ಹಾವೇರಿ: ಕೊಬ್ಬರಿ ಹೋರಿ ಬೆದರಿಸುವ ಹಬ್ಬದಲ್ಲಿ ಅವಗಢ; ಹೋರಿ ದಾಳಿಯಿಂದ 9 ಜನ ಆಸ್ಪತ್ರೆಗೆ ದಾಖಲು

| Updated By: preethi shettigar

Updated on: Nov 30, 2021 | 8:45 AM

ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯ ಹೋರಿಗಳು ಮತ್ತು ಸಾವಿರಾರು ಸಂಖ್ಯೆಯ ಜನರು ಹೋರಿ ಹಬ್ಬ ವೀಕ್ಷಣೆಗೆ ಆಗಮಿಸಿದ್ದರು. ಆದರೆ ಹೋರಿ ಮಾಡಿದ ಅವಂತಾರದಿಂದ ಹಬ್ಬದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದರೆ, ಏಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹಾವೇರಿ: ಕೊಬ್ಬರಿ ಹೋರಿ ಬೆದರಿಸುವ ಹಬ್ಬದಲ್ಲಿ ಅವಗಢ;  ಹೋರಿ ದಾಳಿಯಿಂದ 9 ಜನ ಆಸ್ಪತ್ರೆಗೆ ದಾಖಲು
ಜನರ ಮೇಲೆ ಎಗರಿದ ಹೋರಿ
Follow us on

ಹಾವೇರಿ: ಕೊಬ್ಬರಿ ಹೋರಿ ಬೆದರಿಸುವ ಹಬ್ಬ ಅಂದರೆ ಸಾಕು ಅಲ್ಲಿ ಭರ್ಜರಿಯಾಗಿ ತಯಾರಾದ ಹೋರಿಗಳೆ ಓಟಕ್ಕೆ ಸಿದ್ಧವಾಗಿರುತ್ತದೆ. ಇಂತಹ ಹೋರಿಗಳನ್ನು ಹಿಡಿದು ನಿಲ್ಲಿಸುವುದಕ್ಕೆ ಪೈಲ್ವಾನರು ಜೀವದ ಹಂಗು ತೊರೆದು ಕಸರತ್ತು ನಡೆಸುತ್ತಾರೆ. ಅಷ್ಟೇ ಅಲ್ಲದೇ ಹೋರಿ ಹಬ್ಬ ನೋಡುವುದಕ್ಕೆ ಸಾವಿರಾರು ಜನರ ದಂಡೆ ನೆರೆದಿರುತ್ತದೆ. ಆದರೆ ಹೋರಿ ಹಬ್ಬ (Hori habba) ನೋಡುವುದಕ್ಕೆ ಬಂದವರು, ಹೋರಿ (Bull) ಅಖಾಡಕ್ಕೆ ಒಯ್ದು ಬಿಡುವವರು, ಹೋರಿ ಹಿಡಿದು ನಿಲ್ಲಿಸುವವರು ಸ್ವಲ್ಪ ಯಾಮಾರಿದರೂ ಅವಗಢ ತಪ್ಪಿದ್ದಲ್ಲ. ಇದಕ್ಕೆ ಉದಾಹರಣೆ ಎನ್ನುವಂತೆ ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಅವಗಢ ಸಂಭವಿಸಿದೆ.

ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಗಢ ಸಂಭವಿಸಿದೆ. ಗ್ರಾಮದಲ್ಲಿ ಈ ಬಾರಿ ಗ್ರಾಮಸ್ಥರು ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಿದ್ದರು. ಬೈಕ್, ಪ್ರಿಡ್ಜ್ ಸೇರಿದಂತೆ ವಿವಿಧ ಬಗೆಯ ಬಹುಮಾನಗಳನ್ನು ಸ್ಪರ್ಧೆಗೆ ಇಟ್ಟಿದ್ದರು. ಹಾವೇರಿ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯ ಹೋರಿಗಳು ಮತ್ತು ಸಾವಿರಾರು ಸಂಖ್ಯೆಯ ಜನರು ಹೋರಿ ಹಬ್ಬ ವೀಕ್ಷಣೆಗೆ ಆಗಮಿಸಿದ್ದರು. ಆದರೆ ಹೋರಿ ಮಾಡಿದ ಅವಂತಾರದಿಂದ ಹಬ್ಬದಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದರೆ, ಏಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಣ್ಣಪುಟ್ಟ ಗಾಯಗೊಂಡವರಿಗೆ ಗುತ್ತಲ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಜಿಲ್ಲಾಸ್ಪತ್ರೆಗೆ ಬಂದ ಏಳೆಂಟು ಜನರಲ್ಲಿ ಬಹುತೇಕರಿಗೆ ಕಣ್ಣು, ಕಾಲು, ಬೆನ್ನು ಮತ್ತು ಕೈ ಸೇರಿದಂತೆ ಹಲವೆಡೆ ಗಾಯಗಳಾಗಿವೆ. ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ. ಗಾಯಾಳುಗಳನ್ನು ಸಚಿನ್, ಸಿದ್ದಯ್ಯ, ಯಲ್ಲಪ್ಪ, ಶ್ರೀಧರ್, ಮೈಲಾರಪ್ಪ, ಕರಬಸಯ್ಯ, ಮತ್ತು ಕಾಂತೇಶ ಎಂದು ಗುರುತಿಸಲಾಗಿದೆ.

ಕೆಲವರು ಹೋರಿ ತಿವಿದು ಗಾಯಗೊಂಡಿದ್ದರೂ ಆಸ್ಪತ್ರೆಗೆ ಬಾರದೆ ಅಲ್ಲಿಯೇ ಚಿಕಿತ್ಸೆ ಪಡೆದುಕೊಂಡು ಮನೆಗೆ ಹೋಗಿದ್ದಾರೆ. ಜಿಲ್ಲಾಸ್ಪತ್ರೆಗೆ ಬಂದಿದ್ದವರ ಪೈಕಿ ಗಂಭೀರವಾಗಿ ಗಾಯಗೊಂಡಿದ್ದ ಐವತ್ತೆಂಟು ವರ್ಷದ ಮೈಲಾರಪ್ಪ ಹಾಗೂ ಮತ್ತೊಬ್ಬನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಉಳಿದಂತೆ ಗಾಯಗೊಂಡವರನ್ನು ತಕ್ಷಣವೆ 108 ಅಂಬ್ಯುಲೆನ್ಸ್ ವಾಹನದ ಮೂಲಕ  ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆಯೆ ಗ್ರಾಮದಲ್ಲಿ ಕೊಬ್ಬರಿ ಹೋರಿ ಬೆದರಿಸುವ ಹಬ್ಬ ಆಯೋಜನೆಗೊಂಡಿತ್ತು. ಆದರೆ ನಿರಂತರವಾಗಿ ಮಳೆ ಸುರಿತಿದ್ದರಿಂದ ಆಗ ಹೋರಿ ಹಬ್ಬವನ್ನು ಮುಂದೂಡಿ, ನಿನ್ನೆ (ನವೆಂಬರ್ 30) ಹೋರಿ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಹೋರಿ ಹಬ್ಬವನ್ನು ನೋಡಲು ಬಂದವರು ಹಾಗೂ ಹೋರಿ ಅಭಿಮಾನಿಗಳು ಹೋರಿ ಓಡುವ ಅಖಾಡದ ಪಕ್ಕದಲ್ಲಿಯೇ ನಿಂತು ಹೋರಿಯ ಮಿಂಚಿನ ಓಟ ನೋಡಲು ನಿಂತಿದ್ದರಿಂದ ಹೋರಿ ಬೆದರಿಸುವ ಹಬ್ಬದಲ್ಲಿ ಹಲವು ಅವಗಢಗಳು ನಡೆದಿವೆ‌.

ಹೋರಿ ಬೆದರಿಸುವ ಹಬ್ಬಕ್ಕೆ ಕಾನೂನಾತ್ಮಕವಾಗಿ ಯಾವುದೇ ಅನುಮತಿ ಇರುವುದಿಲ್ಲ. ಆದರೂ ಗ್ರಾಮದ ಜನರು ಹೋರಿ ಹಬ್ಬದ ಮೇಲಿನ ಪ್ರೀತಿಯಿಂದ ಹೋರಿ ಬೆದರಿಸುವ ಹಬ್ಬ ಆಯೋಜಿಸಿದ್ದಾರೆ. ಹೋರಿ ಬೆದರಿಸುವ ಹಬ್ಬದಲ್ಲಿ ಅನಾಹುತಗಳು ಸಂಭವಿಸದಂತೆ ಹೋರಿ ಹಬ್ಬದ ಆಯೋಜಕರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದರಿಂದ ಹೋರಿ ಬೆದರಿಸುವ ಹಬ್ಬದಲ್ಲಿ ಹಲವು ಅನಾಹುತಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ.

ಕೇವಲ‌ ಮನುಷ್ಯರಿಗೆ ಮಾತ್ರವಲ್ಲದೆ ಹೋರಿ ಬೆದರಿಸುವ ಹಬ್ಬದಲ್ಲಿ ಒಂದೆರಡು ಹೋರಿಗಳಿಗೂ ಗಾಯಗಳಾಗಿವೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೋರಿ ಹಬ್ಬದ ಅವಗಢ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಒಟ್ಟಿನಲ್ಲಿ ಹೋರಿ ಬೆದರಿಸುವ ಹಬ್ಬದ ಮೇಲಿನ ಪ್ರೀತಿಯಿಂದ ಹೋರಿ ಹಬ್ಬದ ಅಭಿಮಾನಿಗಳು ಮತ್ತು ಆಯೋಜಕರು ಸ್ವಲ್ಪವೇ ನಿರ್ಲಕ್ಷ್ಯ ವಹಿಸಿದರೂ ಈ ರೀತಿಯ ಅನಾಹುತಗಳು ತಪ್ಪಿದ್ದಲ್ಲ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ:
ಒಂದು ಕೋಟಿ ರೂ. ಬಾಳುವ ಹಳ್ಳಿಕರ್ ಹೋರಿಯೊಂದಿಗೆ ಬೆಂಗಳೂರಿಗೆ ಬಂದ ಬೋರೇಗೌಡ!

ದಾವಣೆಗೆರೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆ: ಫೋಟೋಗಳು ಇಲ್ಲಿವೆ ನೋಡಿ

Published On - 8:43 am, Tue, 30 November 21