ಮಡಿಕೇರಿ: ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕೆಳಗೆ ಮಣ್ಣು ಸಡಿಲವಾಗುತ್ತಿರುವುದರಿಂದ ಕೊಡಗು ಜಿಲ್ಲಾಧಿಕಾರಿ ಕಚೇರಿ ಕುಸಿಯಬಹುದು ಎಂಬ ಆತಂಕ ಕಾಣಿಸಿಕೊಂಡಿದೆ. ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಣ್ಣು ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಡಳಿತ ಆರಂಭಿಸಿದೆ.
ತಡೆಗೋಡೆ ಬದಿಯಲ್ಲೇ ಮಣ್ಣು ಕುಸಿಯುತ್ತಿರುವುದರಿಂದ ಕಚೇರಿ ಸಮುಚ್ಚಯವೂ ಕುಸಿಯಬಹುದು ಎಂದು ವಿಶ್ಲೇಷಿಸಲಾಗಿದೆ. ಮಡಿಕೇರಿ ಮತ್ತು ಮಂಗಳೂರು ರಸ್ತೆಯ ಸಮೀಪದಲ್ಲಿಯೇ ಜಿಲ್ಲಾಧಿಕಾರಿ ಕಚೇರಿಯೂ ಇದೆ. ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಜನಜೀವನ ತತ್ತರಿಸಿದೆ. ಜಿಲ್ಲೆಯ ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಜನರು ಪರದಾಡುವಂತಾಗಿದೆ.
ಹೊನ್ನಾವರ: ಮನೆ ಅಂಗಳಕ್ಕೆ ಬಂಡೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಚುರುಕಾಗಿದೆ. ಮಳೆಯಿಂದಾಗಿ ನೀರಿನ ಪಸೆ ಹೆಚ್ಚಾಗಿದ್ದು, ಗುಡ್ಡ ಕುಸಿಯುತ್ತಿದೆ. ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ಗುಡ್ಡದ ಮೇಲಿದ್ದ ಬಂಡೆಯೊಂದು ಉರುಳಿ ಮನೆ ಅಂಗಳಕ್ಕೆ ಬಂದು ಬಿದ್ದಿದೆ.
ಹೊನ್ನಾವರ ತಾಲ್ಲೂಕು ಕಾವೂರು ಗ್ರಾಮದ ಸುರೇಶ್ ಗೌಡ ಎಂಬುವವರ ಮನೆ ಪಕ್ಕದಲ್ಲಿ ಗುಡ್ಡ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಂಗಳೂರಿನಲ್ಲಿ ಕಾರ್ಮೋಡದ ಕತ್ತಲು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಚುರುಕಾಗಿದೆ. ಹಗಲಿನಲ್ಲೇ ಕತ್ತಲೆಯ ವಾತಾವರಣ ಕಂಡು ಬಂದಿದೆ. ಕತ್ತಲು ಆವರಿಸಿರುವ ಹಿನ್ನೆಲೆಯಲ್ಲಿ ಹಾಡಹಗಲೇ ಲೈಟ್ ಹಾಕಿಕೊಂಡು ವಾಹನಗಳು ಸಂಚರಿಸುತ್ತಿವೆ.
ಮಳೆ ವ್ಯಾಪಕವಾಗಿ ಸುರಿಯುತ್ತಿರುವುದರಿಂದ ಮಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ರಸ್ತೆಗಳು ಜಲಾವೃತಗೊಂಡಿವೆ. ಮಂಗಳೂರಿನ ಕದ್ರಿ, ನಂತೂರು ಜಂಕ್ಷನ್, ಪಂಪ್ವೆಲ್ ಬಳಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮೂಡಿಗೆರೆ: ಮನೆ ಮೇಲೆ ಬಿದ್ದ ಮರ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದ್ದು, ಮರವೊಂದು ಮನೆಯ ಮೇಲೆ ಬಿದ್ದಿದೆ. ಬೊಮ್ಮನಗದ್ದೆಯಲ್ಲಿ ಫೆಲಿಕ್ಸ್ ಅವರ ಮನೆಯ ಮೇಲೆ ಮರ ಬಿದ್ದಿದೆ.
(heavy rain in Kodagu district dc office in danger landslide in Honnavara)
ಇದನ್ನೂ ಓದಿ: KRS Dam: ಕಬಿನಿ ಜಲಾನಯನ ಪ್ರದೇಶದಲ್ಲಿ ಬಿರುಸುಗೊಂಡ ಮಳೆ, ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಎಷ್ಟಿದೆ ಈಗ?