ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ ಹೆಚ್​ಡಿ ಕುಮಾರಸ್ವಾಮಿ

|

Updated on: Jun 15, 2024 | 11:09 AM

ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿರುವ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಬರಲಿದ್ದು, ವಿಧಾನಸೌಧಕ್ಕೆ ತೆರಳಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ನಂತರ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ.

ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಲಿದ್ದಾರೆ ಹೆಚ್​ಡಿ ಕುಮಾರಸ್ವಾಮಿ
ತಿರುಪತಿಯಲ್ಲಿ ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಜೂನ್ 15: ಕೇಂದ್ರದ ನೂತನ ಎನ್​​ಡಿಎ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಇಂದು ಚನ್ನಪಟ್ಟಣ (Channapatna) ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಶನಿವಾರ ಬೆಳಗ್ಗೆ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿರುವ ಅವರು, ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಂತರ ವಿಧಾನಸೌಧಕ್ಕೆ ತೆರಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

ನಂತರ ತಮ್ಮ ಲೋಕಸಭಾ ಕ್ಷೇತ್ರ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರ ಸಚಿವರಾದ ಬಳಿಕ ಮೊದಲ ಬಾರಿ ಸ್ವಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಕುಮಾರಸ್ವಾಮಿ, ಸಂಸದರ ಕಚೇರಿ ಉದ್ಘಾಟಿಸಲಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿ ಉದ್ಘಾಟನೆಗೆ ಬರುತ್ತಿರುವ ಕುಮಾರಸ್ವಾಮಿ ಸ್ವಾಗತಕ್ಕೆ ನಿಡಘಟ್ಟ ಗ್ರಾಮದಿಂದ ಮಂಡ್ಯವರೆಗೂ ತಯಾರಿ ನಡೆದಿದೆ. ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಬಳಿ ಅದ್ಧೂರಿ ಸ್ವಾಗತ ದೊರೆಯಲಿದೆ. ಮಂಡ್ಯ ಜಿಲ್ಲಾ ಗಡಿಯಿಂದ ಹೆಚ್​​ಡಿಕೆ ಅದ್ಧೂರಿ ಸ್ವಾಗತಕ್ಕೆ ಮಂಡ್ಯ ಜಿಲ್ಲಾ ಜೆಡಿಎಸ್ ಘಟಕ ಸಿದ್ಧತೆ ನಡೆಸಿದೆ.

ಚನ್ನಪಟ್ಟಣಕ್ಕೂ ಕುಮಾಸ್ವಾಮಿ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆಗಳನ್ನು ನೆರವೇರಿಸಲಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವರಾದ ಬಳಿಕ ಬೆಂಗಳೂರಿಗೆ ಬಂದ ಕುಮಾರಸ್ವಾಮಿಗೆ ಆ್ಯಪಲ್, ಮೂಸಂಬಿ ಹಾರ ಹಾಕಿ ಭರ್ಜರಿ ಸ್ವಾಗತ

ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಶುಕ್ರವಾರ ಆಗಮಿಸಿದ್ದ ಕುಮಾರಸ್ವಾಮಿ, ಪ್ರಧಾನಿ ಮೋದಿ ಸಂಪುಟದಲ್ಲಿ ಮಹತ್ವದ ಖಾತೆ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವನಾದ ಬಳಿಕ ನನ್ನ ಕರ್ಮ ಭೂಮಿಗೆ ಬಂದಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ. ವಿಶೇಷವಾಗಿ ರಾಮನಗರ, ಮಂಡ್ಯ ಜಿಲ್ಲೆಯ ಜನರಿಗೆ ಅಭಿನಂದನೆ. ಜೆಡಿಎಸ್ ಮುಗಿಸಿದ್ದೇವೆ ಎಂದು ಮಾತನಾಡುವವರಿಗೆ ಉತ್ತರ ಕೊಡಲ್ಲ. ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ನಾನು ಉತ್ತರ ಕೊಡಲ್ಲ. ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ. ನರೇಂದ್ರ ಮೋದಿ ನನಗೆ ಎರಡು ದೊಡ್ಡ ಖಾತೆಗಳನ್ನು ಕೊಟ್ಟಿದ್ದಾರೆ. 4 ದಿನ ದೆಹಲಿಯಲ್ಲಿ ಕೆಲಸ, ಇನ್ನೆರಡು ದಿನ ಕರ್ನಾಟಕದಲ್ಲಿ ಇರುತ್ತೇನೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 am, Sat, 15 June 24