
ಬೆಂಗಳೂರು, ಏಪ್ರಿಲ್ 2: ಕರ್ನಾಟಕದ ಪ್ರಯಾಣಿಕರಿಗೆ ರೈಲ್ವೆ ಇಲಾಖೆ (Indian Railways) ಶುಭ ಸುದ್ದಿ ನೀಡಿದೆ. ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ (Bengaluru-Dharwad Vande Bharat Express) ರೈಲು ನಿಲುಗಡೆ ವಿಚಾರವಾಗಿ ಮಹತ್ವದ ಆದೇಶ ಹೊರಡಿಸಿದ್ದು, ಹಾವೇರಿಯಲ್ಲಿ (Haveri) ನಿಲುಗಡೆ ಮಾಡುವಂತೆ ಸೂಚಿಸಿದೆ. ಹಾವೇರಿಯಲ್ಲಿ ನಿಲುಗಡೆಗೆ ಸೂಚಿಸುವಂತೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ರೈಲ್ವೆ ಇಲಾಖೆಗೆ ಮನವಿ ಮಾಡಿದ್ದರು. ಅದನ್ನು ಪುರಸ್ಕರಿಸಿರುವ ರೈಲ್ವೆ ಇದೀಗ ಆದೇಶ ಹೊರಡಿಸಿದೆ.
ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಾಯೋಗಿಕ ನೆಲೆಯಲ್ಲಿ ಈಗಿನಿಂದಲೇ ಜಾರಿಗೆ ಬರುವಂತೆ ಹಾವೇರಿ ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು. ಟಿಕೆಟ್ ವಿತರಣೆಯ ಬಗ್ಗೆ ಪರಿಶೀಲಿಸುತ್ತಿರಬೇಕು ಮತ್ತು ಹಾವೇರಿಯಲ್ಲಿ ನಿಲುಗಡೆ ನೀಡುತ್ತಿರುವ ಬಗ್ಗೆ ಹೆಚ್ಚೆಚ್ಚು ಜನರಿಗೆ ಮಾಹಿತಿ ದೊರೆಯುವಂತೆ ಮಾಡಬೇಕು ಎಂದು ರೈಲ್ವೆ ಇಲಾಖೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಮನವಿಯನ್ನು ಪುರಸ್ಕರಿಸಿ ಹಾವೇರಿಯಲ್ಲಿ ಬೆಂಗಳೂರು – ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಿದ್ದಕ್ಕಾಗಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಸರ್ಕಾರ ಹಾಗೂ ರೈಲ್ವೆ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಧಾರವಾಡ-ಬೆಂಗಳೂರು ಮಧ್ಯ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಉಲ್ಲೇಖಿಸಿದ್ದಾರೆ.
ಭಾರತ ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ. ವಿಶೇಷವಾಗಿ ರೈಲ್ವೆ ಸಂಕರ್ಕ, ಡಿಜಿಟಲ್, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಜಗತ್ತಿನಲ್ಲಿಯೇ ಅತಿ ದೊಡ್ಡ ರೈಲ್ವೆ ಜಾಲ ಹೊಂದಿರುವ ದೇಶ ಭಾರತ ಕರ್ನಾಟಕದಲ್ಲಿ ಅತಿ ಹೆಚ್ಚು ರೈಲ್ವೆ ಲೈನು ಆಗಿರುವುದ ಕಳೆದ ಹತ್ತು ವರ್ಷದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ, ಕೇಂದ್ರ ಸರ್ಕಾರ ಕರ್ನಾಟಕದ ರೈಲ್ವೆ ಯೋಜನೆಗಳ ಅಭಿವೃದ್ದಿಗೆ ಕಳೆದ ವರ್ಷ 7 ಸಾವಿರ ಕೋಟಿ ರೂ. ಹಾಗೂ ಈ ವರ್ಷ 7 ಸಾವಿರ ಕೋಟಿ ರೂ. ಅನುದಾನ ನೀಡಿದೆ. ವಿಶೇಷವಾಗಿ ರೈಲ್ವೆ ಲೈನುಗಳ ವಿದ್ಯುದೀಕರಣ ಆಗಿದೆ. ಇದರ ಪರಿಣಾಮ ಅತಿವೇಗವಾಗಿ ಹೋಗುವ ವಂದೇ ಭಾರತ ರೈಲು ಕರ್ನಾಟಕದಲ್ಲಿ ಆರಂಭವಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ದೊರ ದೃಷ್ಟಿ ಕಾರಣ ಎಂದು ಬೊಮ್ಮಾಯಿ ಹೇಳಿದ್ದಾರೆ.
ಧಾರವಾಡ-ಬೆಂಗಳೂರು ಮಧ್ಯ ಸಂಚರಿಸುವ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆಗೆ ಆದೇಶ ನೀಡಿರುವ ಕೇಂದ್ರ ರೈಲ್ವೆ ಸಚಿವ @AshwiniVaishnaw ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ @VSOMANNA_BJP ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
ಭಾರತ ದೇಶದಲ್ಲಿ ಕಳೆದ ಹತ್ತು ವರ್ಷ ಎಲ್ಲ ರಂಗದಲ್ಲಿ ಬಹಳ ದೊಡ್ಡ ಕ್ರಾಂತಿಯಾಗಿದೆ ವಿಶೇಷವಾಗಿ ರೈಲ್ವೆ… pic.twitter.com/ILYYwSd85m
— Basavaraj S Bommai (@BSBommai) April 2, 2025
ಬೆಂಗಳೂರು – ಧಾರವಾಡ ಮಧ್ಯ ಸಂಚರಿಸುವ ವಂದೇ ಭಾರತ ರೈಲು ಕೇವಲ ಐದು ಗಂಟೆಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಧಾರವಾಡಕ್ಕೆ ಬರುತ್ತದೆ. ಇದು ಕೇವಲ ತುಮಕೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ಈ ರೈಲು ಹಾವೇರಿಯಲ್ಲಿಯೂ ನಿಲುಗಡೆಯಾಗಬೇಕೆಂದು ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಒತ್ತಾಸೆಯಾಗಿತ್ತು. ಹಾವೇರಿ ಈ ಕಡೆ ಶಿರ್ಸಿ, ಕಾರವಾರ ಕಡಲು ಕರ್ನಾಟಕ ಹಾಗೂ ಬಳ್ಳಾರಿ ಸೇರಿದಂತೆ ಕಲ್ಯಾಣ ಕರ್ನಾಟಕದ ನಡುವೆ ಸಂಪರ್ಕ ಕೇಂದ್ರವಾಗಿದೆ. ಹೀಗಾಗಿ ವಂದೇ ಭಾರತ ರೈಲು ಹಾವೇರಿಯಲ್ಲಿ ನಿಲುಗಡೆ ಆಗಬೇಕೆಂದು ಹಾವೇರಿ ಮಹಾಜನತೆ, ಚೇಂಬರ್ ಆಫ್ ಕಾಮರ್ಸ್ ಬೇಡಿಕೆ ಇತ್ತು. ಜಿಲ್ಲೆಯ ಜನರ ಬೇಡಿಕೆಯನ್ನು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮೇಲೆ ಒತ್ತಡ ಹೇರಿ ಹಾಗೂ ನಮ್ಮ ರಾಜ್ಯದವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೊಮಣ್ಣ ಅವರಿಗೆ ಮನವಿ ಮಾಡಿದ್ದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಆದೇಶ ನೀಡಿದ್ದಾರೆ ಎಂದು ಬೊಮ್ಮಾಯಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಪ್ರಿಯರಿಗೆ ನಮ್ಮ ಮೆಟ್ರೋ ಗುಡ್ ನ್ಯೂಸ್, ಐಪಿಎಲ್ ಪಂದ್ಯ ಪ್ರಯುಕ್ತ ರಾತ್ರಿ 12.30 ರ ವರಗೆ ಸಂಚಾರ
ಸದ್ಯ ಇದು ಟ್ರಯಲ್ ಬೇಸಿಸ್ ಆಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದರೆ ಕಾಯಂ ಮಾಡುತ್ತಾರೆ. ಈ ರೈಲು ನಿಲುಗಡೆಯ ಉದ್ಘಾಟನೆ ದಿನಾಂಕವನ್ನು ಶೀಘ್ರವೇ ನಿಗದಿ ಮಾಡುತ್ತಾರೆ. ಹಾವೇರಿಯಲ್ಲಿ ವಂದೇ ಭಾರತ ರೈಲು ನಿಲುಗಡೆಯಾಗಿಸುವಲ್ಲಿ ಯಶಸ್ಸಿಯಾದ ಹಾವೇರಿ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾವೇರಿಯ ಜನತೆ ವಂದೇ ಭಾರತ ರೈಲನ್ನು ಹೆಚ್ಚು ಬಳಕೆ ಮಾಡಿಕೊಳ್ಳಬೇಕು ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ.