ಮಳೆ ತಂದ ಅವಾಂತರ: ಹಾವೇರಿಯಲ್ಲಿ ಮನೆ ಕುಸಿದು ಗಾಯಗೊಂಡಿದ್ದ ಮಗು ಸಾವು

| Updated By: ಆಯೇಷಾ ಬಾನು

Updated on: Jul 25, 2023 | 12:09 PM

ಮನೆ ಕುಸಿದು ಮೂರು ವರ್ಷದ ಭಾಗ್ಯ ಚಲಮರದ್ ಎಂಬ ಪುಟ್ಟ ಮಗು ಗಾಯಗೊಂಡಿತ್ತು. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಿಸದೆ  ಮಗು ಮೃತಪಟ್ಟಿದೆ.

ಮಳೆ ತಂದ ಅವಾಂತರ: ಹಾವೇರಿಯಲ್ಲಿ ಮನೆ ಕುಸಿದು ಗಾಯಗೊಂಡಿದ್ದ ಮಗು ಸಾವು
ಮಳೆಯಿಂದ ಕುಸಿದ ಮನೆ
Follow us on

ಹಾವೇರಿ, ಜುಲೈ 25: ರಾಜ್ಯದಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು(Karnataka Rains) ಅನೇಕ ಅವಘಡಗಳು ಸಂಭವಿಸುತ್ತಿವೆ. ಹಾವೇರಿ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು(Haveri Rain) ಭಾರಿ ಮಳೆಗೆ ಮನೆ ಕುಸಿದು ಗಾಯಗೊಂಡಿದ್ದ ಮಗು ಮೃತಪಟ್ಟಿದೆ. ಹಾವೇರಿ ತಾಲೂಕಿನ ಮಾಳಪುರ ಗ್ರಾಮದಲ್ಲಿ ನಿರಂತರ ಮಳೆ ಹಿನ್ನಲೆ ಎರಡು ದಿನದ ಹಿಂದೆ ಮನೆ ಕುಸಿದು ಮೂರು ವರ್ಷದ ಭಾಗ್ಯ ಚಲಮರದ್ ಎಂಬ ಪುಟ್ಟ ಮಗು ಗಾಯಗೊಂಡಿತ್ತು. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಚಿಕಿತ್ಸೆ ಫಲಿಸದೆ  ಮಗು ಮೃತಪಟ್ಟಿದೆ. ಮೃತ ಮಗು ಭಾಗ್ಯಳ ಅಕ್ಕನಿಗೂ ಕೂಡ ಗಾಯವಾಗಿದ್ದು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮನೆ ಮೇಲ್ಛಾವಣಿ ಕುಸಿದು ವೃದ್ಧೆ ಸಾವು

ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ತಡವಾಗಿ ಆರಂಭವಾಗಿದೆ. ಕಳೆದ ನಾಲ್ಕು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಯಾವುದೇ ಉಪಯೋಗವಾಗದಂತಾಗಿತ್ತು. ನಿನ್ನೆ ರಾತ್ರಿಯಿಂದ ಜಿಟಿ ಜಿಟಿಯಾಗಿ ಅಲ್ಪಮಟ್ಟಿಗೆ ಉತ್ತಮ ಮಳೆಯಾಗುತ್ತಿದೆ. ರಾತ್ರಿಯಿಂದಲೇ ಜಿಟಿ ಜಿಟಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಇನ್ನು ಜಿಟಿ ಜಿಟಿ ಮಳೆಗೆ ಜಿಲ್ಲೆಯಲ್ಲಿ ಅವಾಂತರವೊಂದು ಸಂಭವಿಸಿದೆ. ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ಜಿಟಿ ಜಿಟಿ ಮಳೆಗೆ ಮನೆಯ ಮೇಲ್ಚಾವಣಿ ನೆನೆದು ಕುಸಿದು ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ 60 ವರ್ಷದ ವೃದ್ಧೆ ಮನೆಯ ಮೇಲ್ಚಾವಣಿಯಡಿ ಸಿಲುಕಿ ಮೃತಪಟ್ಟಿದ್ದಾರೆ. ಶಿವಮ್ಮ ಸಾವಳಗಿ ಸಾವನ್ನಪ್ಪಿದ ವೃದ್ದೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ.

ಇದನ್ನೂ ಓದಿ: Belagavi News: ಪಶ್ಚಿಮ ಘಟ್ಟದಲ್ಲಿ ನಿಲ್ಲದ ಮಳೆ, ಅಪಾಯಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿ, ಸೇತುವೆ ಜಲಾವೃತ

ಮಳೆ ನೀರಿಗೆ ಕೊಚ್ಚಿ ಹೋಗಿ ಯುವಕ ನಾಪತ್ತೆ

ಬೀದರ್​​ ಜಿಲ್ಲೆಯಲ್ಲಿ ಮಳೆ ನೀರಿಗೆ ಕೊಚ್ಚಿ ಹೋಗಿ ಯುವಕ ನಾಪತ್ತೆಯಾಗಿದ್ದಾನೆ. ಬಸವಕಲ್ಯಾಣ ತಾಲೂಕಿನ ಧನ್ನೂರ(ಆರ್) ಗ್ರಾಮದಲ್ಲಿ ಹಳ್ಳದಾಟುವಾಗ ಮಲ್ಲಪ್ಪ ಕರೆಪನೋರ್(25) ಎಂಬ ಯುವಕ ನೀರಿನಲ್ಲಿ ಕೊಚ್ಚಿಹೋಗಿದ್ದಾನೆ. ನಿನ್ನೆ ರಾತ್ರಿಯಿಂದ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವಕನಿಗಾಗಿ ಶೋಧಕಾರ್ಯ ಮುಂದುವರಿದಿದೆ.

ಧಾರವಾಡದಲ್ಲಿ ಎಮ್ಮೆ ಸಾವು

ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ದನದ ಕೊಟ್ಟಿಗೆ ಕುಸಿದು ಬಿದ್ದು ಎಮ್ಮೆಯೊಂದು ಮೃತಪಟ್ಟ ಘಟನೆ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದಪ್ಪ ನಾಯ್ಕ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿದೆ. ಸ್ಥಳಕ್ಕೆ ತಾಲೂಕಾಧಿಕಾಡಳಿತದ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 12:04 pm, Tue, 25 July 23