ಸಿಎಂ ಸಿದ್ದರಾಮಯ್ಯ ಭೇಟಿಗೆ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿ
ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎರಡನೇ ಭಾರಿ ಭೇಟಿಯಾಗಲಿದ್ದಾರೆ. ರಾಜ್ಯದಲ್ಲಿ ತಲೆದೋರಿರುವ ಬರಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ನಾಳೆ ಬೆಳಗ್ಗೆ ಸಂಸತ್ನಲ್ಲಿ ಮೋದಿ ಅವರನ್ನು ಭೇಟಿಯಾಗುವ ಅವಕಾಶ ನೀಡಲಾಗಿದೆ.
ನವದೆಹಲಿ, ಡಿ.18: ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಬೇಟಿಯಾಗಲು ಅವಕಾಶ ನೀಡಲಾಗಿದೆ. ಬೆಳಗ್ಗೆ 11 ಗಂಟೆಗೆ ಸಂಸತ್ನಲ್ಲಿ ಮೋದಿ ಭೇಟಿಗೆ ಸಮಯ ನಿಗದಿ ಮಾಡಲಾಗಿದೆ. ಎರಡನೇ ಬಾರಿ ಮುಖ್ಯಮಂತ್ರಿಯಾದ ನಂತರ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗುತ್ತಿರುವ ಎರಡನೇ ಭೇಟಿ ಇದಾಗಿದೆ.
ನಾಳೆ ಸಂಸತ್ ಭವನದಲ್ಲಿ ಮೋದಿ ಅವರನ್ನು ಭೇಟಿಯಲಿರುವ ಸಿದ್ದರಾಮಯ್ಯ ಅವರು ರಾಜ್ಯದಲ್ಲಿನ ಬರಗಾಲದ ಕುರಿತು ಚರ್ಚಿಸುವ ಸಾಧ್ಯತೆ ಇದೆ. ಇದೇ ವೇಳೆ ಬರ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಭೇಟಿಗೆ ಸಮಯ ನಿಗದಿ ಆಗಿದೆ. ಬರಗಾಲ ಬಗ್ಗೆ ಚರ್ಚೆ ಮಾಡುವುದಕ್ಕಾಗಿಯೇ ಸಮಯ ಕೇಳಿದ್ದೆ. ಅದರಂತೆ ಬರಗಾಲದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.
ದೆಹಲಿ ಭೇಟಿ ವೇಳೆ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲೂ ಭಾಗಿಯಾಗುತ್ತೇನೆ. ಹೈಕಮಾಂಡ್ ನಾಯಕರ ಜೊತೆ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ವರಿಷ್ಠರ ಜೊತೆ ನಿಗಮ, ಮಂಡಳಿ ಬಗ್ಗೆಯೂ ಚರ್ಚೆ ಮಾಡುತ್ತೇವೆ. ಈಗಾಗಲೇ ನಿಗಮ, ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಕಳಿಸಲಾಗಿದೆ ಎಂದರು. ಕೊವಿಡ್ ವಿಚಾರವಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಭೆ ನಡೆಸುವಂತೆ ಆರೋಗ್ಯ ಸಚಿವರಿಗೆ ಸೂಚನೆ ಎಂದರು.
ಪ್ರಧಾನಿ ಮೋದಿ ಅವರನ್ನು ಆಗಸ್ಟ್ 3 ರಂದು ಸಿದ್ದರಾಮಯ್ಯ ಅವರು ಭೇಟಿಯಾಗಿ ವಿಶೇಷ ಕೊಡುಗೆ ನೀಡಿದ್ದರು. ಆದರೆ, ಸಚಿವ ಎಂಬಿ ಪಾಟೀಲ್ ಅವರು ವರ್ಷಾನುಗಟ್ಟಲೆಯಿಂದ ಅವಕಾಶ ಕೊಟ್ಟಿರಲಿಲ್ಲ ಎಂದು ಆರೋಪಿಸಿದ್ದಾರೆ. ರಾಜ್ಯದ ಸಮಸ್ಯೆಗಳು, ರಾಜ್ಯದ ಅನುದಾನದ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದಾಗ ಸಮಯ ಕೇಳಿದಾಗ ಕೊಟ್ಟಿರಲಿಲ್ಲ. ಈಗ ಕೊನೆ ಕ್ಷಣದಲ್ಲಿ ಅವಕಾಶ ಕೊಟ್ಟಿದ್ದಾರೆ. ಇನ್ನೂ ಸ್ವಲ್ಪ ದಿನ ಬಿಟ್ಟು ಅವಕಾಶ ಕೊಟ್ಟಿದ್ದರೆ ಕೋಡ್ ಆಫ್ ಕಂಡಕ್ಟ್ ಬಂದು ಬಿಡುತ್ತಿತ್ತು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ: ವಾರಣಾಸಿ: ಸ್ವರ್ವೇದ್ ಮಹಾಮಂದಿರವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ವಿರೋಧ ಪಕ್ಷದ ಮುಖ್ಯಮಂತ್ರಿಗಳಿರಬಹುದು ಅಥವಾ ಸ್ವಪಕ್ಷದ ಮುಖ್ಯಮಂತ್ರಿಗಳಿರಬಹುದು, ಈ ರೀತಿ ಕಡೆಗಣಿಸಿರುವ ಇತಿಹಾಸ ಇರಲಿಲ್ಲ. ಹಿಂದೆ ವಾಜಪೇಯಿ, ಮನಮೋಹನ್ ಸಿಂಗ್, ರಾಜೀವ್ ಗಾಂಧಿ ಯಾರೂ ಈ ರೀತಿಯಾಗಿ ಮುಖ್ಯಮಂತ್ರಿಗಳನ್ನು ನಡೆಸಿಕೊಂಡಿರಲಿಲ್ಲ. ಪ್ರಧಾನಿ ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನ ಕಡೆಗಣಿಸುತ್ತಿದ್ದಾರೆ. ಆ ರಾಜ್ಯಗಳು ಅಭಿವೃದ್ಧಿ ಹೊಂದಬಾರದು, ಅನುದಾನ ಸಿಗಬಾರದು ಎಂಬ ಮನಸ್ಥಿತಿ ಇದ್ದಂತೆ ಕಾಣುತ್ತಿದೆ ಎಂದರು.
ಮೋದಿ ಭೇಟಿಯಾಗಿ ವಿಶೇಷ ಉಡುಗೊರೆ ನೀಡಿದ್ದ ಸಿದ್ದರಾಮಯ್ಯ
ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಆಗಸ್ಟ್ 3 ರಂದು ಮೊದಲ ಬಾರಿ ಮೋದಿ ಅವರನ್ನು ಭೇಟಿಯಾಗಿದ್ದರು. ತಮ್ಮ ಜನ್ಮದಿನದಂದೇ ಸಿದ್ದರಾಮಯ್ಯ ಅವರು ಭೇಟಿಯಾಗಿದ್ದರು. ಈ ವೇಳೆ ಪ್ರಧಾನಿಗೆ ವಿಶೇಷ ಉಡುಗೊರೆಯಾಗಿ ಆನೆಯ ಅಂಬಾರಿ ಹೊತ್ತಿರುವ ಕೆತ್ತನೆಯ ಆಕೃತಿಯನ್ನು ನೀಡಿದ್ದರು. ಮೈಸೂರು ಪೇಟ, ಶಾಲು ಹಾಕಿ ಸನ್ಮಾನಿಸಿದ್ದರು.
ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಸಿದ್ದರಾಮಯ್ಯ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಇವರಿಗೂ ಅದೇ ರೀತಿಯ ಉಡುಗೊರೆ ನೀಡಿದ್ದ ಸಿದ್ದರಾಮಯ್ಯ, ಮೈಸೂರು ದಸರಾ ಉತ್ಸವದಲ್ಲಿ ಏರ್ಶೋ ಆಯೋಜಿಸಲು ಮನವಿ ಮಾಡಿದ್ದರು. ಬಳಿಕ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:36 am, Mon, 18 December 23