ಹಾವೇರಿ: ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಹಾವೇರಿ ಜಿಲ್ಲಾ ಪಂಚಾಯತಿ ಆರೈಕೆ ಎಂಬ ಹೆಸರಿನಲ್ಲಿ ಯೋಜನೆಯೊಂದನ್ನು ರೂಪಿಸಿದೆ. ಹಲ್ಲು, ಕಣ್ಣಿನ ಸಮಸ್ಯೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳಿಂದ ಮಕ್ಕಳು ಮುಕ್ತಿ ಪಡೆದಿದ್ದಾರೆ. ಈ ಯೋಜನೆಯ ಮೂಲಕ ವೈದ್ಯರಿಂದ ಆಗಾಗ ಸರಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿನ ಮಕ್ಕಳ ಆರೋಗ್ಯ ತಪಾಸಣೆ ವೇಳೆ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಐದು ಸಾವಿರಕ್ಕೂ ಅಧಿಕ ಮಕ್ಕಳು ಕಂಡುಬಂದಿದ್ದಾರೆ.
ಹಲ್ಲಿಗೆ ಸಂಬಂಧಿಸಿದ ಸಮಸ್ಯೆ ಇರುವ ಏಳು ಸಾವಿರಕ್ಕೂ ಅಧಿಕ ಮಕ್ಕಳನ್ನು ತಪಾಸಣೆ ವೇಳೆ ಗುರುತಿಸಿ ಏಳು ಸಾವಿರಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ ಡೆಂಟಲ್ ಕ್ಯಾಂಪ್ ಮಾಡಿದೆ. ದಾವಣಗೆರೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಮೂಲಕ ರೂಟ್ ಕೆನಾಲ್ ಆಫರೇಷನ್, ಕ್ಯಾವಿಟಿ ಫಿಲ್ಲಿಂಗ್, ಡೆಂಟಲ್ ಕ್ಲೀನಿಂಗ್ ಸೇರಿದಂತೆ ಹಲ್ಲಿಗೆ ಸಂಬಂಧಿಸಿದಂತೆ ಹಲವು ರೀತಿಯ ಚಿಕಿತ್ಸೆಗಳನ್ನು ಈಗಾಗಲೇ ಮಕ್ಕಳಿಗೆ ಮಾಡಲಾಗಿದೆ.
ಐವರು ವಿದ್ಯಾರ್ಥಿಗಳಿಗೆ ಕ್ಲಬ್ ಫುಟ್ ಆಫರೇಷನ್ ಹಾಗೂ ಹೃದಯದಲ್ಲಿ ರಂಧ್ರ ಕಂಡುಬಂದಿರುವ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ದಾನಿಗಳ ಮೂಲಕ ನಾರಾಯಣ ಹೃದಯಾಲಯ ಸೇರಿದಂತೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಸರಕಾರಿ ಶಾಲೆಯಲ್ಲಿನ ಮಕ್ಕಳ ಆರೋಗ್ಯಕ್ಕಾಗಿ ಆರೈಕೆ ಹೆಸರಿನ ಯೋಜನೆ ಮಾಡಲಾಗಿದ್ದು, ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಂಥಾದ್ದೊಂದು ಹೊಸ ಯೋಜನೆ ರೂಪಿಸಲಾಗಿದೆ.
ಬಡವರ ಮಕ್ಕಳ ಪಾಲಿಗೆ ಆಶಾಕಿರಣವಾದ ‘ಆರೈಕೆ’ ಯೋಜನೆ
ಆರೈಕೆ ಯೋಜನೆ ಬಗ್ಗೆ ಮಾತನಾಡಿದ ಹಾವೇರಿ ಜಿಲ್ಲಾ ಪಂಚಾಯತಿ ಸಿಇಓ ಮೊಹಮ್ಮದ ರೋಷನ್ ಅವರು ಕೊರೊನಾ ಕಾಲದಲ್ಲಿ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಆರೋಗ್ಯದ ದೃಷ್ಟಿಯಿಂದ ವಾತ್ಸಲ್ಯ ಹೆಸರಿನ ಯೋಜನೆ ರೂಪಿಸಲಾಗಿತ್ತು. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವಾತ್ಸಲ್ಯ ಯೋಜನೆಗೆ ಚಾಲನೆ ನೀಡಲಾಗಿತ್ತು. ಇಂದಿನ ಸಿಎಂ ಆಗಿರುವ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ವಾತ್ಸಲ್ಯ ಯೋಜನೆಗೆ ಚಾಲನೆ ನೀಡಿದ್ದರು. ಆಗಲೂ ಕೂಡ ಸರಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಪೌಷ್ಟಿಕಾಂಶ ಭರಿತ ಆಹಾರವನ್ನು ನೀಡುವುದರ ಜೊತೆಗೆ ಚಿಕಿತ್ಸೆ ಕೊಡಿಸಿದ್ದೇವೆ. ಅದಾದ ನಂತರ ಆರೈಕೆ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಯಲ್ಲೂ ಸರಕಾರಿ ಶಾಲೆಯ ಮಕ್ಕಳ ಆರೋಗ್ಯ ಸುಧಾರಣೆಗೆ ಕಾಳಜಿ ವಹಿಸಲಾಗಿದೆ.
ಸರಕಾರಿ ಆಸ್ಪತ್ರೆ ಹಾಗೂ ಬೇರೆ ಖಾಸಗಿ ಆಸ್ಪತ್ರೆಗಳಲ್ಲಿರುವ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳ ಮೂಲಕ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ, ಆರೋಗ್ಯ ಸಮಸ್ಯೆ ಎದುರಿಸುತ್ತಾ ಇರುವ ಮಕ್ಕಳಿಗೆ ಉಚಿತ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿನ ಸಾವಿರಾರು ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಹಲ್ಲು ಮತ್ತು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಅಂತಹ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಎಲ್ಲ ಮಕ್ಕಳಿಗೂ ಕನ್ನಡಕ ಹಾಗೂ ಹಲ್ಲಿನ ಸಮಸ್ಯೆಯಿರುವ ಮಕ್ಕಳಿಗೆ ಕ್ಲಿಪ್ ಹಾಕಿಸಿದ್ದೇವೆ. ಇನ್ನೂ ಹಲವು ರೀತಿಯ ಕೆಲಸಗಳನ್ನು ಆರೈಕೆ ಯೋಜನೆ ಅಡಿಯಲ್ಲಿ ಮಾಡಲಾಗುತ್ತಿದೆ ಎಂದಿದ್ದಾರೆ.
ಇನ್ನು ರಾಜ್ಯದಲ್ಲಿಯೇ ಪ್ರಥಮವಾಗಿ ಈ ಯೋಜನೆ ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿನ ನೂತನ ಯೋಜನೆಯಿಂದ ಎಷ್ಟೋ ಬಡ ಮಕ್ಕಳಿಗೆ ಇದರಿಂದ ತುಂಬಾ ಸಹಾಯವಾಗಿದೆ. ಅಧಿಕ ಹಣ ಖರ್ಚಾಗುವ ಆರೋಗ್ಯ ಸಮಸ್ಯೆಗೆ ಜಿಲ್ಲಾ ಪಂಚಾಯತಿಯಿಂದ ದಾನಿಗಳನ್ನು ಗುರುತಿಸಿ ಅವರ ಮೂಲಕ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕೊರೊನಾ ಸಮಯದಲ್ಲಿ ವಾತ್ಸಲ್ಯ ಹೆಸರಿನ ಯೋಜನೆ ಮಕ್ಕಳ ಆರೋಗ್ಯ ರಕ್ಷಣೆಗೆ ಸಹಾಯ ಮಾಡಿದ್ದು, ಈಗ ಆರೈಕೆ ಹೆಸರಿನ ಯೋಜನೆ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಆರೋಗ್ಯ ಸುಧಾರಣೆ ಮಾಡುತ್ತಿದೆ.
ವರದಿ:ಪ್ರಭುಗೌಡ.ಎನ್.ಪಾಟೀಲ ಟಿವಿ9 ಹಾವೇರಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ