ಹಾವೇರಿ, ಆ.27: ಹಳ್ಳದಂತೆ ಹರಿಯುತ್ತಿರುವ ಜೀವ ನದಿಗಳು, ಹಾಳಾಗಿರುವ ಮೆಕ್ಕೆ ಜೋಳ (Maize) ಬೆಳೆ. ಆತಂಕದಲ್ಲಿ ಕೈ ಕಟ್ಟಿ ಕೂತಿರುವ ಅನ್ನದಾತ. ಈ ದೃಶ್ಯ ಕಂಡು ಬಂದಿದ್ದು ಹಾವೇರಿ (Haveri) ಜಿಲ್ಲೆಯಲ್ಲಿ. ಹೌದು, ಕೃಷಿ ಪ್ರಧಾನ ಆಗಿರುವ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟ ಹಿನ್ನೆಲೆ ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ. ಜೂನ್ ಆರಂಭದಲ್ಲಿ ಆಗಬೇಕಾದ ಮಳೆ ಜುಲೈ ತಿಂಗಳಲ್ಲಿ ಆಗಿದಕ್ಕೆ ಎರಡನೆ ಬಾರಿ ಬಿತ್ತನೆ ಮಾಡಲಾಯಿತು. ಇನ್ನೇನು ಉತ್ತಮ ಮಳೆ ಆರಂಭವಾಗಿದೆ ಎಂದು ಸಾವಿರಾರು ರೂಪಾಯಿ ಖರ್ಚು ಮಾಡಿ ರಸ ಗೊಬ್ಬರ ಹಾಕಿದ್ದ ಅನ್ನದಾತನಿಗೆ ಉತ್ತಮ ಬೆಳೆ ಬರುವ ನಿರಿಕ್ಷೆ ಇತ್ತು. ಆದ್ರೆ, ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇಕಡಾ 80 ರಷ್ಟು ಕಡಿಮೆ ಆಗಿದ್ದರಿಂದ ರೈತನ ನಿರಿಕ್ಷೆ ಹುಸಿಯಾಗಿದ್ದು, ಕಷ್ಟ ಪಟ್ಟು ಬೆಳೆದ ಬೆಳೆ ಕಣ್ಣು ಮುಂದೇನೆ ಒಣಗಿ ಹೋಗುತ್ತಿವೆ.
ಈ ಕುರಿತು ಮಾತನಾಡಿದ ಹಾವೇರಿ ಕೃಷಿ ಜಂಟಿ ನಿರ್ದೆಶಕ ಮಂಜುನಾಥ್ ಅಂತರವಳ್ಳಿ ಅವರು ‘ ಹಾವೇರಿ ಜಿಲ್ಲೆಯಲ್ಲಿ ಶೇಕಡಾ 70 ರಷ್ಟು ಮೆಕ್ಕೆಜೋಳವನ್ನು ಹಾಕಲಾಗಿತ್ತು. ಆಗಸ್ಟ್ ತಿಂಗಳಲ್ಲಿ 108 ಮಿಮೀ ಮಳೆಯಾಗಬೇಕಿತ್ತು. ಆದರೆ, 19 ಮಿಮೀ ಮಳೆಯಾಗಿದ್ದರಿಂದ ಬೆಳೆಗಳು ಕುಂಠಿತವಾಗಿದೆ. ಈ ಹಿನ್ನಲೆ ರೈತರು ಇರುವ ಬೆಳೆಯನ್ನು ಕಿತ್ತು, ಹೊಸ ಬೆಳೆ ಹಾಕಲು ಮುಂದಾಗುತ್ತಿದ್ದಾರೆ. ಆದರೆ, ಆದಷ್ಟು ರೈತರು ಹೊಸ ಬೆಳೆಯನ್ನು ಬೆಳೆಯದೇ ಇರುವ ಬೆಳೆಯನ್ನು ಉಳಿಸಿಕೊಳ್ಳೋಣಾ ಎನ್ನುತ್ತಿದ್ದಾರೆ.
ಇನ್ನು ಜುಲೈ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಹಾವೇರಿ ಜಿಲ್ಲೆಯ ಎಲ್ಲ ನದಿಗಳು ಅಪಾಯದ ಮಟ್ಟ ಮಿರಿ ಹರಿದಿದ್ದವು. ಇನ್ನೇನು ವರ್ಷ ಪೂರ್ತಿ ನೀರಿನ ಸಮಸ್ಯೆ ಇರಲ್ಲ ಎಂದು ರೈತ ಆರಾಮ ಆಗಿದ್ದ. ಮಳೆ ಕೈ ಕೊಟ್ಟಿದಕ್ಕೆ ನದಿಗಳ ನೀರಿನ ಮಟ್ಟ ತೀರ ಕಡಿಮೆ ಆಗಿದೆ. ಜಮೀನನಲ್ಲಿನ ಬೋರವೇಲ್ ಬಾವಿಗಳ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಹದಿನೈದು ದಿನಗಳ ಕಾಲ ಮಳೆ ಬರದೆ ಇದ್ರೆ, ವರದಾ ನದಿಯಲ್ಲಿ ಪ್ರಾಣಿ ಪಕ್ಷಿಗಳಿಗೂ ಕುಡಿಯಲು ನೀರು ಸಿಗುವುದು ಕಷ್ಟ.
ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ ಆಗಿದಕ್ಕೆ ರೈತ ಸಮುದಾಯ ಸಂಕಷ್ಟದಲ್ಲಿದೆ. ಮುಂದೇನು ಮಾಡಬೇಕು ಎಂದು ತಿಳಿಯಲಾರದೆ ಕೈ ಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಉಂಟಾಗಿದ್ದು, ನದಿಯಲ್ಲಿ ಹರಿದು ಹೋಗುತ್ತಿರುವ ನದಿಯನ್ನು ನಿಲ್ಲಿಸಲು ಜಾಕವೆಲ್ಗಳಿಗೆ ಗೇಟ್ಗಳನ್ನು ಹಾಕುವ ಕೆಲಸ ಆಗಬೇಕಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ