ಹಾಸನ: ಅನುಮಾನಾಸ್ಪದ ರೀತಿಯಲ್ಲಿ 3 ನವಿಲುಗಳು ಸಾವು; ವಿಷ ಹಾಕಿ ಕೊಂದಿರುವ ಶಂಕೆ
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೂರು ಗಂಡು ನವಿಲುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ನವಿಲುಗಳಿಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಹಾಸನ: ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ಕೋತಿಗಳ ಮಾರಣಹೋಮ ನಡೆದಿತ್ತು. ಆ ಪ್ರಕರಣ ಇತ್ಯರ್ಥ ಆಗುವಷ್ಟರಲ್ಲಿಯೇ ಮತ್ತೆ ರಾಷ್ಟ್ರಪಕ್ಷಿ ನವಿಲುಗಳ ಸಾವು ಸಂಭವಿಸಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಚಿಕ್ಕ ಗಂಡಸಿ ಗ್ರಾಮದ ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ 3 ನವಿಲುಗಳು ಸಾವನ್ನಪ್ಪಿವೆ. ನಂಜೇಗೌಡ ಎಂಬುವವರ ಜಮೀನಿನ ಸಮೀಪವಿರುವ ಹಳ್ಳದ ಬಳಿ 3 ನವಿಲುಗಳು ಮೃತಪಟ್ಟಿವೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೂರು ಗಂಡು ನವಿಲುಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ನವಿಲುಗಳಿಗೆ ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಹಾಸನ ಜಿಲ್ಲೆಯಲ್ಲಿ ರಾಷ್ಟ್ರಪಕ್ಷಿ ನವಿಲಿನ ಸಂತತಿ ಹೆಚ್ಚಿದೆ. ಜಮೀನುಗಳ ಬಳಿಯೇ ನವಿಲಿನ ಹಿಂಡು ಬೀಡುಬಿಟ್ಟಿರುತ್ತವೆ.
ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವು ಸಿಕ್ಕಿದೆ. 39 ಮಂಗಗಳನ್ನು ಕೊಂದು ಚೀಲದಲ್ಲಿ ತುಂಬಿ ರಸ್ತೆಯಲ್ಲಿ ಬೀಸಾಡಿದ ಪ್ರಕರಣವನ್ನು ಮೂರೇ ದಿನದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆದ ಅರೆಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಉಗನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು ಹಾಗೂ ಮಂಗಗಳನ್ನು ಸೆರೆಹಿಡಿದಿದ್ದ ಯಶೋಧ ಮತ್ತು ರಾಮು ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಯಶೋಧ ಮತ್ತು ರಾಮು ದಂಪತಿ ಬೆಳೆ ಹಾನಿ ಮಾಡುತ್ತಿವೆ ಎಂದು ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ ಕೋತಿಗಳ ಸೆರೆಗೆ 40 ಸಾವಿರಕ್ಕೆ ಗುತ್ತಿಗೆ ನೀಡಿದ್ದರು ಎಂದು ತಿಳಿಸಿದ್ದಾರೆ.
ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಆಹಾರದ ಆಸೆ ತೋರಿಸಿ ಜುಲೈ 28 ರಂದು 50 ಕ್ಕೂ ಹೆಚ್ಚು ಕೋತಿಗಳನ್ನು ಚೀಲದಲ್ಲಿ ಬಂಧಿಸಿಟ್ಟಿದ್ದ ಯಶೋಧ ಹಾಗೂ ರಾಮು, ಅವುಗಳನ್ನು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.
ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 39 ಕೋತಿಗಳನ್ನು ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು; ಐವರನ್ನು ವಶಕ್ಕೆ ಪಡೆದ ಪೊಲೀಸರು
ಕೃಷ್ಣಾ ನದಿ ಪ್ರವಾಹದಲ್ಲಿ ಸಿಲುಕಿ ನವಿಲು ಸಾವು; ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ