ಭಾರಿ ಮಳೆ: ಹುಬ್ಬಳ್ಳಿಯಲ್ಲಿ 40 ಬೈಕ್ಗಳು ಜಲಾವೃತ, ಚಾಮರಾಜನಗರದಲ್ಲಿ ಬಾಳೆ ಬೆಳೆ ನಾಶ
ರಾಜ್ಯದ ಹಲವಡೆ ರವಿವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಮತ್ತು ನಾಳೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಹುಬ್ಬಳ್ಳಿ, ಮೇ 12: ರಾಜ್ಯದ ಹಲವು ಜಿಲ್ಲೆಗಳಲ್ಲಿ ಶನಿವಾರ (ಮೇ 11) ರಾತ್ರಿ ಭಾರಿ ಮಳೆಯಾಗಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ (Hubballi) ನಿನ್ನೆ ರಾತ್ರಿ ಸುರಿದ ಮಳೆಯಿಂದ (Rain) ಕಿಮ್ಸ್ (KIMS) ಆಸ್ಪತ್ರೆ ಹಿಂಭಾಗದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್ನ ಬೇಸ್ಮೆಂಟ್ನಲ್ಲಿ ನಿಲ್ಲಿಸಿದ್ದ 40 ಬೈಕ್ಗಳು ಜಲಾವೃತಗೊಂಡಿವೆ. ಇದರಿಂದ ಬೈಕ್ಗಳಿಗೆ ಹಾನಿಯಾಗಿದ್ದು, ವಾಹನ ಮಾಲಿಕರು ಮೆಕ್ಯಾನಿಕ್ಗಳನ್ನು ಕರೆತಂದು ರಿಪೇರಿ ಮಾಡಿಸಿದರು.
ಕಮರ್ಷಿಯಲ್ ಕಾಂಪ್ಲೆಕ್ಸ್ ಕಾಂಪೌಂಡ್ ಒಳಗಡೆ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಕಾಂಪೌಂಡ್ ಗೋಡೆ ಕುಸಿತವಾಗುದೆ. ಇನ್ನು ಕಿಮ್ಸ್ ಆಸ್ಪತ್ರೆ ಆವರಣದಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ನಮ್ಮ ಕಾಂಪ್ಲೆಕ್ಸ್ ಒಳಗಡೆ ಬರುತ್ತದೆ. ಇದನ್ನು ತಪ್ಪಿಸಿ ಎಂದು ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿನ ಅಂಗಡಿಕಾರರು ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಬಾಳೆ ಬೆಳೆ ನಾಶ
ಚಾಮರಾಜನಗರ: ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಚಾಮರಾಜನಗರ ತಾಲೂಕು ವ್ಯಾಪ್ತಿಯ 300 ಎಕರೆಗೂ ಅಧಿಕ ಬಾಳೆ ಬೆಳೆ ನಾಶವಾಗಿದೆ. ಉತ್ತುಹಳ್ಳಿ ಗ್ರಾಮವೊಂದರಲ್ಲೇ ಏಳು ಎಕರೆ ಬಾಳೆ ಬೆಳೆ ನಾಶವಾಗಿದೆ.
ಬಸವಳಿದಿದ್ದ ವನ್ಯಜೀವಿಗಳಿಗೆ ಖುಷಿ
ಮೈಸೂರು: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿರು ಬೇಸಿಗೆಯಿಂದ ಬಸವಳಿದಿದ್ದ ನಾಗರಹೊಳೆ ಅಭಯಾರಣ್ಯದ ವನ್ಯಜೀವಿಗಳು ಖುಷಿಯಿಂದ ಕುಣಿದಾಡಿವೆ. ಮಳೆಯಿಂದ ಸಂತಸಗೊಂಡ ವನ್ಯಜೀವಿಗಳು ಕಬಿನಿ ಹಿನ್ನೀರಿನಲ್ಲಿ ಆಟ ಆಡಿದವು. ಕಬಿನಿ ಹಿನ್ನೀರಿನಲ್ಲಿ ಗಜ ಸಮೂಹ ಆಟ ಆಡಿದರೇ, ಜಿಂಕೆಗಳ ಸ್ವಚ್ಛಂದ ವಿಹಾರ ನೋಡಲು ಸೊಗಸಾಗಿತ್ತು.
ಇದನ್ನೂ ಓದಿ: Karnataka Rains: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮೇ 18ರವರೆಗೂ ಮಳೆ
ಧಾರಾಕಾರ ಮಳೆ ರೈತರಲ್ಲಿ ಮೂಡಿದ ಮಂದಹಾಸ
ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗವಾದ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕುಗಳ ಹಲವೆಡೆ ಧಾರಾಕಾರ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆಯಾಗದೆ ಈ ಭಾಗದ ಜನರು ಕುಡಿಯುವ ನೀರಿಗೂ ಪರದಾಡುತ್ತಿದ್ದರು. ಇದೀಗ ಮಳೆಯಾಗಿದ್ದರಿಂದ ಜನರ ದಾಹ ನೀಗಿದಂತಾಗಿದೆ.
ಇಂದು ಭಾರಿ ಮಳೆ
ರಾಜ್ಯದ ಹಲವಡೆ ಇಂದು (ಮೇ 12) ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ, ದಕ್ಷಿಣ ಹಾಗೂ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇಂದು ಮತ್ತು ನಾಳೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ನಾಲ್ಕು ದಿನಗಳ ಕಾಲ ಉತ್ತರ ಒಳನಾಡು, ದಕ್ಷಿಣ ಒಳನಾಡಿಲ್ಲಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಿರುಗಾಳಿ, ಗುಡುಗು ಸಹಿತ ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಂಭವವಿದ್ದು, ಇಂದಿನಿಂದ ಮೇ 15ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಈಗಾಗಲೇ ನಗರದ ಕೆಲವು ಭಾಗದಲ್ಲಿ ಮೋಡ ಕವಿದ ವಾತಾವರಣವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ