Karnataka Dam Water Level: ತಗ್ಗಿದ ಮಳೆ, ಕಬಿನಿ ಜಲಾಶಯಕ್ಕೆ ಕಡಿಮೆ ಆಯ್ತು ಒಳಹರಿವಿನ ಪ್ರಮಾಣ
KRS and Kabini Water level: ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 75.82 ಅಡಿ ಇದೆ. ಜಲಾಶಯದ ಗರಿಷ್ಠ ಶೇಖರಣೆ ಪ್ರಮಾಣ 19.52 ಟಿಎಂಸಿಯಾಗಿದ್ದು, ಇಂದು 14.71 ಟಿಎಂಸಿ ನೀರು ಜಲಾಶಯದಲ್ಲಿದೆ.
ಮೈಸೂರು: ಜೂನ್ ತಿಂಗಳ ಆರಂಭದಿಂದಲೇ ಎಡೆಬಿಡದೆ ಸುರಿದ ಮುಂಗಾರು ಕೊಂಚ ವಿಶ್ರಾಂತಿ ಪಡೆದಿರುವಂತಿದೆ. ರಾಜ್ಯದ ಬಹುಪಾಲು ಭಾಗದಲ್ಲಿ ಇಷ್ಟು ದಿನ ಉತ್ತಮ ಮಳೆಯಾದ ಕಾರಣ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡಿದೆ. ಆದರೆ, ಇದೀಗ ಕೇರಳದ ವಯನಾಡಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಕಬಿನಿ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದಲ್ಲಿ ಒಳಹರಿವು ಕಡಿಮೆಯಾಗಿದೆ.
ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ಗರಿಷ್ಠ ಮಟ್ಟ 84 ಅಡಿಯಾಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 75.82 ಅಡಿ ಇದೆ. ಜಲಾಶಯದ ಗರಿಷ್ಠ ಶೇಖರಣೆ ಪ್ರಮಾಣ 19.52 ಟಿಎಂಸಿಯಾಗಿದ್ದು, ಇಂದು 14.71 ಟಿಎಂಸಿ ನೀರು ಜಲಾಶಯದಲ್ಲಿದೆ. ಜಲಾಶಯದ ಒಳಹರಿವು 2744 ಸಾವಿರ ಕ್ಯೂಸೆಕ್ಸ್ಗೆ ತಗ್ಗಿದ್ದು, ಹೊರಹರಿವು 3,250 ಸಾವಿರ ಕ್ಯೂಸೆಕ್ಸ್ ಪ್ರಮಾಣದಲ್ಲಿದೆ. ಹೊರಹರಿವಿನಲ್ಲಿ ನದಿಪಾತ್ರಕ್ಕೆ 3,250 ಸಾವಿರ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ನಾಲೆಗಳಿಗೆ ಸದ್ಯಕ್ಕೆ ನೀರು ಬಿಟ್ಟಿಲ್ಲ. ಪ್ರಸ್ತುತ ಜಲಾನಯನ ಪ್ರದೇಶದಲ್ಲಿ 03 ಎಂಎಂ ಪ್ರಮಾಣದಲ್ಲಿ ಮಳೆ ದಾಖಲಾಗಿದೆ.
ಮೈಸೂರಿನ ಸಮೀಪವೇ ಇರುವ ಮಂಡ್ಯ ಜಿಲ್ಲೆಗೆ ಸೇರಿದ ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 95.40 ಅಡಿಯಷ್ಟಿದೆ. ಡ್ಯಾಂನ ಗರಿಷ್ಠ ಮಟ್ಟ 124.80 ಅಡಿಯಾಗಿದ್ದು, ಪ್ರಸ್ತುತ ಒಳಹರಿವು 4,965 ಕ್ಯೂಸೆಕ್ಸ್, ಹೊರ ಹರಿವು 1,568 ಕ್ಯೂಸೆಕ್ಸ್ ಇದೆ. ಕೆಆರ್ಎಸ್ ಡ್ಯಾಂನಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯದ ಗರಿಷ್ಠ ಮಟ್ಟ 49.452 ಟಿಎಂಸಿಯಾಗಿದ್ದು, ಪ್ರಸ್ತುತ ಸಂಗ್ರಹವಾಗಿರುವ ನೀರಿನ ಪ್ರಮಾಣ 19.417 ಟಿಎಂಸಿಯಾಗಿದೆ.
ಸಮನ್ವಯ ಸಾಧಿಸಿ, ನೆರೆ ತಪ್ಪಿಸಲು ಎರಡು ರಾಜ್ಯಗಳೂ ಒಪ್ಪಿಗೆ ಇನ್ನು ಮಹಾರಾಷ್ಟ್ರ ರಾಜ್ಯದ ಡ್ಯಾಂನಿಂದ ಕರ್ನಾಟಕಕ್ಕೆ ನೀರು ಬಿಡುವ ಕುರಿತು ಕಳೆದ ವಾರವಷ್ಟೇ ಸಭೆ ನಡೆಸಲಾಗಿದೆ. ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣಾ ಸಮಿತಿಯ ಸಭೆಯಲ್ಲಿ ನೀರು ಬಿಡುಗಡೆಯ ಬಗ್ಗೆ ಕೂಡಲೇ ಮಾಹಿತಿ ನೀಡಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಗೆ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಹಾಜರಾಗಿದ್ದರು. ಇದರಲ್ಲಿ ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶದಲ್ಲಿ ಪರಿಣಾಮಕಾರಿ ಪ್ರವಾಹ ನಿರ್ವಹಣೆಯ ಕುರಿತ ವಿವಿಧ ವಿಷಯಗಳ ಕುರಿತು ಚರ್ಚಿಸಲಾಗಿತ್ತು. ಮಹಾರಾಷ್ಟ್ರದ ಡ್ಯಾಂನಿಂದ ನೀರು ಬಿಟ್ಟ ನಂತರ ಅದು ಅಲ್ಲಿಂದ ರಾಜ್ಯಕ್ಕೆ ಬರಲು 42 ಗಂಟೆಗಳ ಸಮಯ ಬೇಕು. ಈ 42 ಗಂಟೆ ಅವಧಿಯಲ್ಲಿ ನಾವು ಇಲ್ಲಿನ ಡ್ಯಾಂಗಳ ನಿರ್ವಹಣೆ ಮಾಡಿಕೊಳ್ಳಬಹುದಾಗಿದೆ. ಅವರು ನೀರು ಬಿಡುವಾಗ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದರು.
ಜತೆಗೆ, ಭೀಮಾ ನದಿಗೆ ಒಂದೇ ಬಾರಿಗೆ ನೀರು ಬಿಡದಂತೆ ನಾವು ಮನವಿ ಮಾಡಿದ್ದೆವು. ನಮ್ಮ ಮನವಿಗೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಡ್ಯಾಂನಿಂದ ನೀರು ಬಿಡುಗಡೆ ಮಾಡುವ ವೇಳೆಗೆ ಪರಿಸ್ಥಿತಿ ನಿರ್ವಹಿಸಿಸುವುದು ಅನುಕೂಲವಾಗಲಿದೆ ಎಂದು ಹೇಳಿದ್ದರು. ಅಲ್ಲದೇ, ಕೃಷ್ಣಾ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇರುವ ಪ್ರಕರಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಜಂಟಿಯಾಗಿ ಕಾನೂನು ಹೋರಾಟ ನಡೆಸಲು ಸದರಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದೂ ತಿಳಿಸಿದ್ದರು.
ಇದನ್ನೂ ಓದಿ: Karnataka Monsoon 2021: ಮೈಸೂರಿನ ಕಬಿನಿ ಜಲಾಶಯದಲ್ಲಿ ಗರಿಷ್ಠ ನೀರು ಶೇಖರಣೆ; ಮಳೆಯಿಂದ ಸಂತಸ