ಮಂಡ್ಯ, ಮಾರ್ಚ್ 15: ಮಾರ್ಚ್ 21ಕ್ಕೆ ನನಗೆ ಆಪರೇಷನ್ ಇದೆ. ನನಗೆ 84 ವರ್ಷ ಆಯಸ್ಸು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಆದರೆ ಈ ಜೀವ ಭೂಮಿಗೆ ಇಷ್ಟು ಬೇಗ ಹೋಗಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಜಿಲ್ಲೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜನರ ಋಣ ತೀರಿಸಿದ ಮೇಲೆ ಈ ಜೀವ ಮಣ್ಣಿಗೆ ಹೋಗುತ್ತೆ. ಅಲ್ಲಿಯವರೆಗೆ ನಾನು ಮಣ್ಣಿಗೆ ಹೋಗುವುದಿಲ್ಲ. H.D.ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಬದುಕಿದ್ದಾರೆ ಎಂದು ಹೇಳಿದ್ದಾರೆ.
ನಾನು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಅಂದುಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿದ್ದೆ, ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದೆ. ನಾನು ಮಂಡ್ಯ ಜಿಲ್ಲೆಯ ಜನರ ಜೊತೆ ಮೊದಲಿನಿಂದಲೂ ಇದ್ದೇನೆ. 2019ರ ಚುನಾವಣೆಯಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕೊಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿದೆ ಎಂದರು.
ಇದನ್ನೂ ಓದಿ: ಮಂಡ್ಯ ಲೋಕಸಭಾ ಟಿಕೆಟ್ಗಾಗಿ ತಿಕ್ಕಾಟ: ಸುಮಲತಾಗೆ ಮೈತ್ರಿ ಟಿಕೆಟ್ ಕೊಡಬೇಕಾ? ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಜನ್ಮ ಭೂಮಿ ಹಾಸನ, ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ಆದರೆ ನನ್ನ ಜೀವ ಮಿಡಿಯುವುದು ಮಂಡ್ಯಕ್ಕಾಗಿ. ಸ್ವಾಭಿಮಾನ ಎನ್ನುವುದು ಮಾತಿನಲ್ಲಿ ಅಲ್ಲ, ಕೆಲಸದಲ್ಲಿರಬೇಕು. ನಾಟಿ ಸ್ಟೈಲ್ ಅಂತಾರೆ, ದುಡ್ಡಿನಿಂದ ರಾಜಕೀಯ ಮಾಡೋದಲ್ಲ. ಈ ಚುನಾವಣೆ ಕೆಲವರಿಗೆ ಕಲೆಕ್ಷನ್ ಮಾಡಿಕೊಳ್ಳಲು ಒಳ್ಳೆ ಅವಕಾಶ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಗೆ 9 ಸಾವಿರ ಕೋಟಿ ರೂ. ಅಭಿವೃದ್ಧಿ ಕೊಡಲು ನಾವು ಹೋದಾಗ ಏನೇನು ಆಯ್ತು ಎನ್ನೋದು ಎಲ್ಲರಿಗೂ ಗೊತ್ತು. ಮಂಡ್ಯ ಜಿಲ್ಲೆಗೆ ಅನ್ಯಾಯವಾಗಿದೆ. ನಾನು ದೇವೇಗೌಡರು ಅಧಿಕಾರದಲ್ಲಿ ಇದ್ದದ್ದು ಕೆಲ ವರ್ಷ ಮಾತ್ರ. ನನ್ನ ಕೈಯಲ್ಲಿ ಐದು ವರ್ಷ ಅಧಕಾರ ಇದ್ದಿದರೆ ಮಂಡ್ಯ ಅಭಿವೃದ್ಧಿಯ ಕಥೆಯೇ ಬೇರೆ ಎಂದು ಹೇಳಿದ್ದಾರೆ.
ನಿಖಿಲ್ ಚುನಾವಣೆಗೆ ಪ್ರಾಮಾಣಿಕ ಕೆಲಸ ಮಾಡಿದೆ, ಕುಮಾರಸ್ವಾಮಿ ಸರ್ಕಾರ ಉಳಿಸಲು ಕೆಲಸ ಮಾಡಿದೆ ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಆ ಸ್ನೇಹಿತ ಏನು ಮಾಡಿದ್ದಾನೆ ಮಹಾನುಭಾವ ಗೊತ್ತು. ಈಗ ಕೆಆರ್‌ಎಸ್‌ನಲ್ಲಿ ಕಾವೇರಿ ಪ್ರತಿಮೆ ಮಾಡ್ತೀನಿ ಅಂತಾ ಹೇಳುತ್ತಿದ್ದಾನೆ. ಡಾ.ಮಂಜುನಾಥ್ ಅವರನ್ನು ಸ್ಪರ್ಧೆ ಮಾಡುವಂತೆ ನಾನು ಹೇಳಿಲ್ಲ. ಅವರು ಸಹ ಬಯಸಿರಲಿಲ್ಲ. ಜನರ ಒತ್ತಾಯದ ಮೇರೆಗೆ ಅವರು ರಾಜಕೀಯಕ್ಕೆ ಬಂದಿದ್ದಾರೆ.
ಈಗ ಕಾಂಗ್ರೆಸ್ ಅವರು ದೇವೇಗೌಡರ ಕುಟುಂಬದ ಗುಲಾಮರಾಗುವುದು ಬೇಡ ಅಂತಾ ಹೇಳುತ್ತಾರೆ. ನಾವು ರಾಮನಗರ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ. ರಾಮನಗರ ಜನರನ್ನು ಗುಲಾಮರನ್ನಾಗಿ ಕಾಣೋದು ಕಾಂಗ್ರೆಸ್ ಅವರು. ಮಾವನನ್ನೇ ಯಾವಮಾರಿಸಿದ ಚತುರ ಅಳಿಯ ಅಂತಾರೆ ಆ ಮಹಾನುಭಾವ. ಪಾಪ ಡಾ.ಮಂಜುನಾಥ್ ಎಷ್ಟೋ ಜನರ ಪ್ರಾಣ ಉಳಿಸಿದ್ದಾರೆ. ಅಂತವರಿಗೆ ಲಘುವಾಗಿ ಇವರು ಮಾತಾಡುತ್ತಿದ್ದಾರೆ. ಇವರು ಕಮಿಷನ್ ಪಡೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಯಾರು? ಅವರ ಹಿನ್ನೆಲೆ ಏನು? ಸ್ಟಾರ್ ಬಂದಿದ್ದೇಗೆ?
ಅಭ್ಯರ್ಥಿ ಘೋಷಣೆ ಮಾಡದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲ ಇದೆ. ಮಂಡ್ಯ ಕ್ಷೇತ್ರ ನಿರ್ಲಕ್ಷ್ಯ ಮಾಡ್ತಿದ್ದಾರೆ ಅನ್ನೋ ಪ್ರಶ್ನೆ ಹಲವರಲ್ಲಿ ಇದೆ. ಇಂದಿನ ಸಭೆಯಲ್ಲಿ ನಾವು ಸಂದೇಶ ಕೊಡುವುದಕ್ಕಿಂತ ನೀವೇ ಕೊಟ್ಟಿದ್ದೀರಿ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕೆಲವು ಗೊಂದಲ ಇತ್ತು. ಹೀಗಾಗಿ ನಾನೇ ಹಾಸನಕ್ಕೆ ಹೋಗಿ ಅಪಪ್ರಚಾರಕ್ಕೆ ಅಂತ್ಯವಾಡಿದ್ದೇನೆ ಎಂದರು.
ಹೆಚ್ಡಿ ದೇವೇಗೌಡರಿಗೆ ರಾಜಕೀಯವಾಗಿ ಹಾಸನಕ್ಕಿಂತ ಮಂಡ್ಯ ಹೆಚ್ಚು ಶಕ್ತಿ ನೀಡಿದೆ. ನಾನು, ನನ್ನ ಕುಟುಂಬದ ಯಾರೂ ಯಾರಿಗೂ ದ್ರೋಹ ಮಾಡಿದವರಲ್ಲ. ಬೆಳೆಯುವವರನ್ನು ಹಿಂದೆ ನಿಂತು ಶಕ್ತಿ ತುಂಬಿದ್ದೇವೆ. ನಾನು ಅಥವಾ ನಿಖಿಲ್ ಸ್ಪರ್ಧಿಸುವ ನಿಮ್ಮ ಮಾತಿಗೆ ಶಿರಬಾಗಿ ನಮಸ್ಕಾರ ಮಾಡ್ತೀನಿ. ನಿಮ್ಮ ಮಾತಿಗೆ ಅಪಚಾರ ಮಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.