ಡಿ.ರೂಪಾ, ರೋಹಿಣಿ ಸಿಂಧೂರಿ
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಅವರು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರಿಗೆ ದೂರು ನೀಡಿದ ಬೆನ್ನಲ್ಲೇ ಐಪಿಸಿ ಅಧಿಕಾರಿ ಡಿ ರೂಪಾ ಮೌದ್ಗಿಲ್ (D Roopa moudgil) ಕೂಡ ಪ್ರತಿದೂರು ದಾಖಲಿಸಿದ್ದಾರೆ. ವಿಧಾನಸೌಧದಲ್ಲಿರುವ ಸಿಎಸ್ ಕಚೇರಿಯಲ್ಲಿ ವಂದಿತಾ ಶರ್ಮಾರನ್ನು ಭೇಟಿಯಾದ ಡಿ.ರೂಪಾ, ಸುಮಾರು 35 ನಿಮಿಷ ಸಿಎಸ್ ಜೊತೆ ಚರ್ಚಿಸಿ ರೋಹಿಣಿ ಸಿಂಧೂರಿ ವಿರುದ್ಧ ದಾಖಲೆ ಸಮೇತ ದೂರು ನೀಡಿದ್ದಾರೆ. ವಿರುದ್ಧ ದೂರಿನಲ್ಲಿ ಕೆಲ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ. ಇನ್ನು ರೂಪಾ ನೀಡಿದ ಮೂರು ಪುಟಗಳ ದೂರಿನಲ್ಲೇನಿದೆ? ಎನ್ನುವುದು ಈ ಕೆಳಗಿನಂತಿದೆ.
ಇದನ್ನೂ ಓದಿ: ದೂರು ಪ್ರತಿದೂರು ದಾಖಲಿಸಿದ ಐಎಎಸ್-ಐಪಿಎಸ್: ಇಬ್ಬರಿಗೂ ಖಡಕ್ ಸೂಚನೆ ಕೊಟ್ಟ ಮುಖ್ಯಕಾರ್ಯದರ್ಶಿ
ರೂಪಾ ದೂರಿನಲ್ಲೇನಿದೆ?
ಕೋವಿಡ್ ಸಮಯದಲ್ಲಿ ನಿರ್ಮಾಣವಾದ ಸ್ವಿಮ್ಮಿಂಗ್ ಪೂಲ್, ಜಾಲಹಳ್ಳಿಯಲ್ಲಿ ನಿರ್ಮಾಣವಾದ ಕಟ್ಟಡ, ಲೋಕಾಯುಕ್ತ ಕಚೇರಿಗೆ ರವಿಚಂದ್ರೇಗೌಡ ನೀಡಿರುವ ದೂರು, ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ 10 ಕೋಟಿ ಟೆಂಡರ್, ಮೈಸೂರಿನ ಅಡ್ಮಿನಿಸ್ಟ್ರೇಶನ್ ಟ್ರೈನಿಂಗ್ ಸಂಸ್ಥೆ ನೀಡಿರುವ ದೂರು, ಅಡ್ಮಿನಿಸ್ಟ್ರೇಶನ್ನಿಂದ ಕೆಲ ವಸ್ತುಗಳನ್ನು ಮೈಸೂರಿನ ಮನೆಗೆ ತೆಗೆದುಕೊಂಡು ಹೋದ ಆರೋಪಗಳನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಇನ್ನು ರೋಹಿಣಿ ವಿರುದ್ಧ ಐಎಎಸ್ ಹರ್ಷಾ ಗುಪ್ತಾ ನೀಡಿರುವ ಎರಡು ರಿಪೋರ್ಟ್, ಮಾಜಿ ಸಚಿವ ಸಾರಾ ಮಹೇಶ್ ಸದನದಲ್ಲಿ ರೋಹಿಣಿ ವಿರುದ್ಧ ಮಾತನಾಡಿದ್ದರ ಬಗ್ಗೆ ಸತ್ಯಾಸತ್ಯತೆ ಸೇರಿದಂತೆ ಏಳು ಪ್ರಮುಖ ಆರೋಪಗಳನ್ನು ಮಾಡಿ ಹೊಸದಾಗಿ ವಿಚಾರಣೆ ನಡೆಸುವಂತೆ ರೂಪಾ ಮೌದ್ಗಿಲ್ ಆಗ್ರಹಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ತಮ್ಮ ಖಾಸಗಿ ಫೋಟೋಗಳಿಗೆ ಸ್ಪಷ್ಟನೆ ಕೊಟ್ಟ ರೋಹಿಣಿ ಸಿಂಧೂರಿ, IPS ರೂಪಾ ವಿರುದ್ಧ ಕಾನೂನು ಹೋರಾಟಕ್ಕೆ ತೀರ್ಮಾನ
- ಐಎಎಸ್ ಡಾ. ರವಿಶಂಕರ್ ಅವರು ಈಕೆಯ ಮೇಲೆ ಪ್ರಿಲಿಮಿನರಿ ತನಿಖೆಯಲ್ಲಿ ತಪ್ಪುಮಾಡಿರುವುದು ಸಾಬೀತಾಗಿದೆ. ಮೈಸೂರಿನ ಡಿಸಿ ಮನೆ, ಹೆರಿಟೇಜ್ building ಅಂತಾ ಇದ್ದರೂ ಅಲ್ಲಿ ಟೈಲ್ಸ್ ಹಾಕಿದ್ದು, ಸ್ವಿಮ್ಮಿಂಗ್ ಪೂಲ್ ಮಾಡಿದ್ದು. ಅಲ್ಲದೇ ಕೋವಿಡ್ ನಿಂದ ಜನ ಸಾಯುತ್ತಿದ್ದರು ಮಾನವೀಯತೆ ಇಲ್ಲದೇ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು ಸಾಬೀತಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
- ಜಾಲಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮನೆಗೆ ರೋಹಿಣಿ ಸಿಂಧೂರಿ ತೆರಿಗೆ ಇಲ್ಲದೇ 2 ಕೋಟಿ ರೂ. ಬೆಲೆ ಬಾಳುವ ಇಟಲಿ ಫರ್ನೀಚರ್ಸ್ ತರಿಸಿದ್ದಾರೆ. ಮನೆ ಬಾಗಿಲಿಗೆ ಹಾಕುವ, ಕ್ಲಾಂಪ್ಗಳಿಗೆ 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಹೀಗಾಗಿ ರೋಹಿಣಿ ಆದಾಯದ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.
- ರೋಹಿಣಿ ಸಿಂಧೂರಿ ಅವರ ವಿರುದ್ಧ ರವಿಚಂದ್ರೇಗವಡ ನೀಡಿರುವ ದೂರಿನ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
- ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವತಿಯಿಂದ ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ 10 ಕೋಟಿ ರೂಪಾಯಿ ಟೆಂಡರ್ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
- ಮೈಸೂರಿನ ಮನೆ ಬಿಟ್ಟು ಹೋಗುವಾಗ ಕೆಲ ಬೆಲೆಬಾಳುವ ವಸ್ತುಗಳನ್ನು ತಮ್ಮ ಸ್ವಂತ ನಿವಾಸಕ್ಕೆ ತೆಗೆದುಕೊಂಡು ಹೋಗಿರುವ ಬಗ್ಗೆ ಆರೋಪ ಮಾಡಿದ್ದಾರೆ.
- ಹರ್ಷಾ ಗುಪ್ತಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಎರಡು ವರದಿಗಳನ್ನು ಸಲ್ಲಿಸಿದ್ದು, ಆ ಬಗ್ಗೆ ಕ್ರಮಗೊಳ್ಳುವಂತೆ ಕೋರಿದ್ದಾರೆ.
- ಅಲ್ಲದೇ ವಿಧಾನಸಭೆ ಸದಸ್ಯರಾದ ಸಾರಾ ಮಹೇಶ್ ಅವರ ಜೊತೆ ಸಂಧಾನಕ್ಕೆ ಹೋಗಿದ್ದಾರೆ. ಈ ಮೂಲಕ ರೋಹಿಣಿ ಸಿಂಧೂರಿ ಅವರು ಸರ್ವಿಸ್ ಕಂಡಕ್ಟ್ ರೂಲ್ಸ್ ಉಲ್ಲಂಘಿಸಿದ್ದಾರೆ. ವೃತ್ತಿಯಲ್ಲಿ ಈ ರೀತಿ ಸಂಧಾನ ಮಾಡಿಕೊಳ್ಳುವ ಯಾವುದೇ ನಿಯಮವಿಲ್ಲ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾದೆ.
ಒಟ್ಟನಲ್ಲಿ ಇಬ್ಬರು ಅಧಿಕಾರಿಗಳು ದೂರು ಪ್ರತಿದೂರು ನೀಡಿದ್ದು, ಈ ಬಗ್ಗೆ ಮುಖ್ಯಕಾರ್ಯದರ್ಶಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.