ವಿದ್ಯಾರ್ಥಿಗಳಿಂದ ಮನೆ ಕೆಲಸ ಮಾಡಿಸಿಕೊಳ್ತಿರುವ ಪ್ರಾಂಶುಪಾಲ; ಮಕ್ಕಳಿಂದ ಗಂಭೀರ ಆರೋಪ
ಶಾಲಾ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಚಗೊಳಿಸಿದ ಹಲವಾರು ಪ್ರಕರಣಗಳು ರಾಜ್ಯದಲ್ಲಿ ಬೆಳಕಿಗೆ ಬರುತ್ತಿದೆ. ಈ ಕುರಿತು ಸರ್ಕಾರ ಎಷ್ಷೇ ಕಠಿಣ ಕ್ರಮಕೈಗೊಂಡರು, ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಅದರಂತೆ ಇದೀಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾವಿ ತಾಲೂಕಿನಲ್ಲಿ ಪ್ರಾಂಶುಪಾಲರೇ ವಿದ್ಯಾರ್ಥಿಗಳಿಂದ ಮನೆ ಕೆಲಸ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ.
ಹಾವೇರಿ, ಫೆ.02: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಲಾ ಮಕ್ಕಳನ್ನು ಶೌಚಾಲಯ ಸ್ವಚ್ಛ ಮಾಡಲು ಬಳಸಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರ ಬೆನ್ನಲ್ಲೇ ಇದೀಗ ಹಾವೇರಿ(Haveri) ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಜಕ್ಕನಕಟ್ಟಿ ಗ್ರಾಮದ ಚೆನ್ನಮ್ಮ ವಸತಿ ಶಾಲೆಯ ಮಕ್ಕಳನ್ನು ಪ್ರಾಂಶಪಾಲರೇ ಮನೆ ಕೆಲಸಕ್ಕೆ ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ. ಈ ಕುರಿತು ಮಾತನಾಡಿದ ವಿದ್ಯಾರ್ಥಿನಿಯರು ‘ಪ್ರಾಂಶುಪಾಲರಾದ ಸಂಗಮೇಶ್ ಬಿ.ಪೂಜಾರ್ ಅವರಿಗೆ ಪ್ರತಿ ರಾತ್ರಿ ಶಾಲೆಯಿಂದ ಊಟ ತಂದು ಕೊಟ್ಟು, ತಟ್ಟೆ ತೊಳೆದು ಹೋಗುವಂತೆ ಹೇಳಿದ್ದಾರಂತೆ.
ಒಂದು ಕಡೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದೆಡೆ ಇಂತಹ ಘಟನೆ ನಡೆಯುತ್ತಲೇ ಇದೆ. ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬೈನಹಳ್ಳಿ ಗ್ರಾಮದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯಿಂದ ಶೌಚಾಲಯ ಶುಚಿಗೊಳಿಸಿದ ವಿಡಿಯೋ ವೈರಲ್ ಆಗಿದೆ. ವಿದ್ಯಾರ್ಥಿಗಳಿಂದ ಇಂತಹ ಕೆಲಸ ಮಾಡಿಸಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶವಿದ್ದರೂ, ಅದನ್ನು ಧಿಕ್ಕರಿಸಿ ಶಿಕ್ಷಕರು ವಿದ್ಯಾರ್ಥಿಗಳ ಕೈಯಲ್ಲಿ ಶೌಚಾಲಯ ಕ್ಲೀನಿಂಗ್ ಮಾಡಿಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಂದ ಶೌಚಾಲಯ ಕ್ಲೀನಿಂಗ್: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ
ಅಷ್ಟೇ ಅಲ್ಲ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೆ ಶಿವಮೊಗ್ಗದಲ್ಲಿಯೇ ಇಂತಹದೊಂದು ಘಟನೆ ನಡೆದಿತ್ತು. ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ ಗ್ರಾಮ ಪಂಚಾಯಿತಿಯ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ಸೇರಿ ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದರು. ಈ ಬಗ್ಗೆ ದಲಿತ ಸಂಘರ್ಷ ಸಮಿತಿ, ಶಿವಮೊಗ್ಗ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿ, ಮಕ್ಕಳನ್ನು ದುರ್ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸಂಘಟನೆ ಮತ್ತು ಪೋಷಕರು ಒತ್ತಾಯಿಸಿದ್ದರು. ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದರೂ, ರಾಜ್ಯದಲ್ಲಿ ಇದಕ್ಕೆ ಬ್ರೇಕ್ ಹಾಕಲಾಗುತ್ತಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Fri, 2 February 24