ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಅಧಿಕಾರಿಗಳ ವಿರುದ್ಧ ಖಾರವಾದ 25 ರೈತರು ಪೊಲೀಸರ ವಶಕ್ಕೆ

| Updated By: ವಿವೇಕ ಬಿರಾದಾರ

Updated on: Mar 12, 2024 | 9:12 AM

ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿಕಾಯಿ ಮಾರುಕಟ್ಟೆ ಮೆಣಸಿನಕಾಯಿ ದರ ಧಿಡೀರನೆ ಕುಸಿತವಾಗಿದ್ದು, ಇದರಿಂದ ಬೇಸರ, ಆಕ್ರೋಶಗೊಂಡ ರೈತರು ಅಧಿಕಾರಿಗಳಿಗೆ ಖಾರ ಅರೆದಿದ್ದಾರೆ. ಕಳೆದ ವಾರ ಒಂದು ಕ್ವಿಂಟಾಲ್‌ 20 ಸಾವಿರವಿದ್ದ ಮೆಣಸಿನಕಾಯಿ ದರ, ಇದೀಗ ಧಿಡೀರನೆ 12 ಸಾವಿರಕ್ಕೆ ಇಳಿಕೆಯಾಗಿದೆ.

ಬ್ಯಾಡಗಿ ಮೆಣಸಿನಕಾಯಿ ದರ ಕುಸಿತ: ಅಧಿಕಾರಿಗಳ ವಿರುದ್ಧ ಖಾರವಾದ 25 ರೈತರು ಪೊಲೀಸರ ವಶಕ್ಕೆ
ರೈತರ ಪ್ರತಿಭಟನೆ, ಅಗ್ನಿಶಾಮಕ ವಾಹನಕ್ಕೆ ಬೆಂಕಿ
Follow us on

ಹಾವೇರಿ, ಮಾರ್ಚ್​ 12: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದೆ. ಬರಕ್ಕೆ ಸೆಡ್ಡುಹೊಡೆದ ರೈತರು (Farmers) ಬಂಪರ್ ಮೆಣಸಿಕಾಯಿ (Chilli) ಬೆಳೆ ಬೆಳೆದಿದ್ದಾರೆ. ಆದರೆ ವಿಶ್ವಪ್ರಸಿದ್ಧ ಬ್ಯಾಡಗಿ (Byadagi) ಮೆಣಸಿನಕಾಯಿ ಮಾರುಕಟ್ಟೆಯಲ್ಲಿ (Byadgi Menasinakai Market) ದಿಢೀರ್ ಬೆಲೆ ಕುಸಿತವಾಗಿದೆ. ಇದರಿಂದ ರೊಚ್ಚಿಗೆದ್ದ ಮೆಣಸಿನಕಾಯಿ ಬೆಳೆಗಾರರು ಅಗ್ನಿಶಾಮಕ ವಾಹನ ಸೇರಿ 12 ವಾಹನಗಳಿಗೆ ಬೆಂಕಿ ಹಚ್ಚಿದರು. ಅಲ್ಲದೇ ಎಪಿಎಂಸಿ ಕಚೇರಿಗೆ ಕಲ್ಲು ತೂರಿದರು. ಹೀಗಾಗಿ ಪೊಲೀಸರು 25ಕ್ಕೂ ಹೆಚ್ಚು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆಗಿದ್ದೇನು?

ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿಕಾಯಿ ಮಾರುಕಟ್ಟೆ ಮೆಣಸಿನಕಾಯಿ ದರ ಧಿಡೀರನೆ ಕುಸಿತವಾಗಿದ್ದು, ಇದರಿಂದ ಬೇಸರ, ಆಕ್ರೋಶಗೊಂಡ ರೈತರು ಅಧಿಕಾರಿಗಳಿಗೆ ಖಾರ ಅರೆದಿದ್ದಾರೆ. ಕಳೆದ ವಾರ ಒಂದು ಕ್ವಿಂಟಾಲ್‌ ಮೆಣಸಿನಕಾಯಿ 20 ಸಾವಿರಕ್ಕೆ ಮಾರಾಟವಾಗಿತ್ತು. ಅದೇ ರೇಟ್‌ ಸಿಗುತ್ತೆ ಅಂತ ರೈತರು ಸೋಮವಾರ (ಮಾ.11) ರಂದು ಮೆಣಸಿನಕಾಯಿ ತಂದಿದ್ದರು. ಇತಿಹಾಸದಲ್ಲೇ ಮೊದಲ ಬಾರಿಗೆ ಬರೋಬ್ಬರಿ 5 ಲಕ್ಷ ಕ್ವಿಂಟಾಲ್‌ ಮೆಣಸಿನಕಾಯಿ ಮಾರುಕಟ್ಟೆಯೊಳಗೆ ಬಂದಿತ್ತು. ಸೋಮವಾರ ವಹಿವಾಟು ಆರಂಭ ಆಗುತ್ತಿದ್ದಂತೆ ರೈತರೆಲ್ಲ ಶಾಕ್ ಆಗಿದ್ದರು. ಯಾಕಂದರೆ ಕಳೆದ ವಾರ 20 ಸಾವಿರ ರೂ. ಇದ್ದ ದರ, ಸೋಮವಾರ ದಿಢೀರನೆ 12 ಸಾವಿರಕ್ಕೆ ಕುಸಿದಿತ್ತು.

ಇದನ್ನೂ ಓದಿ: ಅಂಚೆ ಲಕೋಟೆ ಮೇಲೆ ರಾರಾಜಿಸುತ್ತಿದೆ ಬ್ಯಾಡಗಿ ಮೆಣಸಿನಕಾಯಿ: ವಿಶ್ವ ಪ್ರಸಿದ್ಧ ಮೆಣಸಿನಕಾಯಿಗೆ ಮತ್ತೊಂದು ಗರಿ

ಯಾವಾಗ ಕ್ವಿಂಟಾಲ್​ಗೆ 12 ಸಾವಿರ ರೂ. ಅಂತ ತಿಳಿಯಿತು, ರೈತರು ಕೆರಳಿ ನಿಂತಿದ್ದರು. ಬ್ಯಾಡಗಿ ಎಪಿಎಂಸಿ ಕಚೇರಿ ಮೇಲೂ ಕಲ್ಲು ತೂರಿ ಗ್ಲಾಸ್‌ಗಳನ್ನು ಪೀಸ್‌ ಪೀಸ್‌ ಮಾಡಿದರು. ನಂತರ ಕಚೇರಿಯೊಳಗೆ ನುಗ್ಗಿ ದಾಖಲೆಗಳನ್ನು ನಾಶ ಮಾಡಿದರು. ಪೊಲೀಸ್‌ ಹಾಗೂ ಅಗ್ನಿಶಾಮಕ ವಾಹನಕ್ಕೆ ಬೆಂಕಿ ಹಚ್ಚಿದರು. ಅನ್ನದಾತರ ಕೋಪಾಗ್ನಿಯಲ್ಲಿ 12 ವಾಹನಗಳು ಜಖಂ ಆದವು. ಮೂರು ನಾಲ್ಕು ವಾಹನಗಳು ಸುಟ್ಟು ಭಸ್ಮವಾದವು. ಗಲಾಟೆ ದೊಡ್ಡದಾಗುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದರು. ಆದರೆ, ಕೈಯಲ್ಲಿ ಬಡಿಗೆ ಹಿಡಿದ ರೈತರು ಪೊಲೀಸರನ್ನೇ ಓಡಿಸಿದರು.

ಮೆಣಸಿನಕಾಯಿ ಘಾಟು.. ಮಾರ್ಕೆಟ್‌ ಬಂದ್‌!

ಇನ್ನು ಮೆಣಸಿನಕಾಯಿ ಗೋಡೌನ್‌ಗೂ ಬೆಂಕಿ ಹೊತ್ತಿ ಕೊಂಡಿತ್ತು. ಮೆಣಸಿನಕಾಯಿ ಘಾಟು ಹೆಚ್ಚಾಗುತ್ತಿದ್ದಂತೆ ಅಲ್ಲಿದ್ದ ಜನ ಉಸಿರಾಡೋದಕ್ಕೂ ಪರದಾಡಿದರು. ಪರಿಣಾಮ ಮಾರುಕಟ್ಟೆ ವಹಿವಾಟು ಬಂದ್ ಮಾಡಲಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕೆ ಐಜಿಪಿ ತ್ಯಾಗರಾಜ ಭೇಟಿ ನೀಡಿ, ರೈತರ ಮನವೊಲಿಸಲು ಯತ್ನಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ರಘುನಂಧನ್ ಮೂರ್ತಿ ಕೂಡ ಸ್ಥಳಕ್ಕೆ ಭೇಟಿ ನೀಡಿ ರೈತರ ಮನ ಒಲಿಸುವಲ್ಲಿ ಯಶಸ್ವಿಯಾದರು. ಸೂಕ್ತ ದರ ನಿಗದಿ ಮಾಡುವ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ಕೈ ಬಿಟ್ಟರು. ಸದ್ಯ ಮಾರುಕಟ್ಟೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ