ಚಿಕ್ಕಮಗಳೂರು, ಅಕ್ಟೋಬರ್ 21: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಹಿಂಗಾರು ಮಳೆಯಿಂದ (rain) ಸಾಲು ಸಾಲು ಅವಾಂತರಗಳೇ ಸೃಷ್ಟಿಯಾಗಿವೆ. ಸದ್ಯ ಈ ಮಳೆ ಪರಿಣಾಮ ಪ್ರವಾಸೋದ್ಯಮದ ಮೇಲೆ ಭಾರೀ ಹೊಡೆತಕ್ಕೆ ಕಾರಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಪ್ರವಾಸ ಮತ್ತು ಚಾರಣ ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ನದಿ, ತಗ್ಗು ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದ್ದು, ಮುಂದಿನ 3 ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು, ಮೂಡಿಗೆರೆ, ಶೃಂಗೇರಿ, ಕಳಸ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಕಡೂರು ಪಟ್ಟಣದ ಬಳಿ ಜಲಾವೃತವಾಗಿದೆ. ಮುಳುಗಡೆಯಾದ ರಸ್ತೆಯಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಹಿಂಗಾರು ಮಳೆ ಅವಾಂತರಗಳ ಸರಮಾಲೆಗಳನ್ನೇ ಸೃಷ್ಟಿ ಮಾಡಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಎಫೆಕ್ಟ್ ಚಿಕ್ಕಮಗಳೂರು ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಿದ್ದು, ಪ್ರಸಿದ್ಧ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿವೆ.
ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಗುಡ್ಡ, ಭೂ ಕುಸಿತಕ್ಕೆ ಕಾರಣವೇನು? ಆಘಾತಕಾರಿ ವರದಿ ಬಹಿರಂಗ
ಪ್ರತಿ ನಿತ್ಯವೂ ಬೆಂಗಳೂರು ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿಗೆ ಪ್ರವಾಸಕ್ಕೆ ಬರುತ್ತಿದ್ದ ಪ್ರವಾಸಿಗರು ಸುರಿಯುತ್ತಿರುವ ಮಳೆಗೆ ಹೆದರಿ ಇತ್ತ ಮುಖ ಮಾಡುತ್ತಿಲ್ಲ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಇನಾಂ ದತ್ತಾತ್ರೇಯ ಪೀಠ ಸೇರಿದಂತೆ ಚಂದ್ರದ್ರೋಣ ಪರ್ವತದ ಸಾಲು ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿದೆ. ಪ್ರವಾಸಿಗರು ಇತ್ತ ಸುಳಿಯದೇ ಇರೋದ್ರಿಂದಾಗಿ ಸ್ಥಳೀಯ ವ್ಯಾಪಾರೋದ್ಯಮಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಚಿಕ್ಕ ಪುಟ್ಟ ವ್ಯಾಪಾರಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲು, ಚಾರ್ಮಾಡಿ ಘಾಟಿ ಅಪಾಯಕಾರಿ: ಜಿಯೋಲಾಜಿಕಲ್ ಸರ್ವೇ ವರದಿ
ಕಾಫಿನಾಡಿನಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಸುರಿಯುತ್ತಿರುವ ಹಿಂಗಾರು ಮಳೆಗೆ ಕಾಫಿ ಗಿಡದಲ್ಲೇ ಬೆಳೆಗೆ ಕೊಳೆ ರೋಗ ಆರಂಭವಾಗಿದ್ದು, ಗಿಡದಲ್ಲೇ ಕಾಫಿ ಕೊಳೆಯ ತೊಡಗಿದೆ. ಕಾಫಿಗೆ ಇದೇ ಮೊದಲ ಬಾರಿಗೆ ಚಿನ್ನದ ಬೆಲೆ ಬಂದಿದ್ದು 50 ಕೆ.ಜಿ ಕಾಫಿಗೆ 20 ಸಾವಿರ ಗಡಿ ದಾಟಿದೆ. ಮಳೆಯಿಂದ ಕಾಫಿ ಗಿಡದಲ್ಲೇ ಬೆಳೆ ಕೊಳೆಯುತ್ತಿದ್ದು, ಬೆಳೆಗಾರರನ್ನ ಕಂಗಾಲಾಗಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.