ಹಾವೇರಿ, ಜ.15: ನೈತಿಕ ಪೊಲೀಸ್ಗಿರಿ ಹೆಸರಲ್ಲಿ ತಮ್ಮದೇ ಸಮುದಾಯ ಹೆಣ್ಮಗಳ ಮೇಲೆ ಗ್ಯಾಂಗ್ ರೇಪ್ (Gang Rape) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಾದಿಕ್ ಅಗಸಿಮನಿ ಮತ್ತು ನಿಯಾಜ್ ಅಹ್ಮದ್ ಮುಲ್ಲಾ ಬಂಧಿತ ಆರೋಪಿಗಳು. ಈ ಮೂಲಕ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಇದುವರೆಗೆ 7 ಮಂದಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮತ್ತೊಂದೆಡೆ ಯಾವುದೇ ಧರ್ಮದವರಾಗಲಿ ಕಾನೂನು ಕೈಗೆ ಎತ್ತಿಕೊಳ್ಳಲು ಬಿಡಲ್ಲ. ಗ್ಯಾಂಗ್‌ರೇಪ್ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ತೇವೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ, ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಸಂತ್ರಸ್ತೆ ತಮ್ಮ ಸಮುದಾಯದವರೇ ಕೃತ್ಯವೆಸಗಿದ್ದಾರೆ ಎಂದಿದ್ದಾಳೆ. ಇದರಲ್ಲಿ ತುಷ್ಟೀಕರಣ ರಾಜಕಾರಣದ ವಾಸನೆ ಇದೆ. ಸರ್ಕಾರ ಯಾರನ್ನೋ ರಕ್ಷಿಸಲು ಹೊರಟಿರೋದು ಕಾಣ್ತಿದೆ ಅಂತ ಜೋಶಿ ಆರೋಪಿಸಿದ್ದಾರೆ. ಇದಿಷ್ಟೇ ಅಲ್ಲ, ಸರ್ಕಾರ ರೇಪ್ ಆರೋಪಿಗಳ ರಕ್ಷಣೆಯಲ್ಲಿ ತೊಡಗಿದೆ ಅಂತ ಮಾಜಿ ಸಚಿವ ಬಿ.ಸಿ ಪಾಟೀಲ್ ಕೂಡ ಆರೋಪಿಸಿದ್ದಾರೆ.
ಇದನ್ನೂ ಓದಿ: ಹಾನಗಲ್ನಲ್ಲಿ ರಾತ್ರಿ ಹೈಡ್ರಾಮಾ: ಅತ್ಯಾಚಾರ ಸಂತ್ರಸ್ತೆಯ ಭೇಟಿಯಾಗುತ್ತಾರಾ ಸಿಎಂ ಸಿದ್ದರಾಮಯ್ಯ?
ಇನ್ನು, ಸಂತ್ರಸ್ತೆ ಸಂಬಂಧಿ ಸೈಯದ್ ಬಸೀರ್, ಬೆದರಿಕೆ ಹಾಕಿದ್ರೂ ನಾವು ಅಂಜುವುದಿಲ್ಲ ಅಂತಿದ್ದಾರೆ. ಸಹೋದರಿ ಮೇಲೆ ಹಲ್ಲೆ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಮೊದಲ ದಿನ ಅತ್ಯಾಚಾರ ಬಗ್ಗೆ ಹೇಳಿಕೆ ನೀಡದಂತೆ ಒತ್ತಡ ಬಂದಿತ್ತು. ಪ್ರಕರಣದ ಬಗ್ಗೆ ಸರಿಯಾದ ತನಿಖೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ.
ಇನ್ನು, ಇಂದು ಹಾವೇರಿ ಜಿಲ್ಲೆ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಅವರನ್ನು ಸಂತ್ರಸ್ತೆ ಕುಟುಂಬದವರು ಭೇಟಿ ಮಾಡಿ ಮನವಿ ಸಲ್ಲಿಸಿದರು. ನರಸೀಪುರ ಹೆಲಿಪ್ಯಾಡ್ನಲ್ಲಿ CM ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದರು. ಇನ್ನು ಘಟನೆ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಆರೋಪಿಗಳನ್ನು ಬಂಧಿಸಿಲಾಗಿದೆ, ತನಿಖೆ ನಡೆಯುತ್ತಿದೆ. ಯಾವುದೇ ಧರ್ಮದವರಾಗಲಿ ಕಾನೂನು ಕೈಗೆ ಎತ್ತಿಕೊಳ್ಳಲು ಬಿಡಲ್ಲ. ಗ್ಯಾಂಗ್‌ರೇಪ್ ಆರೋಪಿಗಳಿಗೆ ಶಿಕ್ಷೆ ಕೊಡಿಸಲು ಕ್ರಮ ಕೈಗೊಳ್ತೇವೆ. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಪ್ರಕರಣದ ತನಿಖೆ ಎಸ್‌ಐಟಿಗೆ ಒಪ್ಪಿಸಲು ಬಿಜೆಪಿ ಆಗ್ರಹ ವಿಚಾರ ಪ್ರತಿಕ್ರಿಯೆ ನೀಡಿದ ಸಿಎಂ, ಈಗ ತನಿಖೆ ಮಾಡ್ತಿರುವವರು ಪೊಲೀಸರೇ, SITಯವರೂ ಪೊಲೀಸರೇ. ಪ್ರಾಥಮಿಕ ವರದಿ ಬರಲಿ, ಯಾವುದನ್ನೂ ಮುಚ್ಚಿ ಹಾಕೋ ಪ್ರಶ್ನೆ ಇಲ್ಲ. ಮಾಜಿ ಸಚಿವ ಶಿವಣ್ಣ ಸಂತ್ರಸ್ತೆ ಭೇಟಿಯಾಗಿ ಧೈರ್ಯ ತುಂಬಿದ್ದಾರೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:45 pm, Mon, 15 January 24