ಹಾವೇರಿ, ಜುಲೈ.07: ರಾಜ್ಯದಲ್ಲಿ ಭೀತಿ ಹುಟ್ಟಿಸಿರುವ ಡೆಂಗ್ಯೂ (Dengue) ರುದ್ರನರ್ತನದ ನಡುವೆ ಹಾವೇರಿಯಲ್ಲಿ ಇಲಿ ಜ್ವರ (Rat Fever) ಕಾಣಿಸಿಕೊಂಡಿದೆ. ಹಾವೇರಿ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ 12 ವರ್ಷದ ಬಾಲಕನಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಸದ್ಯ ಬಾಲಕನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮತ್ತೊಂದೆಡೆ ಗದಗ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಮೊದಲ ಬಲಿಯಾಗಿದೆ. 5 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಕಳೆದ 15 ದಿನದಿಂದ ಜ್ವರದಿಂದ ಬಳಲುತ್ತಿದ್ದ 12 ವರ್ಷದ ಬಾಲಕನಿಗೆ ದಿನ ಬಿಟ್ಟು ದಿನ ಜ್ವರ ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಬಾಲಕನಿಗೆ ಜಾಂಡೀಸ್ ಇದೆ ಎಂದು ರಕ್ತ ತಪಾಸಣೆ ಮಾಡಲಾಗಿದ್ದು ವರದಿಯಲ್ಲಿ ಇಲಿ ಜ್ವರ ದೃಢಪಟ್ಟಿದೆ. ಇಲಿ ಜ್ವರ ದೃಢ ಪಡುತ್ತಿದ್ದಂತೆ ಆರೋಗ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಬಾಲಕನನ್ನು ಆಸ್ಪತ್ರೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ನೀಡುವ ಕಾರ್ಯ ಮಾಡಿದೆ. ಬಾಲಕನ ಆರೋಗ್ಯ ಸ್ಥಿರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ: ವಿದ್ಯಾರ್ಥಿಗಳು ಪೂರ್ಣ ತೋಳಿನ ಸಮವಸ್ತ್ರ ಧರಿಸಿ ಶಾಲೆಗೆ ಬರುವಂತೆ ಆರೋಗ್ಯ ಸಚಿವರ ಸೂಚನೆ
ಗದಗ ತಾಲೂಕಿನ ಶಿರುಂಜ ಗ್ರಾಮದ ಚಿರಾಯಿ ಹೊಸಮನಿ ಎಂಬ 5 ವರ್ಷದ ಬಾಲಕ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾನೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಚಿರಾಯಿ ಹೊಸಮನಿಯನ್ನು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ SDM ಆಸ್ಪತ್ರೆಯಲ್ಲಿ ಚಿರಾಯಿ ಹೊಸಮನಿ ಸಾವನ್ನಪ್ಪಿದ್ದಾನೆ.
ದಿನ ದಿನಕ್ಕೂ ಹೆಚ್ಚಾಗ್ತಿರೋ ಡೆಂಗ್ಯೂ ತಡೆಗೆ ಗದಗ ಜಿಲ್ಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗ್ತಿದೆ. ಡೆಂಘೀ ಹರಡುವ ಪ್ರದೇಶಗಳಲ್ಲಿ ಲಾರ್ವಾ ಸರ್ವೇ ಮಾಡಲಾಗ್ತಿದೆ. ಲಾರ್ವಾ ನಾಶಕ್ಕೆ ನೀರಿನ ಟ್ಯಾಂಕ್ ಗಳಿಗೆ ಗಪ್ಪಿ, ಗಾಂಬೂಸಿಯಾ ಮೀನುಗಳನ್ನ ಬಿಡಲಾಗ್ತಾಯಿದೆ. ಕೆರೆಗಳು, ಮನೆ ಮನೆಗಳಲ್ಲಿ ತೆರೆದ ನೀರಿನ ಟ್ಯಾಂಕ್ಗಳಿಗೂ ಮೀನು ಬಿಡಲಾಗ್ತಿದೆ. ಆ ಮೂಲಕ ಡೆಂಘೀ ತಡೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:36 pm, Sun, 7 July 24