AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದ ಹಲವೆಡೆ ಭಾರೀ ಮಳೆಗೆ ಅವಾಂತರ; ಮನೆಗಳಿಗೆ ನೀರು ನುಗ್ಗಿ ಪರದಾಟ, ರೈತರ ಮುಖದಲ್ಲಿ ಮಂದಹಾಸ

ರಾಜ್ಯದ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದು ಅವಾಂತರಗಳು ಸೃಷ್ಟಿಯಾಗುತ್ತಿವೆ. ಬೆಂಗಳೂರಿನಲ್ಲಿ ಹಲವು ಕಡೆ ಮಳೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದ್ದು ಮತ್ತೊಂದಷ್ಟು ಕಡೆ ಗಾಳಿ ಮಳೆಗೆ ಮರಗಳು ಧರೆಗುರುಳುತ್ತಿವೆ. ಚಿಕ್ಕಮಗಳೂರು ತಾಲೂಕಿನ ಕಸ್ಕೆ ಎಂಬಲ್ಲಿ ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಎಲ್ಲ ವಸ್ತುಗಳು ನಾಶವಾಗಿವೆ.

Follow us
ಆಯೇಷಾ ಬಾನು
|

Updated on:May 19, 2024 | 10:58 AM

ಬೆಂಗಳೂರು, ಮೇ.19: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆ (Rain) ಸುರಿಯುತ್ತಿದ್ದು ಭಾರೀ ಅವಾಂತರ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಯಲಹಂಕದ ನಾರ್ತ್ ಹುಡ್ ಅಪಾರ್ಟ್ಮೆಂಟ್ ಸುತ್ತಮುತ್ತ ನೀರು ತುಂಬಿಕೊಂಡಿದೆ. ಕಳೆದ ಒಂದು ವಾರದಿಂದ ರಾಜಕಾಲುವೆಯಿಂದ ನೀರು ಹರಿಯುತ್ತಿದೆ. ಸ್ಟಾರ್ಮ್ ವಾಟರ್ ಡ್ರೇನ್ ಓಪನ್ ಬಿಟ್ಟಿರೋದರಿಂದ ಸಮಸ್ಯೆಯಾಗ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ರಾಜಕಾಲುವೆ ನೀರಿನ ವಾಸನೆಗೆ ನಿವಾಸಿಗಳು ಕಂಗಾಲಾಗಿದ್ದಾರೆ. ವಾಸನೆ ತಾಳಲಾರದೇ ಕೆಲ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ. ಮೋಟಾರ್ ನಲ್ಲಿ ನೀರು ಹೊರಹಾಕಲು ನಿತ್ಯ ಹರಸಾಹಸ ಮಾಡ್ತಿದ್ದಾರೆ. ವಾರದ ಹಿಂದೆ ಬಿಬಿಎಂಪಿಗೆ ಪತ್ರ ಬರೆದ್ರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕಾಲುವೆಯಿಂದ ನೀರು ತುಂಬಿ 22 ಮನೆಗಳ ನಿವಾಸಿಗಳಿಗೆ ಸಂಕಷ್ಟ ಎದುರಾಗಿದೆ. ಪಕ್ಕದಲ್ಲಿರೋ ಪುಟ್ಟೇನಹಳ್ಳಿ ಕೆರೆಗೆ ನೀರು ಹರಿಯದೇ ಇರುವುದರಿಂದ ಆ ನೀರು ಕೂಡ ಹಾಳಾಗುತ್ತಿದೆ. ರಾಜಕಾಲುವೆ, ಮಳೆ ನೀರು ಸೇರಿ ಇಡೀ ಏರಿಯಾ ಕೆರೆಯಂತಾಗಿದೆ.

ಮತ್ತೊಂದೆಡೆ ಚಿಕ್ಕಮಗಳೂರು ತಾಲೂಕಿನ ಕಸ್ಕೆ ಎಂಬಲ್ಲಿ ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದು ಮನೆಯಲ್ಲಿದ್ದ ಎಲ್ಲ ವಸ್ತುಗಳು ನಾಶವಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಇನ್ನು ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಮಳೆಗೆ ಕಾಂಪೌಂಡ್ ಕುಸಿದು 5 ಬೈಕ್, 2 ಸೈಕಲ್ ಜಖಂ ಆಗಿದೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಖಾಲಿ ಖಾಲಿ; ಕಳೆದ 7 ತಿಂಗಳಿಂದ ಡ್ಯಾಂಗೆ ಬಾರದ ಒಳಹರಿವು

ಮಂಡ್ಯದ ಸುತ್ತಮುತ್ತ ಭಾರೀ ಮಳೆ

ಮಂಡ್ಯ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಕೆ.ಆರ್.ಪೇಟೆ ತಾಲೂಕಿನಾದ್ಯಂತ ಭಾರಿ ಮಳೆಯಾಗಿದೆ. ಶೀಳನೆರೆ, ಮುರುಕನಹಳ್ಳಿ, ಮರಡಹಳ್ಳಿ, ಜಕ್ಕನಹಳ್ಳಿಯಲ್ಲಿ ರಾತ್ರಿ ಸುರಿದ ಭಾರಿ ಮಳೆಯಿಂದ ಹಲವು ಮನೆಗಳಿಗೆ ನೀರು ನುಗ್ಗಿದೆ. ಗಾಳಿ ಮಳೆಗೆ ತೆಂಗಿನ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಳೆಯಿಲ್ಲದೆ ಕಂಗಾಲಾಗಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ.

ಮನೆಯಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯ ಹಾನಿ

ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿ ಗ್ರಾಮದಲ್ಲಿ ರಾತ್ರಿ ಸುರಿದ ಮಳೆ ಅವಾಂತರ ತಂದೊಡ್ಡಿದೆ. ಭಾರಿ ಮಳೆಯಿಂದ ಮನೆಯೊಳಗೆ ಚರಂಡಿ ನೀರು ನುಗ್ಗಿದ್ದು ಮನೆಯಲ್ಲಿದ್ದ ಅಪಾರ ಪ್ರಮಾಣದ ದವಸ ಧಾನ್ಯ ಹಾನಿಯಾಗಿದೆ. ಗೌರಿಬಿದನೂರು-ಕೊರಟಗೆರೆ ಹೆದ್ದಾರಿ ಎತ್ತರ ಹೆಚ್ಚಿಸಿ ಚರಂಡಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಇದೇ ವೇಳೆ ರಸ್ತೆ ಕುಸಿದು ವಾಹನ ಪಲ್ಟಿಯಾಗಿದ್ದು ಚಾಲಕನಿಗೆ ಗಾಯಗಳಾಗಿವೆ. ಗಾಯಾಳನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೋಟೆನಾಡಿನಲ್ಲಿ ಭಾರಿ ಮಳೆ, ಕೆಲ್ಲೋಡು ಸೇತುವೆ ಭರ್ತಿ

ಕೋಟೆನಾಡಿನಲ್ಲಿ ಕಳೆದ‌ 2 ದಿನದಿಂದ ಭಾರಿ ಮಳೆ ಹಿನ್ನೆಲೆ ಕೆಲ್ಲೋಡು ಸೇತುವೆ ಭರ್ತಿಯಾಗಿ ಹರಿಯುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಲ್ಲೋಡು ಸೇತುವೆ ತುಂಬಿ ವಾಣಿ ವಿಲಾಸ ಸಾಗರ ಡ್ಯಾಂ ಕಡೆಗೆ ನೀರು ಹರಿಯುತ್ತಿದೆ. ಬಯಲುಸೀಮೆ ರೈತರ ಮೊಗದಲ್ಲಿ ಹರ್ಷ ಮೂಡಿದೆ. ಇನ್ನು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಮೇಗಳ ಕಣಿವೆ ಅರಣ್ಯ ಪ್ರದೇಶದಲ್ಲಿ ಜಲಪಾತ ಸೃಷ್ಠಿಯಾಗಿದೆ. ಕಳೆದ ಎರಡು ದಿನದಿಂದ ಉತ್ತಮ ಮಳೆ ಹಿನ್ನೆಲೆ ಮೇಗಳ ಕಣಿವೆಯ ಬಂಡೆಗಲ್ಲಿನ ಮೇಲೆ ಮಳೆ ನೀರು ಧುಮ್ಮಿಕ್ಕುತ್ತಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:57 am, Sun, 19 May 24