ಚಿಕ್ಕಮಗಳೂರು , ಮೇ 12: ಕಳೆದೊಂದು ನಾಲ್ಕೈದು ದಿನಗಳಿಂದ ಬೆಂಗಳೂರಲ್ಲಿ ಅಬ್ಬರಿಸಿದ್ದ ಮಳೆರಾಯ (Rain), ಇದೀಗ ರಾಜ್ಯದ ಹಲವು ಜಿಲ್ಲೆಗಳಿಗೆ ಶಿಫ್ಟ್ ಆಗಿದೆ. ನಿನ್ನೆ ಬೆಳಗಾವಿ, ಹುಬ್ಬಳ್ಳಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೀಗ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಕೊಟ್ಟಿಗೆಹಾರ ಸುತ್ತಮುತ್ತ ಕಳೆದ 4 ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿದೆ.
ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ಹಲವೆಡೆ ಭಾರಿ ಮಳೆ ಆಗಿದೆ. ಕುಡಿಯುವ ನೀರಿಗೂ ಬಯಲುಸೀಮೆ ಭಾಗದ ಜನರು ಪರದಾಡುವಂತ್ತಾಗಿತ್ತು. ಬಿಸಿಲಿನಿಂದ ಕಂಗೆಟ್ಟಿದ್ದ ಬಯಲುಸೀಮೆ ರೈತರಲ್ಲಿ ಇದೀಗ ಮಂದಹಾಸ ಮೂಡಿದೆ. ಧಾರಾಕಾರ ಮಳೆ ಹಿನ್ನೆಲೆ ತೆಂಗು, ಅಡಿಕೆ ಬೆಳೆಗಾರರು, ರೈತರಲ್ಲಿ ಸಂತಸ ತಂದಿದೆ.
ಧಾರವಾಡದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಸಮಸ್ಯೆ ಆಗಿದೆ. ಡಿಸಿ ಕಚೇರಿಯ ಕಾಂಪೌಂಡ್ ಬಳಿ ಸೆಂಟ್ರಿಂಗ್ಗೆ ಹಾಕಿದ್ದ ಕಟ್ಟಿಗೆ ಬಿದ್ದು ಖಾಸಗಿ ಬಸ್ ಜಖಂ ಆಗಿದೆ. ಇಷ್ಟೇ ಅಲ್ಲ ಧಾರಕಾರ ಮಳೆಗೆ ಅಲ್ಲಲ್ಲಿ ಮರಗಳು ಧರೆಗುರುಳಿವೆ. ಮುಖ್ಯರಸ್ತೆಗಳೇ ನದಿಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.
ಇದನ್ನೂ ಓದಿ: ಭಾರಿ ಮಳೆ: ಹುಬ್ಬಳ್ಳಿಯಲ್ಲಿ 40 ಬೈಕ್ಗಳು ಜಲಾವೃತ, ಚಾಮರಾಜನಗರದಲ್ಲಿ ಬಾಳೆ ಬೆಳೆ ನಾಶ
ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಅವಾಂತರ ಸಂಭವಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಹಿಂಭಾಗದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ನ ಬೇಸ್ಮೆಂಟ್ನಲ್ಲಿ ನಿಲ್ಲಿಸಿದ್ದ 40ಕ್ಕೂ ಹೆಚ್ಚು ಬೈಕ್ಗಳು ಜಲಾವೃತವಾಗಿವೆ. ಹೀಗಾಗಿ ಮೆಕ್ಯಾನಿಕ್ ಕರೆತಂದು ಸಿಬ್ಬಂದಿಗಳು ಬೈಕ್ ರಿಪೇರಿ ಮಾಡಿಸುತ್ತಿದ್ದಾರೆ.
ರಾಜ್ಯದ ಹಲವೆಡೆ ಇಂದು ಭಾರಿ ಮಳೆಯ ಮುನ್ಸೂಚನೆ ಇದೆ. ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಮತ್ತು ನಾಳೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ ಇದೆ. 4 ದಿನಗಳ ಕಾಲ ಉತ್ತರ ಒಳನಾಡು, ದಕ್ಷಿಣ ಒಳನಾಡಿಲ್ಲಿ ಮಳೆ ಆಗಲಿದ್ದು, ಯೆಲ್ಲೋ ಹವಾಮಾನ ಇಲಾಖೆ ಅಲರ್ಟ್ ಘೋಷಣೆ ಮಾಡಿದೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಇವತ್ತು ಸಹ ಬಿರುಸಿನ ಗಾಳಿಯೊಂದಿಗೆ ಭಾರೀ ಮಳೆ, ಮಲೆನಾಡಿಗೆ ಎಂದಿನ ಕಳೆ!
ಇಂದಿನಿಂದ ಮೇ 15ರವರೆಗೆ ಬೆಂಗಳೂರಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಬಿರುಗಾಳಿ, ಗುಡುಗು ಸಹಿತ ಬೆಂಗಳೂರಿನಲ್ಲಿ ಭಾರೀ ಮಳೆ ಸಂಭವವಿದೆ. ಈಗಾಗಲೇ ನಗರದ ಕೆಲವು ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Sun, 12 May 24