ಬೆಂಗಳೂರು: ಹಿಟ್ ಆ್ಯಂಡ್ ರನ್ಗೆ ಚಿರತೆ ಸಾವು ಶಂಕೆ
ಕಳೆದ 6 ತಿಂಗಳಿನಿಂದ ಬೆಂಗಳೂರಿನ ದಾಸನಪುರ ಮತ್ತು ಸುತ್ತಮುತ್ತಲಿನ ಜನರಿಗೆ ಉಪಟಳ ನೀಡುತ್ತಿದ್ದ ಚಿರತೆಯ ಮೃತದೇಹ ಬೆಂಗಳೂರಿನ ದಾಸನಪುರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹಿಟ್ ಌಂಡ್ ರನ್ಗೆ ಚಿರತೆ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ.
ನೆಲಮಂಗಲ, ಜೂನ್ 15: ಬೆಂಗಳೂರಿನ (Bengaluru) ದಾಸನಪುರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 6 ವರ್ಷದ ಗಂಡು ಚಿರತೆಯ (Leopard) ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಹಿಟ್ ಆ್ಯಂಡ್ ರನ್ಗೆ ಚಿರತೆ ಸಾವಿಗೀಡಾಗಿದೆ ಎಂದು ತಿಳಿದುಬಂದಿದೆ. ಆದರೆ, ಯಾರೊ ಚಿರತೆಯನ್ನು ಕೊಂದು ಬಿಸಾಡಿದಿದ್ದಾರೆ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ (Nelamangala Traffic Police Station) ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಚಿರತೆ ಸಾವಿಗೆ ಕಾರಣ ತಿಳಿದು ಬರಲಿದೆ. ಆರ್ಎಫ್ಒ ಗೋವಿಂದರಾಜು ನೇತೃತ್ವದಲ್ಲಿ ಚಿರತೆ ಮರಣೋತ್ತರ ಪರೀಕ್ಷೆ ನೆರವೇರಲಿದೆ.
ಚಿರತೆ ಕಳೆದ 6 ತಿಂಗಳಿಂದ ಉಪಟಳ ನೀಡುತ್ತಿತ್ತು. ದಾಸನಪುರ ಮತ್ತು ಸುತ್ತಮುತ್ತಲಿನ ಪ್ರದೇಶದ ಸಾಕು ಪ್ರಾಣಿಗಳನ್ನು ಚಿರತೆ ಬಲಿ ಪಡೆದಿತ್ತು. ಚಿರತೆ ಉಪಟಳಕ್ಕೆ ಹೆದರಿ ಜನರು ಹೊರಗಡೆ ತಿರುಗಾಡಲು ಭಯ ಪಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗಾಗಿ ಬೋನ್ ಇರಿಸಿದ್ದರು. ಆದರೆ, ಚಿರತೆ ಅರಣ್ಯ ಇಲಾಖೆಯ ಬೋನ್ಗೆ ಬಿದ್ದಿರಲಿಲ್ಲ. ಇಂದು (ಜೂ.15) ಚಿರತೆಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.
ಇದನ್ನೂ ಓದಿ: ಸಫಾರಿ ಹೋಗುವವರಿಗೆ ಗುಡ್ನ್ಯೂಸ್: ಸಿಂಹ, ಹುಲಿ ಜೊತೆಗೆ ಬನ್ನೇರುಘಟ್ಟದಲ್ಲಿ ಚಿರತೆ ಸಫಾರಿ ಆರಂಭ
ಪ್ರಕರಣ ಸಂಬಂಧ ಬೆಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಮಾತನಾಡಿ, ಬೆಳಗಿನ ಜಾವ 3ಗಂಟೆಗೆ ನೆಲಮಂಗಲ ಸಂಚಾರಿ ಪೊಲೀಸರು ಅಪಘಾತದಲ್ಲಿ ಚಿರತೆ ಸಾವನ್ನಪ್ಪಿದರ ಬಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ, 6 ವರ್ಷದ ಗಂಡು ಚಿರತೆ ಮೃತಪಟ್ಟಿದೆ. ಸದ್ಯ ಚಿರತೆ ಶವವನ್ನು ನಗರೂರಿನ ನರ್ಸರಿಯಲ್ಲಿ ಇಡಲಾಗಿದೆ. ದಾಸನಪುರ ಪಶು ಚಿಕಿತ್ಸಾಲಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಚಿರತೆ ಸಾವಿಗೆ ಕಾರಣ ತಿಳಿದು ಬರಲಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Sat, 15 June 24