ಮುಂದಿನ ಚುನಾವಣೆಯಲ್ಲಿ ಸುಮಲತಾ ಸೋಲಿಸಲು ಹೆಚ್ಡಿ ಕುಮಾರಸ್ವಾಮಿ ಶಪಥ.. ಇದಕ್ಕೆ ಸುಮಲತಾ ಕೌಂಟರ್ ಪ್ಲಾನ್ ಏನು?
ಚುನಾವಣಾ ಸಮಯದಲ್ಲಿ ಆಡಿಯೋ ಬಿಡುಗಡೆ ಮಾಡಿದ್ರೆ ಜನರಿಗೆ ಸತ್ಯ ಗೊತ್ತಾಗುತ್ತದೆ. ಅದು ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂದು ಸುಮಲತಾರನ್ನು ಮಂಡ್ಯದಲ್ಲಿ ಹಣಿಯಲು ಕುಮಾರಸ್ವಾಮಿ ಆಡಿಯೋ ಬಾಂಬ್ ಬಳಕೆ ಲೆಕ್ಕಾಚಾರದಲ್ಲಿದ್ದಾರೆ.
ಮಂಡ್ಯ: ಕಳೆದ ಕೆಲವು ದಿನಗಳಿಂದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ನಡುವೆ ಮಾತಿನ ಸಿಡಿ ಗುಂಡುಗಳೇ ಸಿಡಿಯುತ್ತಿದೆ. ಇದರ ನಡುವೆ ಮುಂಬರುವ ಚುನಾವಣೆಯಲ್ಲಿ ಸಂಸದೆ ಸುಮಲತಾ ಸೋಲಿಸಲು ಹೆಚ್ಡಿ ಕುಮಾರಸ್ವಾಮಿ ಶಪಥ ಮಾಡಿದ್ದಾರೆ. ಚುನಾವಣೆಗೂ ನಾಲ್ಕು ತಿಂಗಳ ಮುನ್ನ ಆಡಿಯೋ ದಾಖಲೆ ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದಾರೆ. ಚುನಾವಣೆ ವರೆಗೂ ಕಾದು ನೋಡುವ ತಂತ್ರಕ್ಕೆ ಕುಮಾರಸ್ವಾಮಿ ಮೊರೆ ಹೋಗಿದ್ದಾರೆ.
ಚುನಾವಣಾ ಸಮಯದಲ್ಲಿ ಆಡಿಯೋ ಬಿಡುಗಡೆ ಮಾಡಿದ್ರೆ ಜನರಿಗೆ ಸತ್ಯ ಗೊತ್ತಾಗುತ್ತದೆ. ಅದು ಚುನಾವಣೆ ಮೇಲೆ ಪ್ರಭಾವ ಬೀರುತ್ತದೆ ಎಂದು ಸುಮಲತಾರನ್ನು ಮಂಡ್ಯದಲ್ಲಿ ಹಣಿಯಲು ಕುಮಾರಸ್ವಾಮಿ ಆಡಿಯೋ ಬಾಂಬ್ ಬಳಕೆ ಲೆಕ್ಕಾಚಾರದಲ್ಲಿದ್ದಾರೆ. ಹೀಗಾಗಿ ಸಂಸದೆ ಸುಮಲತಾಗೆ ಸಂಬಂಧಿಸಿದ ಆಡಿಯೋ ದಾಖಲೆಯನ್ನು ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನು ಇದಕ್ಕೆ ಪೂರಕವಾಗಿ ನಿರ್ದಿಷ್ಟ ವ್ಯಕ್ತಿಗಳ ಜೊತೆಗಿನ ಮೀಟಿಂಗ್ ಫೋಟೋ ಸಂಗ್ರಹ ಮಾಡಲಾಗುತ್ತಿದೆ. ಸದ್ಯಕ್ಕೆ ಆಡಿಯೋ ವಿಚಾರದಲ್ಲಿ ಅನಗತ್ಯ ಹೇಳಿಕೆ ನೀಡದಿರಲು ಕುಮಾರಸ್ವಾಮಿ ಸ್ವಾಮಿ ತೀರ್ಮಾನ ಮಾಡಿದ್ದಾರೆ. ಆಡಿಯೋ ಬಿಡುಗಡೆ ಮೂಲಕ ಮಗನ ಸೋಲಿನ ಸೇಡು ತೀರಿಸಿಕೊಳ್ಳುತ್ತಾರೆ ಎಂಬುವುದೇ ಕುತೂಹಲಕರವಾಗಿದೆ.
ಕುಮಾರಸ್ವಾಮಿ ಆಡಿಯೋ ಬಾಂಬ್ಗೆ ಸುಮಲತಾ ಕೌಂಟರ್ ಪ್ಲಾನ್ ಮಹಿಳೆಯ ಘನತೆ ವಿರುದ್ದ ಮಾನನಷ್ಟ ಹೇಳಿಕೆಯನ್ನೇ ಸುಮಲತಾ ಟ್ರಂಪ್ ಕಾರ್ಡ್ ಆಗಿ ಬಳಸಬಹುದು. ಪ್ರತಿ ಬಾರಿಯೂ ಕೂಡ ಕುಮಾರಸ್ವಾಮಿ ದಬ್ಬಾಳಿಕೆ ಮಾತುಗಳನ್ನಾಡುತ್ತಾರೆ ಎಂಬ ಕಾರ್ಡ್ ಬಳಸಬಹುದು. ವೈಯಕ್ತಿಕ ರಾಜಕೀಯ ಮಾಡಿದರೆ ವೈಯಕ್ತಿಕ ಚಾರಿತ್ರ್ಯದ ಪ್ರಶ್ನೆ ಮಾಡೋಣ ಎಂದು ಬೆಂಬಲಿಗರು ಹೇಳಿದ್ದಾರೆ. ಆದರೆ ಯಾರದೇ ತೀರಾ ಖಾಸಗಿ ಜೀವನದ ಬಗ್ಗೆ ಮಾತನಾಡದಂತೆ ಸ್ಥಳೀಯ ಬೆಂಬಲಿಗರಿಗೆ ಸುಮಲತಾ ಸೂಚನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಸ್ವಾಭಿಮಾನ ಹಾಗೂ ಮಹಿಳೆಯ ಘನತೆಯ ಸ್ವಾಭಿಮಾನವನ್ನ ಬಳಸಿಕೊಳ್ಳಲು ಸುಮಲತಾ ಟೀಮ್ ಮುಂದಾಗಿದೆ. ಈ ಸಂಬಂಧ ಅಗತ್ಯ ಬಿದ್ದರೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮಂಡ್ಯದ ಹಳ್ಳಿ ಹಳ್ಳಿಗಳಲ್ಲಿ ಜನ ಸಂಪರ್ಕ ಸಭೆ ನಡೆಸಲು ಚಿಂತನೆ ನಡೆಸಿದೆ. ಬೆಂಬಲಿಗರಿಗೆ ನೆರವಾಗುವ ನಿಟ್ಟಿನಲ್ಲಿ ಕುಮಾರಸ್ವಾಮಿ ವಿವಾದಿತ ಮಹಿಳಾ ವಿರೋಧಿ ಹೇಳಿಕೆ ಜೀವಂತವಾಗಿಡಲು ಸುಮಲತಾ ಬಣ ನಿರ್ಧಾರ ಮಾಡಿದೆ. ಕೇವಲ ಅಧಿಕಾರ ಹಿಡಿಯಲು ಮಂಡ್ಯ ಜಿಲ್ಲೆ ದುರುಪಯೋಗ ಎಂಬ ವಾದ ಮಂಡಿಸುತ್ತಿದೆ. ಇನ್ನು ಸುಮಲತಾಗೆ ಕಾಂಗ್ರೆಸ್ ನಾಯಕರ ಪರೋಕ್ಷ ಬೆಂಬಲವಿದೆ.
ಸುಮಲತಾ ಕೌಂಟರ್ ಪ್ಲಾನ್ ಗಣಿ ವಿಚಾರವನ್ನೇ ಮುಂದಿಟ್ಟುಕೊಂಡು ಜೆಡಿಎಸ್ ನಾಯಕರಿಗೆ ಕೌಂಟರ್ ನೀಡಲು ಸಂಸದೆ ಸುಮಲತಾ ಪ್ಲಾನ್ ಮಾಡಿದ್ದಾರೆ. ಕೊವಿಡ್ ಎರಡನೇ ಅಲೆ ಬಳಿಕ ಸಾಕಷ್ಟು ಆರೋಪಗಳಿಗೆ ಗುರಿಯಾಗಿದ್ದ ಸುಮಲತಾರ ಕಾರ್ಯವೈಖರಿಯನ್ನು ಜೆಡಿಎಸ್ ನಾಯಕರು ಟೀಕಿಸಿದ್ದರು. ಎಂಪಿ ಮೇಡಂ ಕೈಗೆ ಸಿಗೋದಿಲ್ಲ ಎಂದೆ ಸುಮಲತಾ ವಿರುದ್ಧ ಪ್ರಚಾರ ಮಾಡಿದ್ದರು. ಆಕ್ಸಿಜನ್ ಸಮಸ್ಯೆ ಹಾಗೂ ಲಸಿಕೆ ವಿಚಾರದಲ್ಲಿ ಸಾಕಷ್ಟು ಟೀಕೆಗೆ ಸುಮಲತಾ ಒಳಗಾಗಿದ್ದರು.
ಆದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರ ಹೇಳಿಕೆಗಳನ್ನು ಬಂಡವಾಳ ಮಾಡಿಕೊಂಡು ಸಂಸದೆ ಸುಮಲತಾ ಗೆದ್ದಿದ್ದರು. ಅದೇ ರೀತಿ ಈ ಬಾರಿಯ ಚುನಾವಣೆಯಲ್ಲೂ ಅದೇ ಸೂತ್ರ ಬಳಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಗಣಿ ಬಲೆಯಲ್ಲಿ ಜೆಡಿಎಸ್ ನಾಯಕರನ್ನು ಕಟ್ಟಿ ಹಾಕಲು ಸುಮಲತಾ ಹೊರಟಿದ್ದಾರಂತೆ. ಮಂಡ್ಯ ಜಿಲ್ಲೆಯ ಭಾವನಾತ್ಮಕ ವಿಷಯವಾದ ಕೆಆರ್ಎಸ್ ಡ್ಯಾಂನ ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತಿದೆ. ಐತಿಹಾಸಿಕ ಅಣೆಕಟ್ಟಿಗೆ ಜೆಡಿಎಸ್ ನಾಯಕರಿಂದಲೇ ಹಾನಿಯಾಗುತ್ತಿದೆ ಎಂದು ಬಿಂಬಿಸಲು ಸುಮಲತಾ ಹೊರಟಿದ್ದಾರೆ. ಕೆಆರ್ಎಸ್ ಅಣೆಕಟ್ಟಿನ ಸುತ್ತಮುತ್ತ ಜೆಡಿಎಸ್ ನಾಯಕರ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶವನ್ನು ದಾಳವಾಗಿಟ್ಟುಕೊಂಡ ಸುಮಲತಾ ಅಸ್ತಿತ್ವದ ಹೋರಾಟ ಎಂಬಂತೆ ರಾಜಕೀಯ ದಾಳ ಉರುಳಿಸುತ್ತಿದ್ದಾರೆ.
ಇನ್ನೊಂದೆಡೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಜೆಡಿಎಸ್ ನಾಯಕರು ಮುಂದಾಗಿದ್ದು ಸ್ವತಃ ಹೆಚ್ಡಿ ಕುಮಾರಸ್ವಾಮಿ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಹಾಗೂ ಪರಿಷತ್ ಸದಸ್ಯ ಶ್ರೀಕಂಠೇಗೌಡ ರಿಂದ ನೇರವಾಗಿ ಸುಮಲತಾ ಟಾರ್ಗೆಟ್ ಮಾಡಲಾಗುತ್ತಿದೆ. 2019 ರ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಇನ್ನಷ್ಟು ಜಿದ್ದಿನ ರಾಜಕಾರಣ ಜೆಡಿಎಸ್ ಮುಂದಾಗಿದೆ.
Published On - 8:57 am, Thu, 8 July 21