ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಇಂದು (ಜುಲೈ 18) ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಬೆಳಗ್ಗೆ 8ರಿಂದ ಸಂಜೆ 6 ಗಂಟೆಯ ವರೆಗೆ 58.6 ಮಿ.ಮೀ. ಮಳೆಯಾಗಿದೆ. 10 ಗಂಟೆಗಳ ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆ ಸುರಿದಿದೆ. ಉತ್ತಮ ಮಳೆಯಿಂದ ರೈತಾಪಿ ಜನರು ಹರ್ಷಗೊಂಡಿದ್ದಾರೆ. ಆದರೆ, ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗೋ ಸಾಧ್ಯತೆಯೂ ಇದೆ. ಸಂಜೆಯ ನಂತರವೂ ಮೋಡ ಮುಸುಕಿದ ವಾತಾವರಣವಿದ್ದು ಮಳೆ ಮುಂದುವರೆಯುವ ಸಾದ್ಯತೆ ಇದೆ.
ವಿಜಯಪುರ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದ ಕಾರಣ ತೆಲಗಿ ಗ್ರಾಮದ ಬಳಿ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡಿದೆ. ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ ರೈಲ್ವೆ ಅಂಡರ್ ಪಾಸ್ ಜಲಾವೃತಗೊಂಡು 2 ಗಂಟೆಗಳಿಂದ ಸಂಚಾರ ಸ್ಥಗಿತಗೊಂಡಿದೆ. ರೈಲ್ವೆ ಅಂಡರ್ ಪಾಸ್ನಲ್ಲಿ ಮೂರು ಅಡಿಗೂ ಅಧಿಕ ಪ್ರಮಾಣದಲ್ಲಿ ನೀರು ನಿಂತಿದೆ. ಎರಡೂ ಬದಿಯಲ್ಲಿ ನಿಂತಿರುವ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಮಳೆಯ ನೀರು ಮುಂದೆ ಹರಿದು ಹೋಗವಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲದ ಕಾರಣ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗಿದೆ. ರೈಲ್ವೆ ಆಧಿಕಾರಿಗಳ ವಿರುದ್ಧ ವಾಹನ ಸವಾರರು ಅಸಮಾಧಾನ ಹೊರ ಹಾಕಿದ್ದಾರೆ.
ಕರ್ನಾಟಕದ ವಿವಿಧೆಡೆ ಮಳೆ ಪುನರ್ವಸು ಮಳೆ ಆರ್ಭಟ: ಉಕ್ಕಿ ಹರಿಯುತ್ತಿವೆ ನದಿಗಳು
ರಾಜ್ಯದ ಮಲೆನಾಡು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದಲ್ಲಿ ಮಳೆ ಚುರುಕಾಗಿದೆ. ಪುನರ್ವಸು ಮಳೆ ಬಿರುಸಾಗಿರುವುದು ರೈತರಲ್ಲಿ ಸಂತಸ ತಂದಿದೆ. ಕುಮಾರಧಾರಾ, ಕಪಿಲ, ಕಾವೇರಿ ಸೇರಿದಂತೆ ಹಲವು ಪ್ರಮುಖ ನದಿಗಳಲ್ಲಿ ಹರಿವು ಸುಧಾರಿಸಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಾಲ್ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಬದಿ ಸುರಿದಿದ್ದ ಮಣ್ಣು ಕೊಚ್ಚಿ ಹೋಗಿದ್ದು, ರೈತರ ಜಮೀನಿಗೆ ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಮಣ್ಣು ತೆಗೆಯಲಾಗಿತ್ತು. ತಡೆಗೋಡೆ ನಿರ್ಮಿಸದ ಕಾರಣ ನೂರಾರು ಲೋಡ್ ಮಣ್ಣು ಜಮೀನುಗಳಿಗೆ ನುಗ್ಗಿ ಬಂದಿದೆ. ಇದರಿಂದಾಗಿ 40 ಎಕರೆಗೂ ಹೆಚ್ಚು ಪ್ರದೇಶದಲ್ಲಿದ್ದ ಭತ್ತ, ಅಡಿಕೆ, ಮೆಣಸು ಬೆಳೆ ಹಾಳಾಗಿದೆ. ಗುತ್ತಿಗೆದಾರರ ವಿರುದ್ಧ ದೋಣಿಗಾಲ್ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಬೃಹತ್ ಮರಗಳು ರಸ್ತೆಗೆ ಉರುಳಿವೆ. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದ ಸಮೀಪ ರಸ್ತೆ ಪಕ್ಕದಲ್ಲೇ ಭೂ ಕುಸಿತ ಸಂಭವಿಸಿದ್ದು ಗುಡ್ಡದ ಮಣ್ಣು ರಸ್ತೆಗೆ ಬಂದಿದೆ. ಇದರಿಂದಾಗಿ ಮಲ್ಲಂದೂರು-ಶಿರವಾಸೆ ನಡುವಿನ ರಸ್ತೆಯ ಸಂಪರ್ಕ ಕಡಿಗೊಂಡಿತು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಇದನ್ನೂ ಓದಿ: Karnataka Weather Update: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇನ್ನೂ ಮೂರು ದಿನ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಬತ್ತಿ ಹೋಗಿದ್ದ ನದಿ-ನಾಲೆಗಳಲ್ಲಿ ನೀರಿನ ವೈಭವ; ಧಾರಾಕಾರ ಮಳೆಯಿಂದ ಒಂದೆಡೆ ಸಂತಸ ಮತ್ತೊಂದೆಡೆ ಸಂಕಷ್ಟ!
Published On - 11:06 pm, Sun, 18 July 21