ದೆಹಲಿ: ಭಾರತಕ್ಕೆ ಮುಂಗಾರು ಕಾಲಿಟ್ಟು ಸುಮಾರು 20 ದಿನಗಳೇ ಕಳೆದುಹೋದವು. ಈ ಬಾರಿಯಂತೂ ಮೇ ತಿಂಗಳಿನಿಂದಲೇ ಚಂಡಮಾರುತದ ಪ್ರಭಾವದಿಂದ ಮಳೆಯಾಗುತ್ತಿದ್ದ ಕಾರಣ ಮುಂಗಾರಿಗೂ ಒಂದು ತಿಂಗಳ ಮುಂಚಿನಿಂದಲೇ ಮಳೆಗಾಲದ ವಾತಾವರಣ ಇದೆ. ಜತೆಗೆ, ನೈರುತ್ಯ ಮಾರುತಗಳೂ ಆರಂಭದಲ್ಲೇ ಭಾರೀ ಮಳೆ ಸುರಿಸಿರುವ ಪರಿಣಾಮ ನಿರೀಕ್ಷೆಗೂ ಮೀರಿ ಕೆಲವೆಡೆ ಮಳೆಯಾಗಿದೆ. ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಹಲವೆಡೆ ಜನರು ಮಳೆಗಾಲದ ಆರಂಭದಲ್ಲೇ ಇದೆಂಥಾ ಮಳೆಯ ಆರ್ಭಟ ಎಂದು ಕಂಗಾಲಾಗಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೊಂಚ ಬಿಡುವು ನೀಡಿರುವ ಮಳೆ ಇನ್ಯಾವಾಗ ಆರ್ಭಟ ಆರಂಭಿಸುವುದುಂಟೋ ಎಂದು ಜನ ಲೆಕ್ಕಾಚಾರ ಹಾಕುತ್ತಿರುವಾಗಲೇ ದೇಶದ ಕೆಲ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಳೆಯ ಬಗ್ಗೆ ಹೊಸ ಪ್ರಕಟಣೆ ನೀಡಿದ್ದು, ಒಟ್ಟು 13 ರಾಜ್ಯಗಳಲ್ಲಿ ಜೂನ್ 28ನೇ ತಾರೀಖಿನ ತನಕ ಭಾರೀ ಮಳೆ ಸುರಿಯಲಿದೆ ಎಂಬ ಮುನ್ಸೂಚನೆ ನೀಡಿದೆ. ಆ ವರದಿಯ ಪ್ರಕಾರ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಹಾಗೂ ಗುಜರಾತ್ ರಾಜ್ಯಗಳಲ್ಲಿ ಜೂನ್ 28ರ ತನಕ ವಿಪರೀತ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.
ಈ ರಾಜ್ಯಗಳಷ್ಟೇ ಅಲ್ಲದೇ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನೂ ಕೆಲವೆಡೆ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ. ಕೆಲ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯೂ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಾವ ಯಾವ ದಿನದಂದು ಎಲ್ಲೆಲ್ಲಿ ಮಳೆ?
ಜೂನ್ 25: ಒಡಿಶಾ ಭಾಗದಲ್ಲಿ ಅಧಿಕ ಅಥವಾ ಅತ್ಯಧಿಕ ಮಳೆ ಸುರಿಯಲಿದ್ದು, ಮಧ್ಯಪ್ರದೇಶ, ಚತ್ತೀಸ್ಗಡ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ, ಮೇಘಾಲಯ, ಗೋವಾ ಹಾಗೂ ಹಿಮಾಲಯ ಪ್ರಾಂತ್ಯದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಜೂನ್ 26: ಅಸ್ಸಾಂ, ಮೇಘಾಲಯ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಬಿಹಾರ, ಜಾರ್ಖಂಡ್, ಒಡಿಶಾ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಆಂಧ್ರಪ್ರದೇಶದಲ್ಲೂ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ.
ಜೂನ್ 27: ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಒಡಿಶಾ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ.
ಜೂನ್ 28: ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಗೋವಾ, ಪುದುಚೇರಿ, ತ್ರಿಪುರ, ಮೇಘಾಲಯ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಚತ್ತೀಸ್ಗಡ, ಹಿಮಾಲಯ ಪ್ರಾಂತ್ಯದಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:
Karnataka Dam Water Level: ತಗ್ಗಿದ ಮಳೆ, ಕಬಿನಿ ಜಲಾಶಯಕ್ಕೆ ಕಡಿಮೆ ಆಯ್ತು ಒಳಹರಿವಿನ ಪ್ರಮಾಣ
Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ