ಜನರಿಗೆ ಪರಿಚಯವಾಗಲು ಅವರೇ ಕಾರಣ! ಬಿಎಸ್​ವೈ, ಬಿಜೆಪಿಯ ಹಾಡಿಹೊಗಳಿದ ಹೆಚ್​ಡಿ ಕುಮಾರಸ್ವಾಮಿ

| Updated By: Ganapathi Sharma

Updated on: Jun 22, 2024 | 2:41 PM

ಬಿಜೆಪಿ, ಜೆಡಿಎಸ್​ನಿಂದ ನೂತನ ಸಂಸದರಾಗಿ ಆಯ್ಕೆಯಾದವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ಹಾಗೂ ಬಿಎಸ್ ಯಡಿಯೂರಪ್ಪರನ್ನು ಹಾಡಿಹೊಗಳಿದರು. ಬಿಜೆಪಿ, ಜೆಡಿಎಸ್ ಮೈತ್ರಿಯ 20-20 ಸರ್ಕಾರದ ಸಂದರ್ಭವನ್ನೂ ನೆನಪಿಸಿಕೊಂಡ ಅವರು, ಮುಂದಿನ ನಡೆಗಳ ಬಗ್ಗೆಯೂ ಮಾತನಾಡಿದರು. ಕುಮಾರಸ್ವಾಮಿ ಮಾತಿನ ಪೂರ್ಣ ವಿವರ ಇಲ್ಲಿದೆ.

ಜನರಿಗೆ ಪರಿಚಯವಾಗಲು ಅವರೇ ಕಾರಣ! ಬಿಎಸ್​ವೈ, ಬಿಜೆಪಿಯ ಹಾಡಿಹೊಗಳಿದ ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಜೂನ್ 22: ಬಿಜೆಪಿ (BJP) ಮತ್ತು ಬಿಎಸ್ ಯಡಿಯೂರಪ್ಪನವರ ಜತೆಗೂಡಿ ಸರ್ಕಾರ ರಚಿಸಿದ್ದರಿಂದಲೇ ರಾಜ್ಯದಲ್ಲಿ ಜನ ತಮ್ಮನ್ನು ಗುರುತಿಸುವಂತಾಯಿತು ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಶನಿವಾರ ಹೇಳಿದರು. ಎನ್​ಡಿಎ ಮೈತ್ರಿಕೂಟದಿಂದ ಕರ್ನಾಟಕದ ಕ್ಷೇತ್ರಗಳಿಂದ ನೂತನ ಸಂಸದರಾಗಿ ಆಯ್ಕೆಯಾದವರಿಗೆ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬಿಜೆಪಿ, ಜೆಡಿಎಸ್ ಮೈತ್ರಿ ಹೊಂದಾಣಿಕೆಯಲ್ಲಿ 26-27 ಸೀಟು ಗೆಲ್ಲುವ ನಿರೀಕ್ಷೆ ಇತ್ತು. ಕುಮಾರಸ್ವಾಮಿಯಂತಹವನು ಇಂದು ನಾಡಿನಲ್ಲಿ ಪರಿಚಯ ಆಗಬೇಕಾದರೆ ಅಂದು ಯಡಿಯೂರಪ್ಪ ಜೊತೆ ಸರ್ಕಾರ ಮಾಡಿದ್ದೇ ಕಾರಣ ಎಂದು ಅವರು ಹೇಳಿದರು.

ನಾಡಿನ ಜನತೆ ಈ ಹೊಂದಾಣಿಕೆ ಶಾಶ್ವತ ಇರಬೇಕು ಎಂದು ಬಯಸಿದ್ದರು. ಹೊಂದಾಣಿಕೆ ಮುಂದುವರಿಯಬೇಕೆಂಬುದು ನನ್ನ ಸ್ವಂತ ಇಚ್ಛೆ ಕೂಡ ಆಗಿತ್ತು. ಅಂದು ಅಧಿಕಾರ ಕೊಡಲು ಆಗದ್ದು ನನ್ನಿಂದಾದ ತಪ್ಪು ಅಲ್ಲ. ಕೆಲವರು ಕುತಂತ್ರ ಮಾಡಿದ ಕಾರಣಕ್ಕೆ ಆ ರೀತಿ ಆಯಿತು. ಆಗ ನಮ್ಮಿಂದ ಆದ ತಪ್ಪಿನಿಂದ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಉಳಿದುಕೊಂಡಿದೆ. ಅಂದು ನಡೆದ ಘಟನೆಗಳು ಕೆಟ್ಟ ಘಟನೆಗಳು, ಕೆಟ್ಟ ಕನಸುಗಳು. ಬೇರೆ ಬೇರೆ ಸಮಸ್ಯೆಗಳು ಬಂದಿದ್ದರೂ ನಮ್ಮಲ್ಲಿ ಹೊಂದಾಣಿಕೆಯಲ್ಲಿ ಏನೂ ಸಮಸ್ಯೆ ಇರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

2018 ರಲ್ಲಿ ಕೂಡಾ ನಾನು ಬಿಜೆಪಿ ಜೊತೆ ಸರ್ಕಾರ ಮಾಡಬೇಕು ಎಂದು ಭಾವಿಸಿದ್ದೆ. ಯಡಿಯೂರಪ್ಪ ಮತ್ತು ದೇವೇಗೌಡರು ಈ ವಯಸ್ಸಿನಲ್ಲೂ ಪ್ರವಾಸ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮ ಹಾಕಿದ್ದಾರೆ ಎಂದು ಅವರು ಹೇಳಿದರು.

ಸಚಿವ ಸೋಮಣ್ಣ ಅವರ ಇಲಾಖೆಯಲ್ಲಿ ರಾಜ್ಯಕ್ಕೆ ದೊಡ್ಡ ಮಟ್ಟದ ಅಭಿವೃದ್ಧಿ ತರಲು ಅವಕಾಶವಿದೆ. ಯಾವುದೇ ಸಣ್ಣಪುಟ್ಟ ಘರ್ಷಣೆಗಳು ಸ್ಥಳೀಯವಾಗಿ ಇದ್ದರೂ ಅಸೂಯೆ ಮನೋಭಾವ ಇಲ್ಲದೇ ಎರಡೂ ಪಕ್ಷಗಳ ಕಾರ್ಯಕರ್ತರು ಕೆಲಸ ಮಾಡಬೇಕು. ಬಿಬಿಎಂಪಿ, ಮೈಸೂರು ಮಹಾನಗರ ಪಾಲಿಕೆ, ಜಿಪಂ., ತಾ.ಪಂ ಚುನಾವಣೆಗಳು ನಮ್ಮ ಮುಂದೆ ಇವೆ. ಕಾಂಗ್ರೆಸ್ ವಿರುದ್ಧ ನಾವು ಜೊತೆಗೂಡಿ ಹೋರಾಟ ಮುಂದುವರಿಸಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ಜನರ ಕೈಗೆ ಚೊಂಬು ಕೊಟ್ಟ ಕಾಂಗ್ರೆಸ್: ಪ್ರಲ್ಹಾದ್ ಜೋಶಿ ಕಿಡಿ

ಗ್ಯಾರಂಟಿಯೇ ಬೆಲೆ ಏರಿಕೆಗೆ ಮೂಲ ಅಂತಾ ಕರ್ನಾಟಕದ ಸಿದ್ಧರು ಸಂದೇಶ ಕೊಟ್ಟಿದ್ದಾರೆ. ಹಿಂದೆ ಯಡಿಯೂರಪ್ಪ ಮತ್ತು ನಾನು ಮಾಡಿದ ರೀತಿಯ ಸರ್ಕಾರ ಮತ್ತೆ ರಾಜ್ಯದಲ್ಲಿ ತರಬೇಕು. ನಮ್ಮಲ್ಲಿ ಒಡಕು ತರುವ ಪ್ರಯತ್ನ ಆಗಬಹುದು. ಭಿನ್ನಾಭಿಪ್ರಾಯ, ಸಂಶಯ ಮೂಡಿಸಲು ಮಾಡುವ ಪ್ರಯತ್ನಕ್ಕೆ ಕಿವಿಗೊಡಬಾರದು ಎಂದು ಅವರು ಕಾರ್ಯಕರ್ತರು, ನಾಯಕರಿಗೆ ಕಿವಿಮಾತು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ