ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು; ಐವರನ್ನು ವಶಕ್ಕೆ ಪಡೆದ ಪೊಲೀಸರು

ಹಾಸನ: ಮಂಗಗಳ ಮಾರಣಹೋಮ ಪ್ರಕರಣಕ್ಕೆ ತಿರುವು; ಐವರನ್ನು ವಶಕ್ಕೆ ಪಡೆದ ಪೊಲೀಸರು
ಬಂಧಿತ ಆರೋಪಿಗಳು

ತನಿಖೆ ವೇಳೆ ಯಶೋಧ ಮತ್ತು ರಾಮು ದಂಪತಿ ಬೆಳೆ ಹಾನಿ ಮಾಡುತ್ತಿವೆ ಎಂದು ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ ಕೋತಿಗಳ ಸೆರೆಗೆ 40 ಸಾವಿರಕ್ಕೆ ಗುತ್ತಿಗೆ ನೀಡಿದ್ದರು ಎಂದು ತಿಳಿಸಿದ್ದಾರೆ.

TV9kannada Web Team

| Edited By: preethi shettigar

Aug 02, 2021 | 2:06 PM

ಹಾಸನ: ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ತಿರುವು ಸಿಕ್ಕಿದೆ. 38 ಮಂಗಗಳನ್ನು ಕೊಂದು ಚೀಲದಲ್ಲಿ ತುಂಬಿ ರಸ್ತೆಯಲ್ಲಿ ಬೀಸಾಡಿದ ಪ್ರಕರಣವನ್ನು ಮೂರೇ ದಿನದಲ್ಲಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ವಶಕ್ಕೆ ಪಡೆದ ಅರೆಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಉಗನೆ ಗ್ರಾಮದ ಪ್ರಸನ್ನ, ರುದ್ರೇಗೌಡ, ಚಾಲಕ ಮಂಜು ಹಾಗೂ ಮಂಗಗಳನ್ನು ಸೆರೆಹಿಡಿದಿದ್ದ ಯಶೋಧ ಮತ್ತು ರಾಮು ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಯಶೋಧ ಮತ್ತು ರಾಮು ದಂಪತಿ ಬೆಳೆ ಹಾನಿ ಮಾಡುತ್ತಿವೆ ಎಂದು ಜಮೀನಿನ ಮಾಲೀಕ ಪ್ರಸನ್ನ ಹಾಗೂ ರುದ್ರೇಗೌಡ ಕೋತಿಗಳ ಸೆರೆಗೆ 40 ಸಾವಿರಕ್ಕೆ ಗುತ್ತಿಗೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಹಾಸನ ತಾಲೂಕಿನ ಉಗನೆ ಗ್ರಾಮದಲ್ಲಿ ಆಹಾರದ ಆಸೆ ತೋರಿಸಿ ಜುಲೈ 28 ರಂದು 50 ಕ್ಕೂ ಹೆಚ್ಚು ಕೋತಿಗಳನ್ನು ಚೀಲದಲ್ಲಿ ಬಂಧಿಸಿಟ್ಟಿದ್ದ ಯಶೋಧ ಹಾಗೂ ರಾಮು, ಅವುಗಳನ್ನು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿ ಮೃತಪಟ್ಟಿವೆ ಎಂದು ತಿಳಿಸಿದ್ದಾರೆ.

ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿ 38 ಕೋತಿಗಳನ್ನು ಬಿಸಾಡಿ ಹೋಗಿದ್ದ ಆರೋಪಿಗಳಿಗೆ, ಮರುದಿನ ಕೋತಿಗಳ ಸಾವಿನ ಸುದ್ದಿ ತಿಳಿದಿದೆ. ಹೀಗಾಗಿ ಆಂಜನೇಯ ದೇಗುಲದಲ್ಲಿ ಹೋಮ ಹವನ, ವಿಶೇಷ ಪೂಜೆ ಮಾಡಿಸಿದ್ದಾರೆ ಎಂಬುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಅರಸೀಕೆರೆ ತಾಲ್ಲೂಕಿನ ಬಾಣಾವರದ ಕೋತಿ ಸೆರೆ ತಂಡಕ್ಕೆ ಮನವಿ ಮಾಡಿದ್ದ ಜಮೀನಿನ ಮಾಲೀಕರು, ಕೋತಿ ಸೆರೆಹಿಡಿದ ದಂಪತಿ, ಮೃತ ಕೋತಿ ಸ್ಥಳಾಂತರ ಮಾಡಿದ ವಾಹನ ಚಾಲಕ ಸೇರಿ, ಒಟ್ಟು 5 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಳೆಯೇ ಹೈಕೋರ್ಟ್ಗೆ ವರದಿ ನೀಡಬೇಕಿದ್ದ ಹಿನ್ನೆಲೆಯಲ್ಲಿ ತ್ವರಿತ ತನಿಖೆ ನಡೆಸಿದ್ದ ಪೊಲೀಸರು ವಶಕ್ಕೆ ಪಡೆದ ಎಲ್ಲರನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ.

ಹಾಸನದಲ್ಲಿ ಡಿಸಿ, ಎಸ್​ಪಿ, ಡಿಸಿಎಫ್ ಜಂಟಿ ಸುದ್ದಿಗೋಷ್ಠಿ ಮಂಗಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಸನ ಡಿಸಿ ಕಛೇರಿಯಲ್ಲಿ ಡಿಸಿ, ಎಸ್​ಪಿ, ಡಿಸಿಎಫ್ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಘಟನೆ ಸಂಬಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಹೈಕೋರ್ಟ್, ಆಗಸ್ಟ್ 4 ರೊಳಗೆ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಘಟನೆ ನಡೆದ ನಾಲ್ಕೇ ದಿನದಲ್ಲಿ ಪ್ರಕರಣ ಬೇಧಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಡಿಸಿ ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ.

28 ರ ಬುಧವಾರ ರಾತ್ರಿ 38 ಮಂಗಳ ಶವ ಸಿಕ್ಕಿತ್ತು. 1 ಮಂಗಕ್ಕೆ ಚಿಕಿತ್ಸೆ ನೀಡಿ ಬದುಕಿಸಲಾಗಿದೆ. 12 ಮಂಗಳು ತಪ್ಪಿಸಿಕೊಂಡಿವೆ. ಘಟನೆ ಸಂಬಂಧ ಏಳು ಜನರನ್ನು ಬಂಧಿಸಲಾಗಿದೆ. ಹಾಸನ ತಾಲ್ಲೂಕಿನ ಉಗನೆ ಗ್ರಾಮದಲ್ಲಿ ಕೋತಿ ಹಾವಳಿ ತಡೆಗಟ್ಟಲು, ಕೋತಿಗಳ ಸೆರೆ ಹಿಡಿದು ಸ್ಥಳಾಂತರ ಮಾಡುವಾಗ ಉಸಿರುಗಟ್ಟಿಸಿ ಮೃತಪಟ್ಟಿವೆ ಎನ್ನುವುದು ಪ್ರಾಥಮಿಕ ವರದಿ. ಹೀಗಾಗಿ ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಡಿಸಿ ಆರ್. ಗಿರೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 39 ಮಂಗಗಳ ಮಾರಣಹೋಮದ ಹಿಂದೆ ಯಾರಿದ್ದರೂ ಬಿಡಬೇಡಿ; ತನಿಖಾಧಿಕಾರಿಗೆ ಹಾಸನ ಜಿಲ್ಲಾಧಿಕಾರಿ ಸೂಚನೆ

30ಕ್ಕೂ ಹೆಚ್ಚು ಜನರ ಮೇಲೆ ಕೋತಿಗಳ ದಾಳಿ; ಮಂಗಗಳ ಉಪಟಳ ತಡೆಯಲು ಆಗ್ತಿಲ್ಲ ಅಂತಿದ್ದಾರೆ ನಿಟ್ಟೂರು ಗ್ರಾಮಸ್ಥರು

Follow us on

Related Stories

Most Read Stories

Click on your DTH Provider to Add TV9 Kannada