ಒಂದು ಕೋಟಿ ರೂ. ಬಾಳುವ ಹಳ್ಳಿಕರ್ ಹೋರಿಯೊಂದಿಗೆ ಬೆಂಗಳೂರಿಗೆ ಬಂದ ಬೋರೇಗೌಡ!
ಕೃಷ್ಣ ಒಮ್ಮೆ ಸ್ಖಲಿಸಿದರೆ ಅದರಲ್ಲಿ 300-500 ವೀರ್ಯಾಣುಗಳಿರುತ್ತವಂತೆ. ಹಸುವೊಂದಕ್ಕೆ ಗರ್ಭಧಾರಣೆ ಮಾಡಿಸಲು ಒಂದು ವೀರ್ಯಾಣು ಸಾಕು, ಬೋರೇಗೌಡರು ಒಂದು ವೀರ್ಯಾಣುವನ್ನು 1,000 ರೂ. ಗಳಿಗೆ ಮಾರುತ್ತಾರೆ
ಇಲ್ಲಿರುವ ವ್ಯಕ್ತಿಯನ್ನು ನೋಡಿ. ಇವರ ಹೆಸರು ಬೋರೇಗೌಡ ಅಂತ, ಮಂಡ್ಯ ಜಿಲ್ಲೆಯ ಮಳವಳ್ಳಿಯವರು. ಸರಿ, ಇವರೊಂದಿಗೆ ಒಂದು ಹೋರಿ ನಿಂತಿದೆ, ಅದಕ್ಕೆ ಗೌಡರು ಕೃಷ್ಣ ಅಂತ ಹೆಸರಿಟ್ಟಿದ್ದಾರೆ. ಇವರಿಬ್ಬರ ಕತೆಯನ್ನು ನಿಮಗೆ ಹೇಳಲು ಕಾರಣವಿದೆ ಮಾರಾಯ್ರೇ. ಮೊದಲು ನಿಮಗೆ ಈ ಹೋರಿಯ ಬೆಲೆ ತಿಳಿಸಿ ನಂತರ ಕತೆ ಹೇಳ್ತೀವಿ. ಎಷ್ಟಿರಬಹುದೆಂದು ನೀವು ಊಹಿಸಬಲ್ಲಿರಾ? ಬರೋಬ್ಬರಿ ಒಂದು ಕೋಟಿ ರೂ.! ಹೌದು ನೀವು ಕೇಳಿಸಿಕೊಂಡಿದ್ದು ಸರಿ. ಒಂದು ಕೋಟಿ ರೂಪಾಯಿ. ಅಂಥದ್ದೇನಿದೆ ಈ ದನದಲ್ಲಿ, ಒಂದು ಕೋಟಿ ರೂ. ಕೊಡುವಷ್ಟು ಅಂತ ನೀವು ಅಂದುಕೊಳ್ಳುತ್ತಿರುವುದು ಸಮಂಜಸವೇ. ಸರಳವಾಗಿ ಹೇಳಬೇಕೆಂದರೆ ಇದು ಸಾಮಾನ್ಯವಾದ ಹೋರಿಯಲ್ಲ. ಹಳ್ಳಿಕರ್ ತಳಿಯ ಹೋರಿಗಳು ಬೇರೆ ಹೋರಿಗಳಿಗಿಂತ ಗಾತ್ರ ಮತ್ತು ಆಕಾರದಲ್ಲಿ ಎತ್ತರ, ಸದೃಢ ಮತ್ತು ಬಲಶಾಲಿ.
ಸಾಮಾನ್ಯವಾಗಿ ಹಸುಗಳಿಗೆ ಗರ್ಭಧಾರಣೆ ಮಾಡಿಸಬೇಕಾದರೆ ಹುಟ್ಟುವ ಕರುಗಳು ದಷ್ಟಪುಷ್ಟವಾಗಿರಲಿ ಅಂತ ಹಳ್ಳಿಕರ್ ತಳಿಯ ಹೋರಿಗಳ ವೀರ್ಯಾಣುವಿನಿಂದ ಗರ್ಭಧಾರಣೆ ಮಾಡಿಸುತ್ತಾರೆ ಅಥವಾ ಬೆದೆಗೆ ಬಂದ ಹಸುವನ್ನು ಒಯ್ದು ಹೋರಿಯ ಮುಂದೆ ಬಿಡುತ್ತಾರೆ. ಹಳ್ಳಿಕರ್ ತಳಿಯ ಹೋರಿಗಳು ವಿರಳವಾಗಿರುವುದರಿಂದ ವೀರ್ಯಾಣುವನ್ನು ಕೊಂಡು ಗರ್ಭಧಾರಣೆ ಮಾಡಿಸುತ್ತಾರೆ. ಈ ಕೃಷ್ಣನ ವೀರ್ಯಾಣುವಿಗೆ ಅಪಾರ ಬೇಡಿಕೆ.
ಕೃಷ್ಣ ಒಮ್ಮೆ ಸ್ಖಲಿಸಿದರೆ ಅದರಲ್ಲಿ 300-500 ವೀರ್ಯಾಣುಗಳಿರುತ್ತವಂತೆ. ಹಸುವೊಂದಕ್ಕೆ ಗರ್ಭಧಾರಣೆ ಮಾಡಿಸಲು ಒಂದು ವೀರ್ಯಾಣು ಸಾಕು, ಬೋರೇಗೌಡರು ಒಂದು ವೀರ್ಯಾಣುವನ್ನು 1,000 ರೂ. ಗಳಿಗೆ ಮಾರುತ್ತಾರೆ ಮತ್ತು ವಾರದಲ್ಲಿ ಕೃಷ್ಣ ಮೂರು ಬಾರಿ ಸ್ಖಲಿಸುವಂತೆ ಮಾಡುತ್ತಾರೆ. ಅಲ್ಲಿಗೆ ಕೃಷ್ಣನಿಂದ ಅವರಿಗೆ ತಿಂಗಳೊಂದಕ್ಕೆ ಸಿಗುವ ಆದಾಯ 20-25 ಲಕ್ಷ ರೂ. ಗಳು!!
ಕೃಷ್ಣನ ಹುಟ್ಟು ಮತ್ತು ಬೆಳವಣಿಗೆ ಸಹ ಬಹಳ ಕುತೂಹಲಕಾರಿಯಾಗಿದೆ. ಅಸಲಿಗೆ ಅದು ಹುಟ್ಟಿದ್ದು ರಾಮನಗರದ ಒಂದು ರೈತಾಪಿ ಕುಟುಂದಲ್ಲಿ. ಬಳಿಕ ಮಂಡ್ಯ ಜಿಲ್ಲೆಯ ಕಲ್ಹಳ್ಳಿ ಗ್ರಾಮದ ಒಂದು ಪಟೇಲ್ ಕುಟುಂಬ ಹೋರಿ ಮತ್ತು ಅದರ ತಾಯಿ ಹಸುವನ್ನು 1.25 ಲಕ್ಷ ರೂ ಕೊಟ್ಟು ಖರೀದಿಸುತ್ತಾರೆ.
ಅದಾದ ಮೇಲೆ ಈ ಕುಟುಂಬ ಕೃಷ್ಣನನ್ನು ಭೂಗತ ದೊರೆಯೆನಿಸಿಕೊಂಡಿದ್ದ ದಿವಂಗತ ಮುತ್ತಪ್ಪ ರೈ ಅವರಿಗೆ 4 ಲಕ್ಷ ರೂ. ಗಳಿಗೆ ಮಾರುತ್ತದೆ. ರೈ ಅವರು ನಿಧನ ಹೊಂದಿದ ಬಳಿಕ ಆದರ ನಿರ್ವಹಣೆ ಸರಿಯಾಗಿ ಅಗದಿರುವುದರ ಬಗ್ಗೆ ತಿಳಿದುಕೊಂಡ ಬೋರೇಗೌಡ ಈಗ್ಗೆ ಎರಡೂ ವರ್ಷ 4 ತಿಂಗಳು ಹಿಂದೆ ಅದನ್ನು ರೂ 2.85 ಲಕ್ಷ ನೀಡಿ ಕೊಳ್ಳುತ್ತಾರೆ. ಕೃಷ್ಣನಿಗೆ ಮೊದಲು 30 ಲಕ್ಷ ನಂತರ 68 ಲಕ್ಷ ರೂ. ಗಳ ಆಫರ್ ಬಂದರೂ ಗೌಡ್ರು ಅದನ್ನು ಮಾರಿಲ್ಲ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಬೋರೇಗೌಡರು ತಮ್ಮ ಕೋಟಿ ಬೆಲೆಯ ಕೃಷ್ಣನೊಂದಿಗೆ ಬಂದಿದ್ದಾರೆ.
ಇದನ್ನೂ ಓದಿ: Shilpa Shetty: ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ