ತುಂಗಭದ್ರಾ ಜಲಾಶಯ ಖಾಲಿ ಖಾಲಿ; ಕಳೆದ 7 ತಿಂಗಳಿಂದ ಡ್ಯಾಂಗೆ ಬಾರದ ಒಳಹರಿವು
ಕೊಪ್ಪಳ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ಮೂರು ರಾಜ್ಯಗಳ ಅನೇಕ ಜಿಲ್ಲೆಯ ಜನರ ಪಾಲಿಗೆ ಕುಡಿಯುವ ನೀರು ಮತ್ತು ಕೃಷಿಗೆ ಜೀವಾಳವಾಗಿದೆ. ಆದರೆ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳಿಗೆ ಹೋಲಿಕೆ ಮಾಡಿದ್ರೆ ಅತಿ ಕಡಿಮೆ ನೀರು ಇರೋದು ಇದೇ ತುಂಗಭದ್ರಾ ಜಲಾಶಯದಲ್ಲಿ. ಈ ಜಲಾಶಯ ಸಂಪೂರ್ಣವಾಗಿ ಬತ್ತುವ ಹಂತಕ್ಕೆ ಬಂದಿದೆ.
ಕೊಪ್ಪಳ, ಮೇ.19: ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ತುಂಗಭದ್ರಾ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಈ ಜಲಾಶಯದ ನೀರಿನ ಮೇಲೆಯೇ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳ ಹಕ್ಕಿದ್ದು, ಈ ಡ್ಯಾಂನಲ್ಲಿರುವ ನೀರು, ರಾಜ್ಯದ ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳು ಮತ್ತು ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯದ ಅನೇಕ ಜಿಲ್ಲೆಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ಪ್ರಮುಖ ನೀರಿನ ಮೂಲವಾಗಿದೆ. ಆದರೆ 105.79 ಟಿಎಂಸಿ ನೀರು ಸಾಮಾರ್ಥ್ಯದ ಈ ಡ್ಯಾಂನಲ್ಲಿ ಸದ್ಯ ಇರೋ ನೀರಿನ ಪ್ರಮಾಣ ಕೇವಲ 3.40 ಟಿಎಂಸಿ ಮಾತ್ರ. ಅಂದ್ರೆ ಡ್ಯಾಂ ನ ಒಟ್ಟು ನೀರು ಸಂಗ್ರಹ ಸಾಮಾರ್ಥ್ಯದ ಶೇಕಡಾ 3 ರಷ್ಟು ಮಾತ್ರ ಸದ್ಯ ನೀರು ಡ್ಯಾಂ ನಲ್ಲಿದೆ.
ಒಂದು ಡ್ಯಾಂ ನಲ್ಲಿ ಕನಿಷ್ಟ ನಾಲ್ಕು ಟಿಎಂಸಿ ನೀರು ಸಂಗ್ರಹವಿರಬೇಕು ಅನ್ನೋ ನಿಯಮವಿದೆ. ಯಾಕಂದ್ರೆ ಡ್ಯಾಂ ನಲ್ಲಿರುವ ಜಲಚರಗಳು ಮತ್ತು ನದಿಯಲ್ಲಿರುವ ಜಲಚರಗಳು ಬದುಕಬೇಕಾದ್ರೆ ಇಷ್ಟೊಂದು ಪ್ರಮಾಣದ ನೀರನ್ನು ಇಟ್ಟುಕೊಳ್ಳಲೇಬೇಕು. ಆದರೆ ತುಂಗಭದ್ರಾ ಜಲಾಶಯದಲ್ಲಿ ಸದ್ಯ ಇರೋದು ಕೇವಲ 3.40 ಟಿಎಂಸಿ ನೀರು ಮಾತ್ರ. ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂ ನಲ್ಲಿ 3.72 ಟಿಎಂಸಿ ನೀರು ಇತ್ತು. ಆದರೆ ಕಳೆದ ವರ್ಷ ಇದೇ ಸಮಯದಲ್ಲಿ ಡ್ಯಾಂ ಗೆ ನೀರಿನ ಒಳಹರಿವು ಆರಂಭವಾಗಿತ್ತು. ಹೀಗಾಗಿ ಡ್ಯಾಂನಲ್ಲಿ ನೀರಿನ ಸಂಗ್ರಹ ಆರಂಭವಾಗಿತ್ತು. ಆದರೆ ಈ ವರ್ಷ ಡ್ಯಾಂಗೆ ಕಳೆದ ಏಳು ತಿಂಗಳಿಂದ ಒಳ ಹರಿವು ಬಂದಾಗಿದೆ.
ಡ್ಯಾಂ ನಲ್ಲಿರುವ ನೀರನ್ನು ಈಗಾಗಲೇ ಕೃಷಿ ಸೇರಿದಂತೆ ಕುಡಿಯುವ ನೀರಿಗೆ ಬಿಟ್ಟಿದ್ದರಿಂದ ಸದ್ಯ ಡ್ಯಾಂನಲ್ಲಿ ಕೇವಲ 3.40 ಟಿಎಂಸಿ ನೀರು ಮಾತ್ರ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ಇರೋದು ಎರಡು ಟಿಎಂಸಿ ನೀರು. ಬಳಕೆಗೆ ಬರೋದು ಕೇವಲ 1.40 ಟಿಎಂಸಿ ನೀರು ಮಾತ್ರ. ಬಳಕೆಗೆ ಇರೋ ನೀರಿನಲ್ಲಿ ಕೂಡಾ ಮೂರು ರಾಜ್ಯಗಳ ಹಕ್ಕಿದೆ. ಹೀಗಾಗಿ ಇರೋ ನೀರಿನಲ್ಲಿ ರಾಜ್ಯಕ್ಕೆ ನೀರು ಸಿಗೋದು ಕೂಡಾ ಕಷ್ಟಸಾಧ್ಯವಾಗಿದೆ.
ಇನ್ನು ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಇನ್ನು ಕೂಡಾ ಉತ್ತಮ ಮಳೆಯಾಗದೇ ಇರುವುದರಿಂದ ಡ್ಯಾಂಗೆ ಈ ತಿಂಗಳ ಅಂತ್ಯದವರೆಗೆ ನೀರು ಬರೋದು ಅನುಮಾನವಾಗಿದೆ. ಡ್ಯಾಂಗೆ ನೀರು ಹರಿದು ಬರದೇ ಇದ್ರೆ, ಮುಂದಿನ ದಿನದಲ್ಲಿ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗುವ ಆತಂಕ ಈ ಭಾಗದ ಜನರನ್ನು ಕಾಡುತ್ತಿದೆ. ಈಗಾಗಲೇ ಎರಡನೇ ಬೆಳೆಗೆ ನೀರನ್ನು ಕೊಟ್ಟಿಲ್ಲಾ. ಇರೋ ನೀರಲ್ಲಿ ಜಲಚರಗಳು ಮತ್ತು ಕುಡಿಯುವ ನೀರಿಗಾಗಿ ಇಟ್ಟುಕೊಳ್ಳಲಾಗಿದೆ. ಆದ್ರೆ ಮುಂದಿನ ದಿನದಲ್ಲಿ ಮಳೆ ಸರಿಯಾಗಿ ಬಾರದೇ ಇದ್ರೆ ಡ್ಯಾಂ ನೀರನ್ನೇ ಅವಲಿಂಬಿಸಿರೋರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಸದ್ಯ ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಖಾಲಿಯಾಗಿದೆ. ಇನ್ನು ಕೆಲ ದಿನಗಳ ಕಾಲ ಡ್ಯಾಂಗೆ ನೀರು ಬರದೇ ಇದ್ರೆ ಡ್ಯಾಂ ನಲ್ಲಿರುವ ಜಲಚರಗಳಿಗೆ ಒಂದೆಡೆ ಸಂಕಷ್ಟ ಆದ್ರೆ, ಇನ್ನೊಂದೆಡೆ ಕುಡಿಯುವ ನೀರಿಗೆ ಕೂಡಾ ತತ್ವಾರವಾಗೋ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಕೂಡಾ ಇದೀಗ ವರುಣದೇವನ ಕೃಪೆಗಾಗಿ ಕಾಯುತ್ತಿದ್ದಾರೆ.