‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಅಭೂತಪೂರ್ವ ಯಶಸ್ಸು: 1.06 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಹಾವೇರಿಯಲ್ಲಿ ಫೆಬ್ರವರಿ 14 ರಂದು ನಡೆದ 'ಸಾಧನಾ ಸಮಾವೇಶ' ಮತ್ತು 'ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ' ಯಶಸ್ಸು ಕಂಡಿತು. ರಾಜ್ಯ ಸರ್ಕಾರದ 1000 ದಿನಗಳ ಆಡಳಿತದ ಸವಿನೆನಪಿಗಾಗಿ ಆಯೋಜಿಸಲಾದ ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 1.06 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದರು. ದಶಕಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿದ್ದವರಿಗೆ ಹೊಸ ಬದುಕಿನ ಭರವಸೆ ಮೂಡಿಸಿತು.

ಹಾವೇರಿ, ಫೆ.17: ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿಯಲ್ಲಿ ಫೆಬ್ರವರಿ 14 ರಂದು ರಾಜ್ಯ ಸರ್ಕಾರದ ಸಾವಿರ ದಿನಗಳ ಆಡಳಿತದ ಸವಿನೆನಪಿಗಾಗಿ ಆಯೋಜಿಸಿದ್ದ ‘ಸಾಧನಾ ಸಮಾವೇಶ’ ಮತ್ತು ‘ಭೂ ಗ್ಯಾರಂಟಿ ( Bhoo Guarantee Scheme) ಸಮರ್ಪಣಾ ಸಮಾವೇಶ’ ಅಭೂತಪೂರ್ವ ಯಶಸ್ಸು ಕಂಡಿದೆ. ದಶಕಗಳಿಂದ ಹಕ್ಕುಪತ್ರದಿಂದ ವಂಚಿತರಾಗಿದ್ದ ಲಕ್ಷಾಂತರ ಕುಟುಂಬಗಳಿಗೆ ಈ ದಿನ ಹೊಸ ಬದುಕಿನ ಭರವಸೆ ದೊರೆತಿದೆ. ರಾಜ್ಯ ಸರ್ಕಾರವು ತನ್ನ 1,000 ದಿನಗಳ ಆಡಳಿತ ಪೂರೈಸಿದ ಸಂಭ್ರಮದಲ್ಲಿ ಸುಮಾರು 1.06 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ‘ಭೂ ಗ್ಯಾರಂಟಿ’ಯನ್ನು ಈಡೇರಿಸಿದೆ.
ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅಜ್ಜಯ್ಯ ದೇವಸ್ಥಾನದ ಎದುರಿನ 100 ಎಕರೆ ಬಯಲು ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಅಡಿಯಲ್ಲಿ ಈ ಸಮಾವೇಶ ಜರುಗಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೇರಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಹಸ್ತಾಂತರಿಸಿದರು. ಸಚಿವರಾದ ಕೃಷ್ಣ ಬೈರೇಗೌಡ, ಶಿವಾನಂದ ಪಾಟೀಲ, ಕೆ.ಎಚ್. ಮುನಿಯಪ್ಪ, ಜಿ. ಪರಮೇಶ್ವರ, ಎಚ್.ಕೆ. ಪಾಟೀಲ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದರು. ಹಾವೇರಿ ಮಾತ್ರವಲ್ಲದೆ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಗದಗ, ಕೊಪ್ಪಳ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಲಕ್ಷಾಂತರ ಜನರು ಸಮಾವೇಶದತ್ತ ಧಾವಿಸಿ ಬಂದಿದ್ದರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಸರ್ಕಾರದ ಸಾಧನೆಯನ್ನು ವಿವರಿಸಿದರು. ಸರಕಾರಿ ಮತ್ತು ಖಾಸಗಿ ಜಾಗಗಳಲ್ಲಿ ಹಲವು ವರ್ಷಗಳಿಂದ ವಾಸವಿದ್ದರೂ ಮಾಲೀಕತ್ವದ ದಾಖಲೆಗಳಿಲ್ಲದ ಕುಟುಂಬಗಳನ್ನು ಮನೆ-ಮನೆಗೆ ತೆರಳಿ ಗುರುತಿಸಿ ಈ ದಾಖಲೆಗಳನ್ನು ನೀಡಲಾಗಿದೆ. ಸರ್ಕಾರವು 2,492 ಹೊಸ ಕಂದಾಯ ಗ್ರಾಮಗಳನ್ನು ಘೋಷಿಸಿದೆ. ಕಳೆದ 1,000 ದಿನಗಳಲ್ಲಿ ಒಟ್ಟು 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ದಾಖಲೆ ಬರೆಯಲಾಗಿದೆ. ಭೂ ಮಾಲೀಕತ್ವಕ್ಕಾಗಿ ಕಚೇರಿ, ಕೋರ್ಟ್‌ಗಳಿಗೆ ಅಲೆದಾಡುತ್ತಿದ್ದ ಬಡವರಿಗೆ ಶಾಶ್ವತ ಪರಿಹಾರ ಕಲ್ಪಿಸುವುದು ಈ ಸಮಾವೇಶದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಾವಿರ ದಿನಗಳ ಸಂಭ್ರಮವಲ್ಲ, 1000 ದಿನಗಳ ಸುಳ್ಳಿನ ಸರಮಾಲೆಗಳ ಸಂಭ್ರಮ: ಬಿಜೆಪಿ ವ್ಯಂಗ್ಯ
ಹಕ್ಕುಪತ್ರಗಳನ್ನು ಕೈಯಲ್ಲಿ ಹಿಡಿದ ಫಲಾನುಭವಿಗಳು ಮಾಲೀಕತ್ವದ ಖುಷಿಯನ್ನು ಪರಸ್ಪರ ಹಂಚಿಕೊಂಡರು. ಮುಖ್ಯವೇದಿಕೆಯತ್ತ ಹರಿದು ಬಂದ ಜನಸಂದಣಿಯಿಂದಾಗಿ ನೂಕುನುಗ್ಗಲು ಉಂಟಾದರೂ, ಜನರು ನಿಂತುಕೊಂಡೇ ಸಮಾವೇಶದ ಪ್ರತಿಯೊಂದು ಕ್ಷಣವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ಈ ಸಮಾವೇಶವು ಬಡವರ ಪಾಲಿಗೆ ಕೇವಲ ಸರ್ಕಾರಿ ಕಾರ್ಯಕ್ರಮವಾಗದೆ, ಅವರ ಸ್ವಂತ ಸೂರಿನ ಕನಸನ್ನು ನನಸು ಮಾಡಿದ ಸಂಭ್ರಮದ ಹಬ್ಬವಾಗಿ ಮಾರ್ಪಟ್ಟಿತ್ತು ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ವರದಿ: ಅಣ್ಣಪ್ಪ ಬಾರ್ಕಿ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
