
ಹಾವೇರಿ, ಅಕ್ಟೋಬರ್ 11: ಕಾಂಗ್ರೆಸ್ (Congress) ಪಾಳಯದಲ್ಲಿ ನವೆಂಬರ್ ಕ್ರಾಂತಿಯ ಕಿಚ್ಚು ಜ್ವಾಲೆಯಾಗಿ ಧಗಧಗಿಸುತ್ತಿದೆ. ಸಚಿವ ಸಂಪುಟ ಪುನಾರಚನೆ, ಕುರ್ಚಿ ಬದಲಾವಣೆಗೆ ಮುನ್ಸೂಚನೆ ನೀಡುವಂತೆ ಸನ್ನಿವೇಶಗಳು ಪಕ್ಷದಲ್ಲಿ ಕಂಡುಬರುತ್ತಿವೆ. ಈ ಮಧ್ಯೆ ಬಿಹಾರ ಚುನಾವಣೆ ಬಳಿಕ ಸಂಪುಟ ಪುನಾರಚನೆಗೆ ಚಿಂತನೆ ನಡೆದಿದೆ. ಕೆಲ ಸಚಿವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುವುದು. ಹೊಸಬರಿಗೆ ಸಚಿವಸ್ಥಾನ ಕೊಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದು ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್ (saleem ahmed) ಸಂಪುಟ ಪುನಾರಚನೆ ಗುಟ್ಟು ಬಿಚ್ಚಿಟ್ಟಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಸಲೀಂ ಅಹ್ಮದ್, ಸಚಿವ ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ಮತ್ತು ಸಿಎಂ ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಆದರೆ ಅಂತಿಮ ತೀರ್ಮಾನ ಹೈಕಮಾಂಡ್ ನಾಯಕರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.
2023ರಲ್ಲಿ ಸರ್ಕಾರ ರಚನೆಯಾದಾಗಲೇ ನಾನು ಸಂಪುಟದಲ್ಲಿರಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪಟ್ಟಿಯಿಂದ ನನ್ನ ಹೆಸರು ಕೈಬಿಡಲಾಗಿತ್ತು. ಕಳೆದ 43 ವರ್ಷಗಳಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಸಂಪುಟ ಪುನಾರಚನೆ ವೇಳೆ ನನಗೆ ಅವಕಾಶ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಮಗಳು ಸಚಿವೆಯಾದರೆ ನನ್ನ ಸ್ಥಾನ ಬಿಟ್ಟುಕೊಡುತ್ತೇನೆಂಬ ಸಚಿವ ಮುನಿಯಪ್ಪ ಹೇಳಿಕೆಗೆ ಪುತ್ರಿ, ಶಾಸಕಿ ರೂಪಕಲಾ ಪ್ರತಿಕ್ರಿಯಿಸಿದ್ದು, ನಾನು ಅರ್ಹಳಿದ್ದರೆ ಮಾತ್ರ ನನಗೆ ಸ್ಥಾನಮಾನ ಸಿಗಲಿ. ಅಪ್ಪ ತ್ಯಾಗ ಮಾಡಿದರೆ ಸಿಗುವ ಸ್ಥಾನ ನನಗೆ ಬೇಡ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅ. 13ಕ್ಕೆ ಔತಣಕೂಟ ಹಿನ್ನೆಲೆ ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಚರ್ಚೆ: ಸಿಎಂ ರಾಜಕೀಯ ಲೆಕ್ಕಾಚಾರದ ಬಗ್ಗೆ ಭಾರಿ ಕುತೂಹಲ
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಗ್ರಾಮದಲ್ಲಿ ಮಾತನಾಡಿದ ಅವರು, ಸರ್ಕಾರ ಮಟ್ಟದಲ್ಲಿ ನನಗೆ ಅರ್ಹತೆ ಇದ್ದರೆ ಸಚಿವ ಸ್ಥಾನ ಕೊಡಲಿ. ಯಾರ ತ್ಯಾಗದಿಂದಲೂ ನನಗೆ ಸಚಿವ ಸ್ಥಾನ ಬೇಡ ಎಂದಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:49 pm, Sat, 11 October 25