ಹಲ್ಲೆ ನಡೆಸುವಾಗ ಮೂಕಪ್ರೇಕ್ಷಕರಾಗಿದ್ದ ಜನರಿಂದ ದಂಡ ಸಂಗ್ರಹಿಸಿ ಸಂತ್ರಸ್ತೆಗೆ ನೀಡಿ: ಹೈಕೋರ್ಟ್ ಸಲಹೆ

| Updated By: Rakesh Nayak Manchi

Updated on: Dec 18, 2023 | 12:23 PM

ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿದ್ದಾಗ ಅಲ್ಲೇ ಇದ್ದ ಜನರು ನೆರವಿಗೆ ಧಾವಿಸದೆ ಮೂಕಪ್ರೇಕ್ಷಕರಂತೆ ನಿಂತುಕೊಂಡಿದ್ದರು. ಘಟನೆ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಹೈಕೋರ್ಟ್, ಘಟನೆ ವೇಳೆ ಮೂಕಪ್ರೇಕ್ಷಕರಾಗಿದ್ದ ಪ್ರತಿಯೊಬ್ಬರಿಂದಲೂ ದಂಡ ಸಂಗ್ರಹಿಸಿ ಸಂತ್ರಸ್ತ ಮಹಿಳೆಗೆ ನೀಡುವಂತೆ ಸಲಹೆ ನೀಡಿದೆ.

ಹಲ್ಲೆ ನಡೆಸುವಾಗ ಮೂಕಪ್ರೇಕ್ಷಕರಾಗಿದ್ದ ಜನರಿಂದ ದಂಡ ಸಂಗ್ರಹಿಸಿ ಸಂತ್ರಸ್ತೆಗೆ ನೀಡಿ: ಹೈಕೋರ್ಟ್ ಸಲಹೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು, ಡಿ.18: ಬೆಳಗಾವಿ (Belagavi) ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುತ್ತಿದ್ದಾಗ ನೆರವಿಗೆ ಧಾವಿಸದೆ ಮೂಕಪ್ರೇಕ್ಷಕರಂತೆ ನಿಂತುಕೊಂಡಿದ್ದ ಜನರಿಂದ ದಂಡ ಸಂಗ್ರಹಿಸಿ ಮೊತ್ತವನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ಕರ್ನಾಟಕ ಹೈಕೋರ್ಟ್ (Karnataka High Court) ಸಲಹೆ ನೀಡಿದೆ.

ಘಟನೆ ಸಂಬಂಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಪ್ರಸನ್ನ ಬಿ ವರಾಳೆ ಮತ್ತು ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಹಲ್ಲೆಯಾಗುತ್ತಿದ್ದರೂ ಸುಮ್ಮನೇ ನಿಂತ ಜನರ ವರ್ತನೆಗೆ ಖಂಡನೆ ವ್ಯಕ್ತಪಡಿಸಿದೆ.

ಮೂಕಪ್ರೇಕ್ಷಕರಾದ ಗ್ರಾಮದ ಜನರಿಂದ ದಂಡ‌ಸಂಗ್ರಹಿಸಿ ಸಂತ್ರಸ್ತೆಗೆ ನೀಡಲು ಸಲಹೆ ನೀಡಿದ ಪೀಠ, ಇಂತಹ ವರ್ತನೆಗೆ ಬ್ರಿಟಿಷರು ಪುಂಡಕಂದಾಯ ಎಂಬ ತೆರಿಗೆ ವಿಧಿಸುತ್ತಿದ್ದರು. ವಿಲಿಯಮ್ ಬೆಂಟಿಂಕ್ ಕಾಲದಲ್ಲೇ ಇಂತಹ ನೀತಿ ಇತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಮಹಾಭಾರತದಲ್ಲೂ ಇಂತಹ ಘಟನೆ ನಡೆದಿರಲಿಲ್ಲ; ಬೆಳಗಾವಿಯಲ್ಲಿ ಮಹಿಳೆ ಮೇಲಿನ ಹಲ್ಲೆ ಬಗ್ಗೆ ಹೈಕೋರ್ಟ್ ಕಳವಳ

ಈ ಹಿಂದೆ ನಡೆದ ವಿಚಾರಣೆ ವೇಳೆ, ಮಹಾಭಾರತದಲ್ಲಿ ವಸ್ತ್ರಾಪಹರಣದ ವೇಳೆ ದ್ರೌಪದಿಯ ರಕ್ಷಣೆಗೆ ಪರಮಾತ್ಮ ಶ್ರೀಕೃಷ್ಣ ಧಾವಿಸಿದಂತೆ, ಈಗಿನ ಕಾಲದಲ್ಲಿ ಯಾರು ಕೂಡ ಬರುತ್ತಿಲ್ಲ ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಇಂದಿನ ಜಗತ್ತಿನಲ್ಲಿ ದುರ್ಯೋಧನರು ಅಥವಾ ದುಶ್ಯಾಸನರು ಬಂದರೆ ಯಾವ ಕೃಷ್ಣನೂ ಸಹಾಯಕ್ಕೆ ಬರುವುದಿಲ್ಲ ಎಂದು ಹೇಳಿದ್ದ ವಿಭಾಗೀಯ ಪೀಠ, ತನಿಖೆಯ ವಿವರಗಳಿಗೆ ಅತೃಪ್ತಿ ವ್ಯಕ್ತಪಡಿಸಿ ಹೆಚ್ಚುವರಿ ಸ್ಥಿತಿ ವರದಿಯನ್ನು ಕೋರಿತ್ತು.

ಏನಿದು ಪ್ರಕರಣ?

ಪ್ರೀತಿಸುತ್ತಿದ್ದ ಜೋಡಿಯೊಂದು ಓಡಿ ಹೋಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಯುವತಿಯ ಕುಟುಂಬುಸ್ಥರು ವಂಟಮೂರಿ ಗ್ರಾಮದಲ್ಲಿ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಏಳು ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿದ್ದಾರೆ. ತಡವಾಗಿ ಸ್ಥಳಕ್ಕೆ ಆಗಮಿಸಿದ್ದ ಪಿಎಸ್​ಐ ಅಮಾನತುಗೊಂಡಿದ್ದಾರೆ.

ಈ ನಡುವೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಒತ್ತಾಯಗಳು ಕೇಳಿಬಂದುವು. ನಿಖೆಯನ್ನು ಎಲ್ಲಿಗೆ ಬೇಕಾದರೂ ವಹಿಸಲು ತಯಾರಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅದರಂತೆ ರಾಜ್ಯ ಸರ್ಕಾರವು ನಿನ್ನೆ (ಡಿ.17) ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಿಸಿ ಆದೇಶಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ