್ನು ಕಾರಿನಲ್ಲಿ ಹಾಕಿಕೊಂಡು ಹೊರಟಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬೀಸಿದ ಬಲೆಗೆ ಬಾವಲಿಗಳನ್ನು ಹತ್ಯೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಐವರು ಆರೋಪಿಗಳು ಸೆರೆಯಾಗಿದ್ದಾರೆ.
ಅರಣ್ಯ ಇಲಾಖೆ ಬಲೆಗೆ ಬಿದ್ದ ಐವರು ಮಾಸೂರು ಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ಮಾಡುತ್ತಿದ್ದರು. ಈ ವೇಳೆ ಬೆಂಗಳೂರು ಮೂಲದ ಸ್ವಿಫ್ಟ್ ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಹೊರಟಿದ್ದ ಐವರನ್ನು ಹಿಡಿದು ವಿಚಾರಣೆ ನಡೆಸಿದ್ದರು. ಆಗ ತುಮಕೂರು ಮತ್ತು ಬೆಂಗಳೂರು ಮೂಲದ ಐವರು ಆರೋಪಿಗಳು ಬಾವಲಿಗಳನ್ನು ಹತ್ಯೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು ಎಂಬ ಮಾಹಿತಿ ಅರಣ್ಯ ಇಲಾಖೆ ಸಿಬ್ಬಂದಿಗೆ ದೊರೆತಿದೆ. ತಕ್ಷಣವೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಐವರು ಅರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಂಗಳೂರು ಮೂಲದ ಮಂಜುನಾಥ (45), ತುಮಕೂರು ಜಿಲ್ಲೆ ಸತ್ಯಮಂಗಲ ತಾಲೂಕಿನ ಅಗ್ನಿಬನ್ನಿರಾಯನಗರದ ಕೃಷ್ಣಪ್ಪ ಊರ್ಫ್ ರಾಮಕೃಷ್ಣಯ್ಯ(52), ಲಕ್ಷ್ಮೀನಾರಾಯಣ(45) ಹಾಗೂ ಲೋಕೇಶ ಸಂಕಾಪುರ(45) ಎಂದು ಗುರುತಿಸಲಾಗಿದೆ. ಬಂಧಿತರಿಂದ ಹತ್ಯೆಗೈದ 85 ಬಾವಲಿಗಳು ಹಾಗೂ ಬಾವಲಿ ಬೇಟೆಗೆ ಬಳಸಿದ ಆಯುಧಗಳು ಮತ್ತು ಕಾರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಐವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 9 ಮತ್ತು 51 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾವಲಿಗಳನ್ನು ಬೇಟೆಯಾಡಿಕೊಂಡು ಹೋಗುತ್ತಿದ್ದ ದುಷ್ಕರ್ಮಿಗಳನ್ನು ಹಿಡಿದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ತಿನ್ನಲು ಬಾವಲಿಗಳನ್ನು ಬೇಟೆಯಾಡಿ ತೆಗೆದುಕೊಂಡು ಹೋಗುತ್ತಿದ್ದುದ್ದಾಗಿ ತಿಳಿಸಿದ್ದಾರೆ. ಆದರೆ ಬಾವಲಿಯಿಂದ ಆಯುರ್ವೇದಿಕ ಔಷಧಿ ತಯಾರಾಗುವುದರಿಂದ ಆರೋಪಿಗಳು ಬಾವಲಿಗಳನ್ನು ಬೇಟೆಯಾಡಿ ಹಣಕ್ಕೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳಿಂದ ಜಪ್ತಿ ಮಾಡಿದ ಎಂಬತ್ತೈದು ಬಾವಲಿಗಳ ಮೃತದೇಹಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮಾಸೂರು ಗ್ರಾಮದ ಬಳಿ ಅಗ್ನಿಸ್ಪರ್ಶದ ಮೂಲಕ ಅಂತ್ಯಸಂಸ್ಕಾರ ಮಾಡಿದರು.
ವರದಿ: ಪ್ರಭುಗೌಡ.ಎನ್.ಪಾಟೀಲ
ಇದನ್ನೂ ಓದಿ: ಹಾಸನ: ಅನುಮಾನಾಸ್ಪದ ರೀತಿಯಲ್ಲಿ 3 ನವಿಲುಗಳು ಸಾವು; ವಿಷ ಹಾಕಿ ಕೊಂದಿರುವ ಶಂಕೆ