ಕರ್ನಾಟಕ ಬಿಜೆಪಿ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಮುನಿಸಿಗೆ ಇವೆ ಹಲವು ಕಾರಣ!
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹೋರಾಟಕ್ಕೆ ವಿಪಕ್ಷಗಳಿಗೆ ಸಿಕ್ಕಿದ್ದ ಅಸ್ತ್ರ ಈಗ ಕವಲುದಾರಿಯಲ್ಲಿ ನಿಂತಿದೆ. ಉದ್ದೇಶಿತ ಮೈಸೂರು ಚಲೋ ಅನಿಶ್ಚಿತತೆಗೆ ಜಾರಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೊಟ್ಟಿರುವ ಹೇಳಿಕೆ ರಾಜ್ಯದ ಬಿಜೆಪಿ ನಾಯಕರ ಹುಬ್ಬೇರಿಸಿದೆ. ಅಷ್ಟಕ್ಕೂ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಕುಮಾರಸ್ವಾಮಿಗೆ ಸಿಟ್ಟೇಕೆ ಎಂಬ ವಿವರ ಇಲ್ಲಿದೆ ಓದಿ.
ಬೆಂಗಳೂರು, ಆಗಸ್ಟ್ 1: ಮುಡಾ ಹಗರಣ ಸಂಬಂಧ ಬಿಜೆಪಿ ಬೆಂಗಳೂರು ಮೈಸೂರು ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಖಡಕ್ ಆಗಿ ಹೇಳಿದ್ದಾರೆ. ಈ ವಿಚಾರದಲ್ಲಿ ಜೆಡಿಎಸ್ ಅನ್ನು ಬಿಜೆಪಿ ನಾಯಕರು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಅವರ ತಕರಾರು. ಇಷ್ಟೇ ಅಲ್ಲದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ವಿರುದ್ಧ ಅವರು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಹಾಗಾದರೆ, ಕುಮಾರಸ್ವಾಮಿ ಸಿಟ್ಟಿಗೆ ಕಾರಣವೇನು? ಪ್ರೀತಂ ಗೌಡ ಕಾರಣಕ್ಕಾಗಿಯೇ ಅವರು ಬಿಜೆಪಿ ನಾಯಕರ ವಿರುದ್ಧ ಸಿಟ್ಟಾಗಿದ್ದಾರೆ.
ಪ್ರೀತಂ ಗೌಡ ಕಾರಣದಿಂದ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಬೇಕಿದ್ದ ಮುಡಾ ಸೈಟ್ ಕುರಿತಾದ ಮೈಸೂರು ಚಲೋ ರದ್ದಾಗಬಹುದಾದ ಸನ್ನಿವೇಶ ಸೃಷ್ಟಿಯಾಗಿದೆ. ಪಾದಯಾತ್ರೆಯ ಸಿದ್ಧತೆಯಲ್ಲಿ, ಸಭೆಗಳಲ್ಲಿ, ನಿರ್ಧಾರಗಳಲ್ಲಿ ಹಾಸನ ಮಾಜಿ ಶಾಸಕರೂ ಆಗಿರುವ ಪ್ರೀತಂ ಗೌಡ ಮುಂಚೂಣಿಯಲ್ಲಿರುವುದು ಕುಮಾರಸ್ವಾಮಿ ಕಣ್ಣು ಕೆಂಪಗಾಗಿಸಿದೆ.
ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದಿದ್ದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಬಿಜೆಪಿ ಕೋರ್ ಕಮಿಟಿ ಸದಸ್ಯರಲ್ಲದ ಪ್ರೀತಂ ಗೌಡ ಹಾಜರಾಗಿದ್ದರು. ಅದು ಅಂದೇ ಕುಮಾರಸ್ವಾಮಿ ಕಣ್ಣು ಕೆಂಪಗಾಗಿಸಿತ್ತು. ಮಾಹಿತಿಗಳ ಪ್ರಕಾರ, ಸಭೆಯಲ್ಲೇ ಪ್ರೀತಂ ಗೌಡ ಉಪಸ್ಥಿತಿ ಬಗ್ಗೆ ಬಿಜೆಪಿ ನಾಯಕರ ಮುಂದೆ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಅದರ ಮುಂದುವರಿದ ಭಾಗವಾಗಿ ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವರ ಬಾಯಿಂದ ನೇರವಾಗಿ ಪ್ರೀತಂ ಗೌಡ ವಿರುದ್ಧ ಅಸಹನೆ ಹೊರಬಿದ್ದಿದೆ. ಪಾದಯಾತ್ರೆಗೆ ಎನ್ಡಿಎ ಮಿತ್ರ ಪಕ್ಷ ಜೆಡಿಎಸ್ ಬೆಂಬಲ ನಿರಾಕರಿಸಿದೆ.
ಕೋರ್ ಕಮಿಟಿ ಸಭೆಯಲ್ಲಿ ಪ್ರೀತಂ ಗೌಡ: ಹೆಚ್ಡಿಕೆ ಆಕ್ಷೇಪ
ಭಾನುವಾರ ನಡೆದಿದ್ದ ಬಿಜೆಪಿ-ಜೆಡಿಎಸ್ ಕೋರ್ ಕಮಿಟಿ ಸಮನ್ವಯ ಸಭೆ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಂ ಗೌಡ ಮತ್ತು ಪಿ. ರಾಜೀವ್ ಹಾಜರಿದ್ದರು. ಬಿಜೆಪಿ ಕೋರ್ ಕಮಿಟಿ ಸದಸ್ಯರಲ್ಲದ ಪ್ರೀತಂ ಮತ್ತು ರಾಜೀವ್ ಉಪಸ್ಥಿತಿಗೆ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಮುಡಾ ಪಾದಯಾತ್ರೆ ವಿಚಾರದಲ್ಲಿ ಪ್ರೀತಂ ಗೌಡ ಮುಂಚೂಣಿಯಲ್ಲಿರುವುದನ್ನು ಒಪ್ಪಲು ಕುಮಾರಸ್ವಾಮಿ ಸಿದ್ಧರಿಲ್ಲ. ಪಾದಯಾತ್ರೆ ಸಾಗುವ ಮಾರ್ಗದ ವ್ಯಾಪ್ತಿಯ ಪೂರ್ವ ಸಿದ್ಧತಾ ಸಭೆಗಳಲ್ಲೂ ಜೆಡಿಎಸ್ ಪಕ್ಷದ ಮುಖಂಡರನ್ನು ಆಹ್ವಾನಿಸದೇ ಸಭೆ ನಡೆಸಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ.
ಬಿಜೆಪಿಯಲ್ಲೂ ಒಡಕು
ಈ ಮಧ್ಯೆ ಪಾದಯಾತ್ರೆ ಬಗ್ಗೆ ಬಿಜೆಪಿಯಲ್ಲೂ ಒಂದಷ್ಟು ಮೂಡಿದೆ. ಕೋರ್ ಕಮಿಟಿ ಸಭೆಯಲ್ಲಿ ಪೂರ್ಣ ಚರ್ಚೆ ಆಗಿಲ್ಲ. ರಾಜ್ಯಾಧ್ಯಕ್ಷರ ಆಪ್ತ ಪದಾಧಿಕಾರಿಗಳೇ ಎಲ್ಲಾ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಆಂತರಿಕವಾಗಿ ಪದಾಧಿಕಾರಿಗಳ ಮಟ್ಟದಲ್ಲೇ ಆಕ್ಷೇಪ ವ್ಯಕ್ತವಾಗಿದೆ. ಸಿದ್ಧತಾ ಸಭೆಗಳಲ್ಲೂ ಜೆಡಿಎಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕೂಡಾ ಬಿಜೆಪಿಯಲ್ಲೇ ಅಭಿಪ್ರಾಯ ಕೇಳಿ ಬಂದಿದೆ. ಇದರ ನಡುವೆಯೇ ಕುಮಾರಸ್ವಾಮಿ ಹೇಳಿಕೆಯಿಂದ ಗೊಂದಲಕ್ಕೆ ಬಿದ್ದರೂ ಪಾದಯಾತ್ರೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪದಾಧಿಕಾರಿಗಳು ಹೇಳುತ್ತಿದ್ದಾರೆ.
ಹಾಗಂತ ಎನ್ಡಿಎ ಭಾಗವಾದ ಮೇಲೆ ಕುಮಾರಸ್ವಾಮಿ ಅಸಮಾಧಾನಗೊಂಡಿರುವುದು ಇದೇ ಮೊದಲೇನಲ್ಲ. ಲೋಕಸಭಾ ಚುನಾವಣೆಯಲ್ಲಿ ಕೋಲಾರ ಸೀಟು ಹಂಚಿಕೆ, ಹಳೆ ಮೈಸೂರು ಭಾಗದಲ್ಲಿ ಅಭ್ಯರ್ಥಿಗಳ ಆಯ್ಕೆ, ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಆಯ್ಕೆ, ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ವಿಚಾರದಲ್ಲೂ ಬಿಜೆಪಿ ಬಗ್ಗೆ ಕುಮಾರಸ್ವಾಮಿ ಪರೋಕ್ಷ ಅಸಮಾಧಾನ ತೋರ್ಪಡಿಸಿದ್ದರು.
ಏನಾಗಲಿದೆ ಪಾದಯಾತ್ರೆ ಭವಿಷ್ಯ?
ಇದೆಲ್ಲದರ ಮಧ್ಯೆ ನವದೆಹಲಿಯಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಹೈಕಮಾಂಡ್ ಮತ್ತು ಕುಮಾರಸ್ವಾಮಿ ಜೊತೆ ಮಾತನಾಡಿ ನಾಳೆಯೊಳಗೆ ನಿರ್ಧಾರ ಮಾಡುವುದಾಗಿ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ, ಬಿಜೆಪಿ ಪಾದಯಾತ್ರೆಗೆ ಬೆಂಬಲವಿಲ್ಲ; ಹೆಚ್ಡಿ ಕುಮಾರಸ್ವಾಮಿ
ಇತ್ತ ಪಾದಯಾತ್ರೆಯ ಮೊದಲ ದಿನದ ಜವಾಬ್ದಾರಿ ವಹಿಸಲ್ಪಟ್ಟಿರುವ ಬಿಜೆಪಿ ಯುವ ಮೋರ್ಛಾ ಪದಾಧಿಕಾರಿಗಳು ಸಿದ್ಧತಾ ಸಭೆ ನಡೆಸಿದ್ದಾರೆ. ಇದರ ಜೊತೆಯಲ್ಲಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಯುವ ಮೋರ್ಛಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ವೆಂಕಟೇಶ್ ಫೇಸ್ಬುಕ್ ಮೂಲಕ ಟೀಕಿಸಿದ್ದು, ಯುವ ಮೋರ್ಚಾ ಪ್ರೀತಂ ಗೌಡ ಬೆಂಬಲಕ್ಕೆ ನಿಂತಿದೆ.
ಇನ್ನು ಕುಮಾರಸ್ವಾಮಿ ಹೇಳಿಕೆಯಿಂದ ಅವಾಕ್ಕಾಗಿರುವ ರಾಜ್ಯ ಬಿಜೆಪಿ ಘಟಕ ದೆಹಲಿಯತ್ತ ಮುಖ ಮಾಡಿದೆ. ಹೈಕಮಾಂಡ್ ನಿರ್ದೇಶನಕ್ಕಾಗಿ ಕಾಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ